Back to Top

ಕಿಚ್ಚ ಸುದೀಪ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಅಭಿಮಾನಿಗಳಿಗೆ ‘ಮಾರ್ಕ್’ ಸರ್ಪ್ರೈಸ್!

SSTV Profile Logo SStv September 2, 2025
ಸುದೀಪ್ 47ನೇ ಸಿನಿಮಾ ಹೆಸರು ‘ಮಾರ್ಕ್’
ಸುದೀಪ್ 47ನೇ ಸಿನಿಮಾ ಹೆಸರು ‘ಮಾರ್ಕ್’

ಕನ್ನಡ ಸಿನಿರಂಗದ ಬಾದ್‌ ಷಾ ಕಿಚ್ಚ ಸುದೀಪ್ ತಮ್ಮ 52ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಅಭಿಮಾನಿಗಳಿಗೆ ದೊಡ್ಡ ಗಿಫ್ಟ್ ನೀಡಿದ್ದಾರೆ. ಬಹಳ ದಿನಗಳಿಂದ ‘K47’ ಹೆಸರಿನಲ್ಲಿ ಚಿತ್ರೀಕರಣವಾಗುತ್ತಿದ್ದ ಸಿನಿಮಾಗೆ ಈಗ ಅಧಿಕೃತವಾಗಿ ‘ಮಾರ್ಕ್ (MARK)’ ಎಂದು ಟೈಟಲ್ ಫಿಕ್ಸ್ ಆಗಿದೆ. ಸುದೀಪ್ ಅಭಿನಯದ ಮಾರ್ಕ್ ಸಿನಿಮಾ ಈ ಡಿಸೆಂಬರ್ 25ಕ್ಕೆ ಬಿಡುಗಡೆಯಾಗಲಿದೆ. ಕಳೆದ ವರ್ಷ ಇದೇ ದಿನ ತೆರೆಕಂಡ ಮ್ಯಾಕ್ಸ್ ಚಿತ್ರ ಭಾರೀ ಯಶಸ್ಸು ಕಂಡಿತ್ತು. ಅದೇ ರೀತಿ ಈ ಬಾರಿ ಕೂಡ ಕ್ರಿಸ್‌ಮಸ್‌ಗೆ ಅಭಿಮಾನಿಗಳಿಗೆ ಸುದೀಪ್ ಸಿನಿಮಾ ಸಿಗಲಿದೆ.

ಇದೇ ಸಂದರ್ಭದಲ್ಲಿ ದರ್ಶನ್ ಅಭಿನಯದ ‘ಡೆವಿಲ್’ ಸಿನಿಮಾ ಕೂಡ ಬಿಡುಗಡೆಯಾಗುತ್ತಿರುವುದರಿಂದ, ಎರಡೂ ಸಿನಿಮಾಗಳು ಒಂದೇ ಸಮಯದಲ್ಲಿ ರಂಗ ಪ್ರವೇಶಿಸಲಿವೆ. ಆದರೆ, ಸುದೀಪ್ ಈ ವಿಷಯದಲ್ಲಿ ಸ್ಪಷ್ಟನೆ ನೀಡಿದ್ದು“ಡೆವಿಲ್’ಗೂ ಒಳ್ಳೆಯದಾಗಲಿ. ಇದು ಕ್ಲ್ಯಾಶ್ ಅಲ್ಲ. ಅವರು ತಮ್ಮ ಪಾಡಿಗೆ ಬರ್ತಾರೆ, ನಾವು ನಮ್ಮ ಪಾಡಿಗೆ ಬರುತ್ತೇವೆ” ಎಂದು ಹೇಳಿದ್ದಾರೆ.

ಹೊಸದಾಗಿ ಬಿಡುಗಡೆಯಾದ ಮಾರ್ಕ್ ಟೈಟಲ್ ಟೀಸರ್‌ನಲ್ಲಿ ಕಿಚ್ಚ ಸುದೀಪ್ ಖದರ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದು, ಅಭಿಮಾನಿಗಳ ಸಂಭ್ರಮ ತುದಿಗೇರುತ್ತಿದೆ. ಈ ಸಿನಿಮಾ ಮ್ಯಾಕ್ಸ್ ತಂಡದ ಜೊತೆಗಿನ ಎರಡನೇ ಪ್ರಯೋಗವಾಗಿದ್ದು, ವಿಜಯ್ ಕಾರ್ತಿಕೇಯ ನಿರ್ದೇಶನದಲ್ಲಿ ಮೂಡಿಬರುತ್ತಿದೆ.

ಅಭಿಮಾನಿಗಳ ಜೊತೆ ಹುಟ್ಟುಹಬ್ಬ, ಮನೆಯ ಮುಂದೆ ಜಾಗದ ಸಮಸ್ಯೆಯಿಂದಾಗಿ, ಈ ಬಾರಿ ಕೂಡ ಸುದೀಪ್ ತಮ್ಮ ಅಭಿಮಾನಿಗಳನ್ನು ಬೆಂಗಳೂರು ನಾಯಂಡಹಳ್ಳಿ ನಂದಿಲಿಂಕ್ಸ್ ಗ್ರೌಂಡ್ನಲ್ಲಿ ಭೇಟಿಯಾದರು. ರಾತ್ರಿ ಮಧ್ಯರಾತ್ರಿ ಕೇಕ್ ಕತ್ತರಿಸಿ ಅಭಿಮಾನಿಗಳೊಂದಿಗೆ ಸಂಭ್ರಮ ಹಂಚಿಕೊಂಡರು. ಸುದ್ದಿಗೋಷ್ಠಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸುದೀಪ್ ರಾಜಕೀಯ ಪ್ರವೇಶದ ಬಗ್ಗೆ ತಾನೇನೂ ಯೋಚನೆ ಮಾಡಿಲ್ಲವೆಂದು ಹೇಳಿದ್ದಾರೆ. ದರ್ಶನ್ ಜೊತೆಗಿನ ಸಂಬಂಧದ ಬಗ್ಗೆ ಕೇಳಿದ ಪ್ರಶ್ನೆಗೆ “ಸದ್ಯದ ದರ್ಶನ್ ಸ್ಥಿತಿ ಬೇಸರದ ಸಂಗತಿ. ಆದರೆ, ಕಾನೂನು ವಿಷಯದಲ್ಲಿ ನಾನು ಮಾತನಾಡಿದರೆ ಅದು ತಪ್ಪಾಗುತ್ತದೆ. ಅವರ ಅಭಿಮಾನಿಗಳ ನಂಬಿಕೆಗೆ ಧಕ್ಕೆಯಾಗುತ್ತದೆ. ಆದ್ದರಿಂದ ನಾನು ಮೌನವಾಗಿರುವುದು ಉತ್ತಮ” ಎಂದು ಮಾರ್ಮಿಕ ಉತ್ತರ ನೀಡಿದ್ದಾರೆ.

ಒಟ್ಟಿನಲ್ಲಿ, ಹುಟ್ಟುಹಬ್ಬದ ಸಂಭ್ರಮದಲ್ಲೇ ಕಿಚ್ಚ ಸುದೀಪ್ ಅಭಿಮಾನಿಗಳಿಗೆ ‘ಮಾರ್ಕ್’ ಸಿನಿಮಾ ಟೈಟಲ್ ಟೀಸರ್ ಸರ್ಪ್ರೈಸ್ ಕೊಟ್ಟು, ಮತ್ತೊಮ್ಮೆ ತಮ್ಮ ಬಾದ್‌ ಷಾ ಸ್ಥಾನಮಾನವನ್ನು ದೃಢಪಡಿಸಿದ್ದಾರೆ.