Back to Top

ಟ್ರೋಲ್‌ಗಳ ಅಟ್ಟಹಾಸ: ದರ್ಶನ್ ತಾಯಿ ಮೀನಾ ತೂಗುದೀಪ ಹಾಗೂ ಸುದೀಪ್ ತಾಯಿ ಸರೋಜಮ್ಮ ವಿರುದ್ಧ ಕೆಟ್ಟ ಕಾಮೆಂಟ್!

SSTV Profile Logo SStv September 10, 2025
ಸ್ಟಾರ್ ನಟರ ಕುಟುಂಬಗಳನ್ನೇ ಗುರಿ ಮಾಡಿಕೊಂಡ ಟ್ರೋಲ್‌ಗಳು
ಸ್ಟಾರ್ ನಟರ ಕುಟುಂಬಗಳನ್ನೇ ಗುರಿ ಮಾಡಿಕೊಂಡ ಟ್ರೋಲ್‌ಗಳು

ಸೋಶಿಯಲ್ ಮೀಡಿಯಾ ಬಳಕೆ ಇಂದು ಎಲ್ಲರ ಜೀವನದ ಅವಿಭಾಜ್ಯ ಅಂಗವಾಗಿದೆ. ಆದರೆ, ಅದೇ ವೇದಿಕೆ ಹಲವಾರು ಬಾರಿ ನಿಂದನೆ, ಅವಹೇಳನ ಮತ್ತು ಕೀಳುಮಟ್ಟದ ಕಾಮೆಂಟ್‌ಗಳ ಕೇಂದ್ರವಾಗುತ್ತಿದೆ. ಫೇಕ್ ಅಕೌಂಟ್‌ಗಳ ಮೂಲಕ ಟ್ರೋಲ್‌ಗಳು ಮಾಡುವ ಕೃತ್ಯಗಳು ಸ್ಟಾರ್ ನಟರಷ್ಟೇ ಅಲ್ಲ, ಅವರ ಕುಟುಂಬಗಳಿಗೂ ತಲುಪಿವೆ.

ಇತ್ತೀಚೆಗೆ ನಟ ದರ್ಶನ್ ತಾಯಿ ಮೀನಾ ತೂಗುದೀಪ ಹಾಗೂ ನಟ ಸುದೀಪ್ ತಾಯಿ ದಿವಂಗತ ಸರೋಜಮ್ಮ ಅವರ ಬಗ್ಗೆ ಕೀಳುಮಟ್ಟದ ಕಾಮೆಂಟ್‌ಗಳು ಹರಿದಾಡಿವೆ. ಒಬ್ಬರನ್ನು ಕೆಣಕುವ ಪೋಸ್ಟ್, ಅದಕ್ಕೆ ಪ್ರತಿಯಾಗಿ ಮತ್ತೊಬ್ಬರ ಅವಹೇಳನ – ಹೀಗೆ ಅಭಿಮಾನಿಗಳ ನಡುವೆ ಕೆಸರೆರಚಾಟ ನಡೆಯುತ್ತಿದೆ.

ಅಭಿಮಾನಿಗಳ ಸಂಘರ್ಷ: ಮೊದಲು ಬೀದಿಗಳಲ್ಲಿ, ಈಗ ಸೋಶಿಯಲ್ ಮೀಡಿಯಾದಲ್ಲಿ, ಹಿಂದೆ ಅಭಿಮಾನಿಗಳ ಸಂಘರ್ಷ ಥಿಯೇಟರ್‌ಗಳ ಮುಂದೆ ಪೋಸ್ಟರ್ ಹರಿದು, ಘೋಷಣೆ ಕೂಗಿ, ಕೆಲವೊಮ್ಮೆ ಕೈ ಕೈ ಮಿಲಾಯಿಸುವ ಹಂತ ತಲುಪುತ್ತಿತ್ತು. ಆದರೆ ಈಗ ಈ ಸಂಘರ್ಷ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಅಟ್ಟಹಾಸ ಮಾಡುತ್ತಿದೆ. ಒಂದು ಫೇಕ್ ಅಕೌಂಟ್ ಮುಚ್ಚಿದರೆ ಮತ್ತೊಂದು ಅಕೌಂಟ್ ತೆರೆಯಲಾಗುತ್ತಿದೆ. ಇದರ ಪರಿಣಾಮವಾಗಿ ಟ್ರೋಲ್‌ಗಳ ಅಟ್ಟಹಾಸಕ್ಕೆ ಬ್ರೇಕ್ ಹಾಕುವುದು ಕಷ್ಟವಾಗಿದೆ.

ಸ್ಟಾರ್ ನಟರನ್ನು ಮಾತ್ರವಲ್ಲದೆ ಅವರ ಕುಟುಂಬ ಸದಸ್ಯರ ಹೆಸರನ್ನೂ ಬಳಸಿ ಅವಹೇಳನ ಮಾಡುವುದೇ ಇದೀಗ ಹೊಸ ಟ್ರೆಂಡ್. ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರ ವಿರುದ್ಧವೂ ಕೆಲ ವರ್ಷಗಳ ಹಿಂದೆ ಇದೇ ರೀತಿ ಅವಹೇಳನಕಾರಿ ಪೋಸ್ಟ್‌ಗಳು ಹರಿದಾಡಿದ್ದವು. ಮಹಿಳಾ ಆಯೋಗಕ್ಕೂ ದೂರು ಹೋಗಿ, ಪೊಲೀಸರು ತನಿಖೆ ಕೈಗೊಂಡಿದ್ದರು. ಆದರೆ ವಿಜಯಲಕ್ಷ್ಮಿ ವಿಚಾರದಲ್ಲಿ ಹೆಚ್ಚು ತಲೆಕೆಡಿಸಿಕೊಳ್ಳದೆ ಬದಿಗಟ್ಟಿದ್ರು.

ಸುದೀಪ್ ಮನವಿ: “ಅಭಿಮಾನಿಗಳು ಪ್ರತಿಕ್ರಿಯಿಸಬೇಡಿ” ಇತ್ತೀಚೆಗೆ ಅಭಿಮಾನಿಗಳೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡ ನಟ ಸುದೀಪ್, ತಮ್ಮ ಅಭಿಮಾನಿಗಳಿಗೆ ಮನವಿ ಮಾಡಿದರು: "ಆನ್ಲೈನ್‌ನಲ್ಲಿ ಎಷ್ಟು ಬೈದರೂ ನೀವು ಪ್ರತಿಕ್ರಿಯಿಸಬೇಡಿ. ನಮ್ಮ ಅಫೀಷಿಯಲ್ ಫ್ಯಾನ್ ಪೇಜ್‌ಗಳಿಂದ ಯಾವ ಕಲಾವಿದರಿಗೂ ಅವಮಾನ ಮಾಡಬೇಡಿ. ಯಾವ ಅವಮಾನಕ್ಕೂ ತಲೆಕೆಡಿಸಿಕೊಳ್ಳಬೇಡಿ. ನಮ್ಮ ಸಿನಿಮಾ ನಮ್ಮ ಆಸ್ತಿ."

ಸೈಬರ್ ಕ್ರೈಂ ಪೊಲೀಸರು ಕ್ರಮ ಕೈಗೊಂಡರೂ, ಫೇಕ್ ಅಕೌಂಟ್‌ಗಳ ಹುಚ್ಚಾಟ ನಿಲ್ಲುತ್ತಿಲ್ಲ. ನಟರ ವಿರುದ್ಧ ನಡೆಯುತ್ತಿರುವ ಈ ಕೀಳುಮಟ್ಟದ ಟ್ರೋಲ್‌ಗಳ ಸಂಸ್ಕೃತಿ, ಅಭಿಮಾನಿಗಳ ನಡುವಿನ ಅಸಹಿಷ್ಣುತೆಯನ್ನು ಹೆಚ್ಚಿಸುತ್ತಿದೆ. ಟ್ರೋಲ್‌ಗಳ ಆಟವನ್ನು ಬಿಟ್ಟು, ಸಿನಿಮಾ ಪ್ರೀತಿ ಮತ್ತು ಅಭಿಮಾನವನ್ನು ಒಳ್ಳೆಯ ದಾರಿಗೆ ಕೊಂಡೊಯ್ಯುವುದು ಅಭಿಮಾನಿಗಳ ಹೊಣೆಗಾರಿಕೆ ಎಂದು ತಜ್ಞರು ಸಲಹೆ ನೀಡುತ್ತಿದ್ದಾರೆ.