Back to Top

“ತಲೆ ತಗ್ಗಿಸುವಂತಹ ಕೆಲಸ ಮಾಡುತ್ತೇನೋ ಅವತ್ತು ನಾನು ಬದುಕಿರೋದಿಲ್ಲ” – ಎಸ್. ನಾರಾಯಣ್ ಭಾವನಾತ್ಮಕ ಪ್ರತಿಕ್ರಿಯೆ

SSTV Profile Logo SStv September 15, 2025
ಸೊಸೆಯ ವರ್ತನೆಗೆ ಕಿಡಿಕಾರಿದ ಕಲಾ ಸಾಮ್ರಾಟ್ ಎಸ್. ನಾರಾಯಣ್
ಸೊಸೆಯ ವರ್ತನೆಗೆ ಕಿಡಿಕಾರಿದ ಕಲಾ ಸಾಮ್ರಾಟ್ ಎಸ್. ನಾರಾಯಣ್

ಕನ್ನಡ ಚಿತ್ರರಂಗದಲ್ಲಿ ಕಲಾ ಸಾಮ್ರಾಟ್ ಎಂದು ಖ್ಯಾತಿ ಪಡೆದಿರುವ ನಿರ್ದೇಶಕ ಎಸ್. ನಾರಾಯಣ್ ಇತ್ತೀಚೆಗೆ ತಮ್ಮ ವೈಯಕ್ತಿಕ ಬದುಕಿನ ಕಾರಣದಿಂದ ಸುದ್ದಿಯಲ್ಲಿದ್ದಾರೆ. ಪುತ್ರ ಪವನ್ ಅವರ ಪತ್ನಿ ಪವಿತ್ರಾ ಅವರು ವರದಕ್ಷಿಣೆ ಕೇಸ್ ದಾಖಲಿಸಿದ್ದು, ಪ್ರಕರಣ ಈಗ ಕೋರ್ಟ್ ಮೆಟ್ಟಿಲೇರಿದೆ. ಶಿಸ್ತಿಗೆ ಹೆಸರಾಗಿರುವ ಈ ನಿರ್ದೇಶಕರ ವಿರುದ್ಧ ಕುಟುಂಬ ಕಲಹ ಹೊರಬಿದ್ದಿದ್ದು, ಅಭಿಮಾನಿಗಳಿಗೂ, ಚಿತ್ರರಂಗದ ವಲಯಕ್ಕೂ ದೊಡ್ಡ ಶಾಕ್ ಆಗಿದೆ.

ಪವಿತ್ರಾ ಅವರು ತಮ್ಮ ಪತಿ ಪವನ್, ಅತ್ತೆ ಭಾಗ್ಯವತಿ ಹಾಗೂ ಮಾವ ಎಸ್. ನಾರಾಯಣ್ ವಿರುದ್ಧ ದೂರು ದಾಖಲಿಸಿದ್ದು, ಪ್ರಕರಣ ಜ್ಞಾನಭಾರತಿ ಪೊಲೀಸ್ ಠಾಣೆಗೆ ತಲುಪಿದೆ. ಈ ಪ್ರಕರಣದ ಬಗ್ಗೆ ಮಾತನಾಡಿರುವ ನಾರಾಯಣ್, “ನಾನು ಕಾನೂನು ಹೋರಾಟ ನಡೆಸುತ್ತೇನೆ” ಎಂದು ಸ್ಪಷ್ಟಪಡಿಸಿದ್ದಾರೆ. “ಕುಟುಂಬದ ಸಾರಥಿ ಪಂಕ್ಚರ್ ಮಾಡಬಾರದು” ಸಮಾಜದ ಬದಲಾವಣೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ನಾರಾಯಣ್.

“ಲವ್ ಮ್ಯಾರೇಜ್ ಮಾಡಿಕೊಂಡವರು ಗಂಡನನ್ನಾಗಲಿ, ಅವನಿಗೆ ಜನ್ಮ ಕೊಟ್ಟವರನ್ನಾಗಲಿ ಬಿಟ್ಟುಬಿಡಬಾರದು. ಕುಟುಂಬದ ಸಾರಥಿಯಾಗಿದ್ದವಳು ಟೈರ್ ಪಂಕ್ಚರ್ ಮಾಡುವವಳಲ್ಲ, ಅದನ್ನು ಸರಿಪಡಿಸಿ ಮುಂದಕ್ಕೆ ಕೊಂಡೊಯ್ಯುವವಳು ಆಗಿರಬೇಕು” ಎಂದು ಹೇಳಿದ್ದಾರೆ. ಅವರ ಮಾತಿನ ಪ್ರಕಾರ, ಪವಿತ್ರಾ ಮನೆಯವರ ಕಾಳಜಿ ತೆಗೆದುಕೊಳ್ಳಲಿಲ್ಲ. “ಅತ್ತೆ, ಮಾವ, ಅವರ ವಯಸ್ಸಿನ ಬಗ್ಗೆ ಕಾಳಜಿ ಇರಲಿಲ್ಲ. ನಮ್ಮ ಮನೆ ಒಲೆಯ ಹತ್ತಿರ ಕೂಡ ಬಂದಿಲ್ಲ. ದೇವರ ಮನೆಗೂ ಬಂದಿಲ್ಲ. ಒಂದು ಲೋಟ ನೀರು ಕೂಡ ನನಗೆ ಕೊಟ್ಟಿಲ್ಲ” ಎಂದು ಭಾವೋದ್ರಿಕ್ತವಾಗಿ ಹೇಳಿದ್ದಾರೆ.

ಇಂದಿನ ಗೃಹಿಣಿಯರ ಬಗ್ಗೆ ಮಾತನಾಡಿದ ಅವರು, “ಇವತ್ತು ಮದುವೆಯಾದ ಹೆಂಗಸಿನ ಕುತ್ತಿಗೆಯಲ್ಲಿ ತಾಳಿ ಇಲ್ಲ, ಕಾಲುಂಗುರ ಇಲ್ಲ. ತಾಳಿಯನ್ನು ಕೇವಲ ಫಂಕ್ಷನ್‌ಗಳಿಗೆ ಹಾಕುತ್ತಾರೆ. ನಮ್ಮ ಪೂರ್ವಿಕರು ಇವೆಲ್ಲವನ್ನು ಸುಮ್ಮನೆ ಮಾಡಿಲ್ಲ” ಎಂದು ಪರಂಪರೆಯ ಮಹತ್ವವನ್ನು ನೆನಪಿಸಿದ್ದಾರೆ. ನಾರಾಯಣ್ ಪ್ರಕಾರ, ಪವಿತ್ರಾ ವಿರುದ್ಧದ ದೂರುಗಳನ್ನು 7 ತಿಂಗಳ ಹಿಂದೆಯೇ ಕುಟುಂಬವೇ ಪೊಲೀಸರಿಗೆ ನೀಡಿತ್ತು. “ಅವಳು ಗಂಡನನ್ನು ಬಿಟ್ಟು ಬಾಳಲಾರದೆ ಹೋದಳು. ಮನೆಯಲ್ಲಿ ಬುದ್ಧಿ ಹೇಳಿದರೆ ಕೂಗಾಡುತ್ತಾಳೆ ಎಂದು ಕುಟುಂಬದವರು ದೂರಿದ್ದರು” ಎಂದು ತಿಳಿಸಿದ್ದಾರೆ. 

“ನಾನು ಸಮಾಜದ ಮುಂದೆ ತಲೆ ತಗ್ಗಿಸುವಂತಹ ಕೆಲಸ ಮಾಡುತ್ತೇನೋ, ಆ ದಿನ ನಾನು ಬದುಕಿರೋದಿಲ್ಲ. ನಾನು ಅಂತಹ ವ್ಯಕ್ತಿ. ನನ್ನ ಜೀವನ ಧರ್ಮದ ಹಾದಿಯಲ್ಲೇ ಸಾಗುತ್ತಿದೆ” ಎಂದು ನಾರಾಯಣ್ ಮನಕಲಕುವ ಹೇಳಿಕೆ ನೀಡಿದ್ದಾರೆ.

ಈ ಪ್ರಕರಣದ ಬೆಳವಣಿಗೆ ಈಗ ಕೋರ್ಟ್‌ನಲ್ಲಿ ಮುಂದುವರಿಯಲಿದ್ದು, ನಾರಾಯಣ್ ಮತ್ತು ಅವರ ಕುಟುಂಬದ ಭವಿಷ್ಯ ಕಾನೂನು ಹಾದಿಯಲ್ಲೇ ನಿರ್ಧಾರವಾಗಬೇಕಾಗಿದೆ. ಚಿತ್ರರಂಗದಲ್ಲಿ ಶಿಸ್ತಿಗೆ ಮಾದರಿಯಾಗಿದ್ದ ನಿರ್ದೇಶಕರ ಮನೆತನದಲ್ಲಿ ಇಂತಹ ಕಲಹ ಬಯಲಾಗಿರುವುದು ಅಭಿಮಾನಿಗಳಿಗೆ ನೋವು ತಂದಿದೆ.