ಬಿಗ್ ಬಾಸ್ ವಿನ್ನರ್ ಹನುಮಂತ ಹೊಸ ಲುಕ್ನಲ್ಲಿ ಮಿಂಚಿದ "ಪಾತ್ರಧಾರಿ" ಹಾಡಿನ ಪ್ರೋಮೋ


ಕಿರುತೆರೆ ಪ್ರೇಕ್ಷಕರ ಮನಸ್ಸನ್ನು ಗೆದ್ದಿರುವ ಸರಿಗಮಪ ಸಿಂಗರ್ ಮತ್ತು ಬಿಗ್ ಬಾಸ್ ವಿನ್ನರ್ ಹನುಮಂತ ಲಮಾಣಿ, ಇದೀಗ ಮತ್ತೊಂದು ಹೊಸ ಅಚ್ಚರಿ ನೀಡಿದ್ದಾರೆ. ತಮ್ಮದೇ ಯೂಟ್ಯೂಬ್ ಚಾನೆಲ್ ಆರಂಭಿಸಿ, ಅದರಲ್ಲಿ ತಾವು ಹಾಡಿದ ಹೊಸ ಆಲ್ಬಂ ಸಾಂಗ್ "ಪಾತ್ರಧಾರಿ" ಹಾಡಿನ ಪ್ರೋಮೋವನ್ನು ಬಿಡುಗಡೆ ಮಾಡಿದ್ದಾರೆ.
ಚಿಲ್ಲೂರು ಬಡ್ನಿ ತಾಂಡಾದ ಈ "ಲುಂಗಿ ಬಾಯ್" ತನ್ನ ಸರಳತೆಯಿಂದ, ಮುಗ್ಧತೆಯಿಂದ, ಹಾಗೂ ಜಾನಪದ ಗೀತೆಗಳ ಪ್ರೀತಿಯಿಂದಲೇ ಜನಮನಗಳನ್ನು ಗೆದ್ದಿದ್ದಾರೆ. ಸಂಗೀತವನ್ನು ಯಾವುದೇ ಶಾಸ್ತ್ರೀಯ ತರಬೇತಿ ಪಡೆಯದೆ, ಭಜನೆ ಹಾಗೂ ಜನಪದ ಗೀತೆಗಳ ಮೂಲಕ ಸರಸ್ವತಿಯ ಕೃಪೆ ಪಡೆದಿದ್ದಾರೆ. ಹೀಗಾಗಿ ಅವರ ಪ್ರತಿಯೊಂದು ಹಾಡು ಜನರಿಗೆ ಹತ್ತಿರವಾಗುತ್ತದೆ, ಹೃದಯವನ್ನು ಮುಟ್ಟುತ್ತದೆ.
"ಪಾತ್ರಧಾರಿ ನಾವೆಲ್ಲ, ಸೂತ್ರಧಾರಿ ಶಿವಮೇಲು" ಎನ್ನುವ ಈ ಹಾಡಿನ ಪ್ರೋಮೋದಲ್ಲಿ ಹನುಮಂತ ಹೊಸ ಲುಕ್ನಲ್ಲಿ ಮಿಂಚಿದ್ದಾರೆ. ಹಣಗೆ ವಿಭೂತಿ ಹಚ್ಚಿಕೊಂಡು ಶಿವಲಿಂಗ ಪೂಜೆ ಮಾಡುವ ದೃಶ್ಯಗಳಲ್ಲಿ ಹನುಮಂತ ಕಾಣಿಸಿಕೊಂಡಿದ್ದಾರೆ. ಜನಪದ ಶೈಲಿಗೆ ಆಧುನಿಕ ಚಿತ್ರಣವನ್ನು ಸೇರಿಸಿಕೊಂಡಿರುವ ಈ ಪ್ರೋಮೋ ಈಗಾಗಲೇ ಅಭಿಮಾನಿಗಳಲ್ಲಿ ಕುತೂಹಲ ಹುಟ್ಟಿಸಿದೆ.
ಹನುಮಂತನ ಈ ಹೊಸ ಪ್ರಯತ್ನವನ್ನು ಅಭಿಮಾನಿಗಳು ಹೃತ್ಪೂರ್ವಕವಾಗಿ ಸ್ವಾಗತಿಸಿದ್ದಾರೆ. "ಬಹಳ ಚೆನ್ನಾಗಿದೆ", "ಫುಲ್ ಸಾಂಗ್ ಬೇಗ ಬರಲಿ" ಎಂದು ಪ್ರತಿಕ್ರಿಯಿಸುತ್ತಿದ್ದಾರೆ. ಬಿಗ್ ಬಾಸ್ ಮನೆಗೆ ಹೋಗುವ ಮೊದಲು ಹನುಮಂತ ಸರಿಗಮಪ ಮೂಲಕ ಜನಪ್ರಿಯತೆ ಪಡೆದಿದ್ದರೆ, ಈಗ ಆ ಅಭಿಮಾನಿ ಬಳಗವನ್ನು ತಮ್ಮ ಯೂಟ್ಯೂಬ್ ಮೂಲಕ ಮತ್ತಷ್ಟು ಬಲಪಡಿಸಿಕೊಳ್ಳುತ್ತಿದ್ದಾರೆ.
ಬಿಗ್ ಬಾಸ್ ಮುಗಿದ ನಂತರ "ಬಾಯ್ಸ್ ವರ್ಸಸ್ ಗರ್ಲ್ಸ್" ಶೋನಲ್ಲಿ ಕಾಣಿಸಿಕೊಂಡಿದ್ದ ಹನುಮಂತ, ಆ ಬಳಿಕ ಏನು ಮಾಡ್ತಿದ್ದಾರೆ ಅನ್ನೋದು ಅಭಿಮಾನಿಗಳಿಗೆ ಗೊತ್ತಿರಲಿಲ್ಲ. ಆದರೆ ಇದೀಗ ತಮ್ಮದೇ ಆಲ್ಬಂ ಮೂಲಕ ಹೊಸ ಹಾದಿ ಹಿಡಿದಿದ್ದಾರೆ. ಈ ಪ್ರಯತ್ನ ಅವರಿಗೊಂದು ದೊಡ್ಡ ಮುನ್ನಡೆ ನೀಡುವುದು ಖಚಿತ.
ಹನುಮಂತನ ಅಭಿಮಾನಿಗಳು ಈಗ "ಪಾತ್ರಧಾರಿ" ಹಾಡಿನ ಫುಲ್ ವರ್ಶನ್ಗಾಗಿ ಕಾಯುತ್ತಿದ್ದಾರೆ. ಜನಪದದ ಮಣ್ಣಿನ ವಾಸನೆ, ಹನುಮಂತನ ಸ್ವರ, ಹಾಗೂ ಭಕ್ತಿಯ ತಾತ್ಪರ್ಯ ಒಂದೇ ಗಾತ್ರದಲ್ಲಿ ಸೇರಿರುವ ಈ ಹಾಡು ದೊಡ್ಡ ಹಿಟ್ ಆಗಲಿದೆ ಎಂಬ ನಿರೀಕ್ಷೆ ಇದೆ.