‘ಹೂವಿನ ಬಾಣದಂತೆ’ ಹಾಡಿ ರಾತ್ರೋರಾತ್ರಿ ವೈರಲ್ ಆದ ನಿತ್ಯಾಶ್ರೀ – "ಯಶ್ ಜೊತೆಗೆ ಆಕ್ಟ್ ಮಾಡಬೇಕು, ಒಂದು ಅವಕಾಶ ಕೊಡಿ"


‘ಹೂವಿನ ಬಾಣದಂತೆ’ ಹಾಡನ್ನು ಹಾಡಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಈ ಚೆಲುವೆ, ಸದ್ಯ ಕನ್ನಡಿಗರ ಮನಸೂರೆಗೊಂಡಿದ್ದಾಳೆ. ಕೆ.ಆರ್.ಪೇಟೆ ಮಚಿಲೆಕೊಪ್ಪಲು ಗ್ರಾಮದ ಈ ಬೆಡಗಿ, ಮಹಾರಾಣಿ ಕಾಮರ್ಸ್ ಕಾಲೇಜ್‌ನಲ್ಲಿ ಬಿಬಿಎ ವ್ಯಾಸಂಗ ಮಾಡುತ್ತಿದ್ದಾಳೆ. ಕೆಲವೇ ದಿನಗಳ ಹಿಂದೆ ಸುಮ್ಮನೆ ಹಾಡಿದ ಹಾಡು ಇಂದು ಲಕ್ಷಾಂತರ ಮೊಬೈಲ್‌ಗಳಲ್ಲಿ ರಿಂಗಣಿಸುತ್ತಿದೆ.
ಒಂದೇ ಹಾಡಿನಿಂದ ಜನಪ್ರಿಯತೆ ಪಡೆದ ನಿತ್ಯಾಶ್ರೀ, ಈಗಾಗಲೇ 36,000 ಕ್ಕೂ ಹೆಚ್ಚು ಇನ್‌ಸ್ಟಾಗ್ರಾಂ ಫಾಲೋವರ್‌ಗಳನ್ನು ಗಳಿಸಿದ್ದಾಳೆ. ಹಿಂಬಾಲಕರ ಈ ಏರಿಕೆ ಅವಳ ಖ್ಯಾತಿಯ ಹೊಸ ಅಧ್ಯಾಯವಾಗಿದೆ. "ಮುನ್ಸೂಚನೆ ಇಲ್ಲದೆ ಬಂದ ಈ ಜನಪ್ರಿಯತೆ ನನಗೆ ಖುಷಿ ಕೊಟ್ಟಿದೆ. ಇನ್ನು ಮುಂದೆ ಮತ್ತಷ್ಟು ಎತ್ತರಕ್ಕೆ ಹೋಗಬೇಕೆನ್ನಿಸುವಂತೆ ಮಾಡಿದೆ" ಎಂದು ನಿತ್ಯಾಶ್ರೀ ಹೇಳಿದ್ದಾರೆ.
ಮಾಧ್ಯಮಗಳಿಗೆ ಸಂದರ್ಶನ ನೀಡುತ್ತಿರುವ ನಿತ್ಯಾಶ್ರೀ, ತಾನು ನಟಿಯಾಗಬೇಕೆಂಬ ಕನಸನ್ನು ಹಂಚಿಕೊಂಡಿದ್ದಾಳೆ. "ನಟಿಯಾಗಬೇಕು ಅನ್ನುವುದು ನನ್ನ ಜೀವಮಾನದ ಬಹುದೊಡ್ಡ ಕನಸು. ಯಾವ ಪಾತ್ರವಾದರೂ ಒಪ್ಪುತ್ತೇನೆ. ಸೈಡ್ ರೋಲ್ ಆದರೂ ಪರವಾಗಿಲ್ಲ. ಆದರೆ ನನಗೆ ಯಶ್ ಸರ್ ಜೊತೆಗೆ ತೆರೆ ಹಂಚಿಕೊಳ್ಳಬೇಕೆಂಬ ಆಸೆ ಇದೆ" ಎಂದು ಹೇಳಿದ್ದಾಳೆ.
ಇತ್ತೀಚೆಗೆ ಜನರು ನಿತ್ಯಾಶ್ರೀಯನ್ನು ಗುರುತಿಸುತ್ತಾರೆ. "ನೀನೇ ಅಲ್ವಾ ಆ ಹಾಡು ಹಾಡಿದ್ದು?" ಎಂದು ಕೇಳಿ ಸೆಲ್ಫಿ ತೆಗೆಯುತ್ತಾರೆ. ಇದು ನನಗೆ ಹೆಮ್ಮೆ ಕೊಡುತ್ತದೆ ಎಂದು ಅವಳು ಹೇಳಿದ್ದಾಳೆ. ಸೋಶಿಯಲ್ ಮೀಡಿಯಾದಲ್ಲಿ ತಮಾಷೆಗಾಗಿ ಹಾಕಿದ ಹಾಡು ಅವಳ ಬದುಕನ್ನೇ ಬದಲಿಸಿದೆ. ಈಗ ನಿತ್ಯಾಶ್ರೀಗೆ ಚಿತ್ರರಂಗದ ಒಲವಿದೆ. “ನನಗೆ ಆಕ್ಟಿಂಗ್ ತುಂಬ ಇಷ್ಟ. ಎಲ್ಲರಿಗೂ ಅವಕಾಶ ಕೊಟ್ಟಿದ್ದೀರಾ, ಹಾಗಾದರೆ ನನಗೂ ಒಂದು ಅವಕಾಶ ಕೊಡಿ” ನಿತ್ಯಾಶ್ರೀ
ಹೀಗೆ ಸಾಮಾನ್ಯ ಗ್ರಾಮೀಣ ಹುಡುಗಿ, ಒಂದು ಹಾಡಿನಿಂದಲೇ ನಕ್ಷತ್ರವಾಗಿದ್ದಾಳೆ. ಸದ್ಯ ಜನಪ್ರಿಯತೆಯ ಹಾದಿ ಹಿಡಿದಿರುವ ನಿತ್ಯಾಶ್ರೀ, ತನ್ನ ಕನಸು ಸಾಕಾರಗೊಳಿಸಿಕೊಳ್ಳಲು ಚಿತ್ರರಂಗದ ಬಾಗಿಲನ್ನು ತಟ್ಟುತ್ತಿದ್ದಾಳೆ. ಮುಂದೆ ಅವಳಿಗೆ ಎಂತಹ ಅವಕಾಶ ಸಿಗುತ್ತದೆ ಎಂಬುದನ್ನು ನೋಡಬೇಕಾಗಿದೆ.