ಸೈಮಾ 2025 ದುಬೈ ವೇದಿಕೆಯಲ್ಲಿ ಕನ್ನಡಿಗರಿಗೆ ಅವಮಾನ: ದುನಿಯಾ ವಿಜಯ್ ತೀವ್ರ ಖಂಡನೆ


ದುಬೈನಲ್ಲಿ ನಡೆಯುತ್ತಿರುವ ಸೌತ್ ಇಂಡಿಯನ್ ಇಂಟರ್ನ್ಯಾಷನಲ್ ಮೂವಿ ಅವಾರ್ಡ್ಸ್ (ಸೈಮಾ 2025) ಕಾರ್ಯಕ್ರಮದಲ್ಲಿ ಮತ್ತೆ ಕನ್ನಡಿಗರಿಗೆ ಅವಮಾನವಾಗಿದ್ದು, ಈ ವಿಷಯವನ್ನು ನಟ ದುನಿಯಾ ವಿಜಯ್ ವೇದಿಕೆಯ ಮೇಲೆಯೇ ಖಂಡಿಸಿದ್ದಾರೆ. ದಕ್ಷಿಣ ಭಾರತದ ಚಿತ್ರರಂಗದ ಅತ್ಯುತ್ತಮ ಕಲಾವಿದರು ಮತ್ತು ತಂತ್ರಜ್ಞರಿಗೆ ಸೈಮಾ ಪ್ರಶಸ್ತಿ ನೀಡಲಾಗುತ್ತದೆ. ಆದರೆ, ಹಿಂದಿನ ವರ್ಷಗಳಂತೆ ಈ ಬಾರಿ ಕೂಡ ಕನ್ನಡದ ಕಲಾವಿದರಿಗೆ ತಕ್ಕ ಮಟ್ಟಿನ ಗೌರವ ನೀಡದ ಘಟನೆ ವರದಿಯಾಗಿದೆ.
ಸೆಪ್ಟೆಂಬರ್ 5ರ ರಾತ್ರಿ ನಡೆದ ಕಾರ್ಯಕ್ರಮದಲ್ಲಿ ತೆಲುಗು ಮತ್ತು ಕನ್ನಡ ಸಿನಿಮಾಗಳಿಗೆ ಪ್ರಶಸ್ತಿ ವಿತರಣೆ ಮಾಡಲಾಯಿತು. ಆದರೆ ಮೊದಲು ತೆಲುಗು ಸಿನಿಮಾಗಳವರಿಗೆ ಪ್ರಶಸ್ತಿ ನೀಡಲಾಯ್ತು. ಅವರ ಕಾರ್ಯಕ್ರಮ ಮುಗಿಯುವಷ್ಟರಲ್ಲಿ ರಾತ್ರಿ ತಡವಾಗಿತ್ತು. ಸಹಜವಾಗಿಯೇ ತೆಲುಗು ಸೆಲೆಬ್ರಿಟಿಗಳು ಹಾಗೂ ಪ್ರೇಕ್ಷಕರು ನಿರ್ಗಮಿಸಿದರು. ಅದಾದ ಬಳಿಕವೇ ಕನ್ನಡಿಗರಿಗೆ ಪ್ರಶಸ್ತಿ ವಿತರಣೆ ಪ್ರಾರಂಭವಾಯಿತು. ವೇದಿಕೆ ಮುಂಭಾಗ ಬಹುತೇಕ ಖಾಲಿ ಇದ್ದ ಸಂದರ್ಭದಲ್ಲಿ ಕನ್ನಡಿಗರಿಗೆ ಗೌರವ ಸಲ್ಲಿಸಲಾಯಿತು.
‘ಭೀಮ’ ಸಿನಿಮಾಕ್ಕಾಗಿ ಅತ್ಯುತ್ತಮ ನಿರ್ದೇಶಕ ಕ್ರಿಟಿಕ್ಸ್ ಅವಾರ್ಡ್ ಪಡೆದ ದುನಿಯಾ ವಿಜಯ್, ಪ್ರಶಸ್ತಿ ಸ್ವೀಕರಿಸಲು ವೇದಿಕೆಗೆ ಹೋದಾಗಲೇ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು: “ಯಾರೂ ಇಲ್ಲದಿದ್ದಾಗ ಸ್ಟೇಜ್ ಗೆ ಕರೆದು ಕನ್ನಡಿಗರಿಗೆ ಅವಾರ್ಡ್ಸ್ ಕೊಡುವುದು ಎಷ್ಟು ಸರಿ? ಕನ್ನಡ ಭಾಷೆ ಮೇಲಿದೆ, ಅದನ್ನ ಕೆಳಗಿಳಿಸೋ ಪ್ರಯತ್ನ ಮಾಡಬೇಡಿ. ಮುಂದಿನ ಕಾರ್ಯಕ್ರಮದಲ್ಲಿ ಇದೇ ರೀತಿ ಮುಂದುವರಿದರೆ, ನಾವು ಸೈಮಾಕ್ಕೆ ಬರೋದಿಲ್ಲ.”ಅವರ ಈ ಖಂಡನೆಗೆ ವೇದಿಕೆಯಲ್ಲಿದ್ದ ಕೆಲ ಕನ್ನಡಿಗರಿಂದ ಭರ್ಜರಿ ಚಪ್ಪಾಳೆ ಕೇಳಿಬಂದಿತು.
ನಟ ಸುದೀಪ್ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ದೊರಕಿತ್ತು. ಆದರೆ ಅವರು ಹಾಜರಿರಲಿಲ್ಲ. ಅವರ ಪರವಾಗಿ ವಿ. ನಾಗೇಂದ್ರ ಪ್ರಶಸ್ತಿ ಸ್ವೀಕರಿಸಿದರು. ಆಗಲೇ ಪ್ರೇಕ್ಷಕರ ಕುರ್ಚಿಗಳು ಬಹುತೇಕ ಖಾಲಿಯಾಗಿದ್ದವು. ಇದು ಮೊದಲ ಬಾರಿಗೆ ಆಗುತ್ತಿರುವುದಲ್ಲ. ಈ ಹಿಂದೆ ನಟ ದರ್ಶನ್ ಕೂಡ ಸೈಮಾ ವೇದಿಕೆಯಲ್ಲಿ ಕನ್ನಡಿಗರಿಗೆ ಆದ್ಯತೆ ಇಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದ್ದರು. ಅವರಿಗೆ ಹಿಂದುಳಿದ ಸಾಲಿನಲ್ಲಿ ಆಸನ ನೀಡಲಾಗಿತ್ತು. ಬಳಿಕ ಅವರು ಸೈಮಾ ಕಾರ್ಯಕ್ರಮಕ್ಕೆ ಹಾಜರಾಗದೇ ತೀವ್ರ ಪ್ರತಿಕ್ರಿಯೆ ತೋರಿದ್ದರು.
ಈ ಘಟನೆ ಮತ್ತೊಮ್ಮೆ ಕನ್ನಡಿಗರಿಗೆ ನೋವು ತಂದಿದೆ. ಪ್ರತೀ ವರ್ಷ ನಡೆಯುತ್ತಿರುವ ಈ ಅವಮಾನಕ್ಕೆ ತಕ್ಕ ಉತ್ತರ ನೀಡಲು ಕನ್ನಡದ ಸೆಲೆಬ್ರಿಟಿಗಳು ಒಟ್ಟಾಗಿ ನಿರ್ಣಯ ತೆಗೆದುಕೊಳ್ಳಬೇಕಾದ ಸಮಯ ಬಂದಿದೆ ಎನ್ನುವುದು ಅಭಿಮಾನಿಗಳ ಅಭಿಪ್ರಾಯವಾಗಿದೆ. ನಿಮ್ಮ ಅಭಿಪ್ರಾಯವೇನು? ಸೈಮಾ ಕಾರ್ಯಕ್ರಮದಲ್ಲಿ ಕನ್ನಡಿಗರಿಗೆ ಆಗುತ್ತಿರುವ ಈ ಅವಮಾನಕ್ಕೆ ಕನ್ನಡದ ನಟರು ಮತ್ತು ಅಭಿಮಾನಿಗಳು ಯಾವ ರೀತಿಯಲ್ಲಿ ಪ್ರತಿಕ್ರಿಯಿಸಬೇಕು ಎಂದು ನೀವು ಯೋಚಿಸುತ್ತೀರಿ?
Trending News
ಹೆಚ್ಚು ನೋಡಿ"‘ಅವರು ಮೆಂಟಲಿ ಸ್ಟ್ರಾಂಗ್, ಎಮೋಷನಲಿ ವೀಕ್’ – ದರ್ಶನ್ ಬಗ್ಗೆ ವಿ. ನಾಗೇಂದ್ರ ಪ್ರಸಾದ್ ಭಾವುಕರ ಮಾತು"

ಟ್ರೋಲ್ಗಳ ಅಟ್ಟಹಾಸ: ದರ್ಶನ್ ತಾಯಿ ಮೀನಾ ತೂಗುದೀಪ ಹಾಗೂ ಸುದೀಪ್ ತಾಯಿ ಸರೋಜಮ್ಮ ವಿರುದ್ಧ ಕೆಟ್ಟ ಕಾಮೆಂಟ್!
