Back to Top

ನಟಿ ರನ್ಯಾ ರಾವ್​ಗೆ 102.55 ಕೋಟಿ ರೂಪಾಯಿ ದಂಡ; ರನ್ಯಾ ರಾವ್‌ಗೆ ಇನ್ನೂ ಸಿಕ್ಕಿಲ್ಲ ನೆಮ್ಮದಿ

SSTV Profile Logo SStv September 3, 2025
ರನ್ಯಾ ರಾವ್ ವಿರುದ್ಧ ಭಾರೀ ಕ್ರಮ
ರನ್ಯಾ ರಾವ್ ವಿರುದ್ಧ ಭಾರೀ ಕ್ರಮ

ಕನ್ನಡದ ನಟಿ ರನ್ಯಾ ರಾವ್ ಅವರ ಮೇಲೆ ಅಕ್ರಮ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಭಾರೀ ಕ್ರಮ ಕೈಗೊಳ್ಳಲಾಗಿದೆ. ಡೈರೆಕ್ಟರೇಟ್ ಆಫ್ ರೆವೆನ್ಯೂ ಇಂಟೆಲಿಜೆನ್ಸ್ (DRI) ತನಿಖೆಯಲ್ಲಿ, ಅವರು 127.3 ಕೆಜಿ ಚಿನ್ನವನ್ನು ಅಕ್ರಮವಾಗಿ ಸಾಗಾಟ ಮಾಡಿರುವುದು ದೃಢಪಟ್ಟಿದೆ.

ಈ ಹಿನ್ನೆಲೆಯಲ್ಲಿ DRI ಅಧಿಕಾರಿಗಳು ರನ್ಯಾ ರಾವ್ ವಿರುದ್ಧ ಅಡ್‌ಜುಡಿಕೇಷನ್ ಪ್ರಕ್ರಿಯೆ ಪೂರ್ಣಗೊಳಿಸಿ, ಬರೋಬ್ಬರಿ ₹102.55 ಕೋಟಿ ರೂ. ದಂಡ ಪಾವತಿಸಲು ನೋಟಿಸ್ ಜಾರಿಗೊಳಿಸಿದ್ದಾರೆ. ದಂಡವನ್ನು ಪಾವತಿಸದಿದ್ದರೆ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ ಎಂಬ ಎಚ್ಚರಿಕೆಯನ್ನು ಸಹ ನೀಡಲಾಗಿದೆ. ಮಾರ್ಚ್ 4 ರಂದು DRI ಅಧಿಕಾರಿಗಳು ಚಿನ್ನವನ್ನು ಸೀಜ್ ಮಾಡಿ, ರನ್ಯಾ ರಾವ್ ಅವರನ್ನು ಬಂಧಿಸಿದ್ದರು. ಕಾನೂನು ಪ್ರಕಾರ, ಕಳ್ಳಸಾಗಣೆ ವಸ್ತುಗಳನ್ನು 6 ತಿಂಗಳೊಳಗೆ ವಶಪಡಿಸಿಕೊಳ್ಳುವುದು DRIಗೆ ಕಡ್ಡಾಯ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು (ಸೆಪ್ಟೆಂಬರ್ 3) ಜೈಲಿಗೆ ತೆರಳಿ ರನ್ಯಾ ರಾವ್ ಸೇರಿ ನಾಲ್ವರು ಆರೋಪಿಗಳಿಗೆ ನೋಟಿಸ್ ಹಸ್ತಾಂತರಿಸಲಾಗಿದೆ.

ಇತರ ಆರೋಪಿಗಳ ಮೇಲೂ ದಂಡ, ರನ್ಯಾ ರಾವ್ ಮಾತ್ರವಲ್ಲ, ಈ ಕೇಸಿನಲ್ಲಿ ಇತರ ಆರೋಪಿಗಳ ಮೇಲೂ ದಂಡ ವಿಧಿಸಲಾಗಿದೆ: ಎ2 ಆರೋಪಿ ತರುಣ್ ಕೊಂಡುರು ರಾಜು – 67.6 ಕೆಜಿ ಚಿನ್ನ ಕಳ್ಳಸಾಗಣೆ, ದಂಡ: ₹62 ಕೋಟಿ ಭರತ್ ಜೈನ್ ಹಾಗೂ ಸಾಹಿಲ್ ಜೈನ್ – ತಲಾ 63.61 ಕೆಜಿ ಚಿನ್ನ ಕಳ್ಳಸಾಗಣೆ, ದಂಡ: ₹53 ಕೋಟಿ. ಆರೋಪಿಗಳಿಗೆ ನೀಡಲಾಗಿರುವ ನೋಟಿಸ್ ಜೊತೆಗೆ 2,500 ಪುಟಗಳ ದಾಖಲೆಗಳನ್ನು ಸಹ ಹಸ್ತಾಂತರಿಸಲಾಗಿದೆ. ಇದರೊಂದಿಗೆ, ಕ್ರಿಮಿನಲ್ ಕೇಸು ಕೂಡ ಮುಂದುವರಿಯುತ್ತಿದ್ದು, ಹೈಕೋರ್ಟ್‌ನಲ್ಲಿ ಕಾಫಿಪೋಸಾ ಅರ್ಜಿ ವಿಚಾರಣೆ ಸೆಪ್ಟೆಂಬರ್ 11ಕ್ಕೆ ಮುಂದೂಡಲಾಗಿದೆ.

ಈ ಪ್ರಕರಣವು ಕನ್ನಡ ಚಿತ್ರರಂಗದಲ್ಲೂ ದೊಡ್ಡ ಸದ್ದು ಮಾಡಿದೆ. ನಟಿ ರನ್ಯಾ ರಾವ್ ಸೇರಿದಂತೆ ಆರೋಪಿಗಳ ಮೇಲೆ ದಂಡ ಹಾಗೂ ಕ್ರಿಮಿನಲ್ ಕ್ರಮಗಳು ಕೈಗೊಳ್ಳುತ್ತಿರುವುದರಿಂದ, ಮುಂದಿನ ದಿನಗಳಲ್ಲಿ ಈ ಪ್ರಕರಣ ಇನ್ನಷ್ಟು ಬಿರುಗಾಳಿ ಎಬ್ಬಿಸುವ ಸಾಧ್ಯತೆಯಿದೆ.