Back to Top

"‘ಅಳಬೇಕಾ ಖುಷಿಪಡಬೇಕಾ ಗೊತ್ತಾಗಲಿಲ್ಲ’ – ಮಗು ಕಳೆದುಕೊಂಡ ನೋವನ್ನು ಹಂಚಿಕೊಂಡ ಭಾವನಾ ರಾಮಣ್ಣ"

SSTV Profile Logo SStv September 8, 2025
ನೋವಿನ ಕಥೆ ಹಂಚಿಕೊಂಡ ಭಾವನಾ ರಾಮಣ್ಣ
ನೋವಿನ ಕಥೆ ಹಂಚಿಕೊಂಡ ಭಾವನಾ ರಾಮಣ್ಣ

ಮನುಷ್ಯನ ಬದುಕಿನಲ್ಲಿ ಮದುವೆ, ಸಂಸಾರ, ಮಕ್ಕಳು ಎನ್ನುವುದು ಸಹಜವಾದ ಹಾದಿ ಎಂದು ಸಮಾಜ ಹೇಳುತ್ತಾ ಬಂದಿದೆ. ಆದರೆ ಕಾಲ ಬದಲಾಗಿದೆ. ಮದುವೆ ಮಾಡದೇ ಬದುಕು ಸಾಗಿಸುವವರು, ಮಕ್ಕಳ ಬೇಡವೆನ್ನುವವರು ಹೆಚ್ಚಾಗುತ್ತಿದ್ದಾರೆ. ಆದರೂ ತಾಯ್ತನದ ಹಂಬಲವೇ ಕೆಲವು ಮಹಿಳೆಯರಲ್ಲಿ ಬೇರೂರಿ, ಆ ಕನಸನ್ನು ಸಾಕಾರಗೊಳಿಸಲು ಐವಿಎಫ್ (IVF) ಎಂಬ ವೈದ್ಯಕೀಯ ತಂತ್ರಜ್ಞಾನಕ್ಕೆ ಮೊರೆ ಹೋಗುತ್ತಿದ್ದಾರೆ. ಕನ್ನಡ ಚಿತ್ರರಂಗದ ಪ್ರತಿಭಾವಂತ ನಟಿ ಭಾವನಾ ರಾಮಣ್ಣ ಅವರ ಜೀವನವೂ ಇದೇ ದಾರಿಗೆ ತಿರುಗಿದೆ.

ಭಾವನಾ ಐವಿಎಫ್ ಮೂಲಕ ತಾಯಿಯಾದರು. ಅವರಿಗೆ ಅವಳಿ ಮಕ್ಕಳ ನಿರೀಕ್ಷೆಯಿತ್ತು. ಆದರೆ ವಿಧಿಯಾಟ ಬೇರೆ. ಹೆರಿಗೆ ಸಮಯದಲ್ಲಿ ಒಂದು ಮಗು ಬದುಕುಳಿಯಲಿಲ್ಲ. ಇನ್ನೂ ಆ ನೋವು ಅವರ ಮನಸನ್ನು ಕಾಡುತ್ತಿದೆ. “ಇನ್ನೂ ಆ ನೋವನ್ನು ಮರೆತೇ ಬಿಡಲು ಆಗುತ್ತಿಲ್ಲ. ಬದುಕಿನಲ್ಲಿ ಎದುರಾಗುವ ಪರಿಸ್ಥಿತಿಗಳನ್ನು ನಿಭಾಯಿಸಲು ಕಲಿಯುತ್ತಿದ್ದೇನೆ” ಎಂದು ಅವರು ಟೈಮ್ಸ್ ಆಫ್ ಇಂಡಿಯಾಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಸೀಮಂತ ಸಮಾರಂಭದವರೆಗೆ ಎಲ್ಲವೂ ಸರಾಗವಾಗಿತ್ತು. ಆದರೆ ಬಳಿಕ ಭಾವನಾಗೆ ರಕ್ತಸ್ರಾವ ಪ್ರಾರಂಭವಾಯಿತು. ದೀರ್ಘ ಸಮಯ ಕುಳಿತುಕೊಳ್ಳುವುದು ಕೂಡ ಕಷ್ಟವಾಯಿತು. ಚಿಕಿತ್ಸೆ ಪಡೆಯುತ್ತಿದ್ದ ಆಸ್ಪತ್ರೆ ದೂರದಲ್ಲಿದ್ದರಿಂದ ಹತ್ತಿರದ ಆಸ್ಪತ್ರೆ ಸೇರಿದರು. ಅಲ್ಲಿ ವೈದ್ಯರು “ನೀವು ಟೈಮ್ ಬಾಂಬ್ ಮೇಲೆ ಕೂತಿದ್ದೀರಿ” ಎಂದು ಎಚ್ಚರಿಸಿದರು.

ಪರೀಕ್ಷೆಯಲ್ಲಿ ಒಂದು ಮಗುವಿಗೆ ರಕ್ತ ಪೂರೈಕೆ ಹಿಮ್ಮುಖವಾಗಿ ಹರಿಯುತ್ತಿತ್ತು. ತೂಕ ಕಡಿಮೆಯಿತ್ತು. ಹೃದಯ ಬಡಿತ ಶೇಕಡಾ 50% ಕುಸಿತವಾಗಿತ್ತು. ಭಾವನಾ ದೇವರಲ್ಲಿ ಪ್ರಾರ್ಥಿಸಿದರೂ ಫಲ ಸಿಗಲಿಲ್ಲ. ಮಾನಿಟರ್‌ನಲ್ಲಿ ಹೃದಯ ಬಡಿತ ನಿಧಾನವಾಗಿ ಕುಸಿಯುತ್ತಿರುವುದು ಅವರಿಗೆ ಅಸಹನೀಯವಾಗಿತ್ತು.

ವೈದ್ಯರು ಒಂದು ಮಗುವನ್ನು ಉಳಿಸಲು ಸಾಧ್ಯವಿಲ್ಲವೆಂದು ತಿಳಿಸಿದರು. ಮತ್ತೊಂದು ಮಗುವಿನ ಜೀವ ಉಳಿಸಲು ಗರ್ಭಾವಧಿ ಪೂರ್ತಿಗೊಳಿಸುವ ಸಾಧ್ಯತೆ ಇರಲಿಲ್ಲ. ಹೀಗಾಗಿ 32ನೇ ವಾರದಲ್ಲಿ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಭಾವನಾ ಹೆಣ್ಣು ಮಗುವಿಗೆ ಜನ್ಮ ನೀಡಿದರು. ಬದುಕುಳಿದ ಮಗುವನ್ನು ಎನ್‌ಐಸಿಯುವಿಗೆ ಕರೆದೊಯ್ಯಲಾಯಿತು.

“ಒಂದು ಮಗು ಕಳೆದುಕೊಂಡ ನೋವಿನಿಂದ ಅಳಬೇಕಾ? ಇನ್ನೊಂದು ಮಗು ಬದುಕುಳಿದ ಸಂತೋಷದಿಂದ ಖುಷಿಪಡಬೇಕಾ? ಎಂಬ ಗೊಂದಲದಲ್ಲಿದ್ದೇನೆ” ಎಂದು ಭಾವನಾ ಭಾವುಕರಾದರು. “ಎರಡೂ ಹೆಣ್ಣುಮಕ್ಕಳಾಗಿದ್ದರೆಂದು ನಂತರ ತಿಳಿಯಿತು. ಒಂದು ಮಗು ಮಡಿಲು ಸೇರಿದಿಲ್ಲ ಎಂಬ ನೋವು ಸದಾ ನನ್ನೊಡನೆ ಇರುತ್ತದೆ” ಎಂದು ಕಣ್ಣೀರಿಟ್ಟರು.

ಪ್ರಸ್ತುತ ಭಾವನಾ ತನ್ನ ಹೆಣ್ಣು ಮಗುವಿನೊಂದಿಗೆ ಮನೆಗೆ ಮರಳಿದ್ದಾರೆ. “ಮಗುವಿನ ಆರೋಗ್ಯವೇ ನನ್ನ ದೊಡ್ಡ ಸಂತೋಷ. ಅದನ್ನು ದೇವರ ವರವಾಗಿ ಕಂಡುಕೊಳ್ಳುತ್ತೇನೆ” ಎಂದು ಹೇಳಿದ್ದಾರೆ. ಭಾವನಾ ರಾಮಣ್ಣ ಅವರ ಕಥೆ ತಾಯ್ತನವೆಂದರೆ ಕೇವಲ ಸಂತೋಷ ಮಾತ್ರವಲ್ಲ, ಅದರಲ್ಲಿ ನೋವು, ಕಷ್ಟ, ತಾಳ್ಮೆ, ಧೈರ್ಯ ಇವೆಂಬುದನ್ನು ನೆನಪಿಸುತ್ತದೆ. ಅವರ ಧೈರ್ಯ ಇನ್ನಿತರ ಮಹಿಳೆಯರಿಗೂ ಸ್ಪೂರ್ತಿಯಾಗುವುದು ಖಚಿತ.