Back to Top

ಡಾ. ವಿಷ್ಣುವರ್ಧನ್, ಸರೋಜಾದೇವಿಗೆ ಮರಣೋತ್ತರ ಕರ್ನಾಟಕ ರತ್ನ ನೀಡಲು ನಟಿಯರ ಸಿಎಂ ಸಿದ್ದರಾಮಯ್ಯಗೆ ಮನವಿ

SSTV Profile Logo SStv September 3, 2025
ಜಯಮಾಲಾ, ಶೃತಿ, ಮಾಳವಿಕಾ ಸಿಎಂ ಅವರನ್ನು ಭೇಟಿ ಮಾಡಿ ಮನವಿ
ಜಯಮಾಲಾ, ಶೃತಿ, ಮಾಳವಿಕಾ ಸಿಎಂ ಅವರನ್ನು ಭೇಟಿ ಮಾಡಿ ಮನವಿ

ಕರ್ನಾಟಕದ ಹಿರಿಯ ಕಲಾವಿದರು, ವಿಶೇಷವಾಗಿ ನಟಿಯರು ಇಂದು (ಸೆಪ್ಟೆಂಬರ್ 3) ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕಾವೇರಿ ನಿವಾಸದಲ್ಲಿ ಭೇಟಿ ಮಾಡಿ ಮಹತ್ವದ ಮನವಿಯನ್ನು ಸಲ್ಲಿಸಿದರು. ದಿವಂಗತ ನಟ ಡಾ. ವಿಷ್ಣುವರ್ಧನ್ ಮತ್ತು ದಿವಂಗತ ನಟಿ ಸರೋಜಾದೇವಿ ಅವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ನೀಡಲು ಅವರು ಮನವಿ ಮಾಡಿದರು. ಸೆಪ್ಟೆಂಬರ್ 18ರಂದು ವಿಷ್ಣುವರ್ಧನ್ ಅವರ 75ನೇ ಜನ್ಮದಿನದ ಹಿನ್ನೆಲೆಯಲ್ಲಿ, ಆ ದಿನವೇ ಅವರಿಗೆ ಕರ್ನಾಟಕ ರತ್ನ ಘೋಷಣೆ ಮಾಡಬೇಕೆಂದು ಹಿರಿಯ ನಟಿಯರಾದ ಜಯಮಾಲಾ, ಶೃತಿ ಮತ್ತು ಮಾಳವಿಕಾ ಸಿಎಂ ಅವರಿಗೆ ವಿನಂತಿಸಿದರು. ಜೊತೆಗೆ ಸರೋಜಾದೇವಿ ಅವರಿಗೂ ಇದೇ ಗೌರವ ನೀಡುವಂತೆ ಅವರು ಕೇಳಿಕೊಂಡರು.

“ವಿಷ್ಣುವರ್ಧನ್ ಮತ್ತು ಸರೋಜಾದೇವಿ ಅವರಂತಹ ದಿಗ್ಗಜ ಕಲಾವಿದರಿಗೆ ಕರ್ನಾಟಕ ರತ್ನ ನೀಡುವುದು ಸಮಯೋಚಿತ. ಸರೋಜಾದೇವಿ ಅವರ ಹೆಸರಿನಲ್ಲಿ ರಸ್ತೆ ಇಡಬೇಕು ಎಂಬ ಮನವಿಯನ್ನೂ ಮಾಡಿದ್ದೇವೆ. ಸಿಎಂ ಸಕಾರಾತ್ಮಕವಾಗಿ ಸ್ಪಂದಿಸಿ, ಈ ವಿಷಯವನ್ನು ಸಚಿವ ಸಂಪುಟದಲ್ಲಿ ಚರ್ಚಿಸುತ್ತೇನೆ ಎಂದು ಭರವಸೆ ನೀಡಿದ್ದಾರೆ” ಎಂದು ಅವರು ತಿಳಿಸಿದರು. “ನಾವು ಎಲ್ಲರೂ ವಿಷ್ಣುವರ್ಧನ್ ಸರ್ ಅವರ ಅಭಿಮಾನಿಗಳು. ಅವರಿಗೂ ಸರೋಜಾದೇವಿ ಮ್ಯಾಡಮ್‌ಗೂ ಕರ್ನಾಟಕ ರತ್ನ ನೀಡಬೇಕು ಎಂಬ ಒತ್ತಾಯವನ್ನು ಪಕ್ಷಾತೀತವಾಗಿ ಮಾಡಿದ್ದೇವೆ. ಇದರಲ್ಲಿ ಯಾವುದೇ ರಾಜಕೀಯ ಇಲ್ಲ” ಎಂದು ಸ್ಪಷ್ಟಪಡಿಸಿದರು.

“ಸರೋಜಾದೇವಿ ಅವರ ನಿವಾಸ ಮಲ್ಲೇಶ್ವರಂನಲ್ಲಿ ಇದೆ. ಆ ರಸ್ತೆಗೆ ಅವರ ಹೆಸರನ್ನು ಇಡುವ ಬಗ್ಗೆ ಮನವಿ ಮಾಡಿದ್ದೇವೆ. ಸಿಎಂ ಅದಕ್ಕೆ ಸಮ್ಮತಿಸಿದ್ದಾರೆ” ಎಂದು ಹೇಳಿದರು. ಕನ್ನಡ ಚಿತ್ರರಂಗಕ್ಕೆ ಅಳಿಸಲಾಗದ ಕೊಡುಗೆ ನೀಡಿದ ವಿಷ್ಣುವರ್ಧನ್ ಮತ್ತು ಸರೋಜಾದೇವಿ ಅವರಿಗೆ ರಾಜ್ಯದ ಅತಿ ಉನ್ನತ ಗೌರವವಾಗಿರುವ ಕರ್ನಾಟಕ ರತ್ನ ಪ್ರಶಸ್ತಿ ನೀಡುವಂತೆ ಒತ್ತಾಯ ವ್ಯಕ್ತವಾಗಿದ್ದು, ಈಗ ಸರ್ಕಾರದಿಂದ ಅಧಿಕೃತ ಘೋಷಣೆಯ ನಿರೀಕ್ಷೆಯಿದೆ.