Back to Top

ಕರಾಟೆ ಕಿಂಗ್ ಶಂಕರ್ ನಾಗ್ ಹೆಸರು ಮತ್ತೆ ಟ್ರೆಂಡ್ ಆಗುತ್ತಿರುವುದು – ಮೆಟ್ರೋ ನಿಲ್ದಾಣ ನಾಮಕರಣ ವಿವಾದ

SSTV Profile Logo SStv September 9, 2025
ದಿಢೀರ್ ಟ್ರೆಂಡ್ ಆಗ್ತಿದೆ ಕರಾಟೆ ಕಿಂಗ್ ಶಂಕರ್ ನಾಗ್ ಹೆಸರು
ದಿಢೀರ್ ಟ್ರೆಂಡ್ ಆಗ್ತಿದೆ ಕರಾಟೆ ಕಿಂಗ್ ಶಂಕರ್ ನಾಗ್ ಹೆಸರು

ಕನ್ನಡ ಚಿತ್ರರಂಗ ಕಂಡ ಅದ್ಭುತ ಪ್ರತಿಭೆ, ಜನಮನ ಗೆದ್ದ ಕಲಾವಿದ, "ಕರಾಟೆ ಕಿಂಗ್" ಎಂದೇ ಹೆಸರು ಮಾಡಿದ ಶಂಕರ್ ನಾಗ್. ನಟನಷ್ಟೇ ಅಲ್ಲ, ಕನ್ನಡಿಗರ ಕನಸುಗಳನ್ನು ಸಾಕಾರಗೊಳಿಸಲು ದೂರದೃಷ್ಟಿಯೊಂದಿಗೆ ಬದುಕಿದ ವ್ಯಕ್ತಿ. ಅಷ್ಟರಲ್ಲೇ ದುರಂತ ಅಂತ್ಯ ಕಂಡ ಶಂಕ್ರಣ್ಣ, ಇಂದಿಗೂ ಅಭಿಮಾನಿಗಳ ಹೃದಯದಲ್ಲಿ ಜೀವಂತವಾಗಿದ್ದಾರೆ. ಇತ್ತೀಚೆಗೆ ಅವರ ಹೆಸರು ದಿಢೀರ್ ಟ್ರೆಂಡ್ ಆಗುತ್ತಿದೆ.

ಶಿವಾಜಿನಗರ ಮೆಟ್ರೋ ನಿಲ್ದಾಣಕ್ಕೆ "ಸೆಂಟ್ ಮೇರಿ" ಹೆಸರಿಡುವ ಪ್ರಸ್ತಾವನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮತಿ ಸೂಚಿಸಿರುವುದು ಭಾರೀ ವಿವಾದ ಹುಟ್ಟಿಸಿದೆ. ಅಭಿಮಾನಿಗಳು ಹಾಗೂ ಶಂಕರ್ ನಾಗ್ ಆಪ್ತರು, ಮೆಟ್ರೋ ಕನಸನ್ನು ಮೊದಲಿಗೆ ಶಂಕರ್ ನಾಗ್ ನೋಡಿದ್ದರಿಂದ, ಕನಿಷ್ಠ ಒಂದು ಮೆಟ್ರೋ ನಿಲ್ದಾಣಕ್ಕೆ ಅವರ ಹೆಸರನ್ನು ನಾಮಕರಣ ಮಾಡಬೇಕೆಂದು ಆಗ್ರಹ ವ್ಯಕ್ತಪಡಿಸುತ್ತಿದ್ದಾರೆ.

1986-87ರಲ್ಲಿ ಶಂಕರ್ ನಾಗ್ ತಮ್ಮ ಸ್ವಂತ ಹಣ ಖರ್ಚು ಮಾಡಿ ಬೆಂಗಳೂರಿಗೆ ಮೆಟ್ರೋ ಯೋಜನೆಯ ಸರ್ವೇ ಮಾಡಿಸಿದ್ದರು. ಮರಗಳನ್ನು ಕಡಿಯದೇ, ಅಂಡರ್‌ಗ್ರೌಂಡ್ ಮೆಟ್ರೋ ಅಗತ್ಯವಿದೆ ಎಂದು ಅವತ್ತು ದೂರದೃಷ್ಟಿಯಿಂದ ಹೇಳಿದ್ದರು. ತಮ್ಮ ಖಾಸಗಿ ಸಂಪಾದನೆಯ 10 ಲಕ್ಷ ರೂ. ಖರ್ಚು ಮಾಡಿದ್ದರು. ಇಷ್ಟು ಮಾಡಿದವರ ಹೆಸರನ್ನು ಇಂದು ಒಂದೇ ನಿಲ್ದಾಣಕ್ಕೂ ಸರ್ಕಾರ ನಾಮಕರಣ ಮಾಡದಿರುವುದರಿಂದ ಅಭಿಮಾನಿಗಳಲ್ಲಿ ಆಕ್ರೋಶ ಹೆಚ್ಚಾಗಿದೆ.

ಶಂಕರ್ ನಾಗ್ ಆಪ್ತ ಮತ್ತು ಹಿರಿಯ ನಟ ರಮೇಶ್ ಭಟ್, "ಇದು ಶಂಕ್ರಣ್ಣನ ಕಲ್ಪನೆ. ಮೆಟ್ರೋ ಶುರುವಾದ ದಿನದಿಂದ ನಾವು ಕೇಳ್ತಿದ್ದೇವೆ. ಆದರೆ ಸರ್ಕಾರಕ್ಕೆ ಕಿವಿಯೇ ಇಲ್ಲ. ಒಂದು ಸ್ಟೇಷನ್‌ಗೆ ಅವನ ಹೆಸರಿಡಲು ಮನಸ್ಸಿಲ್ಲ ಅಂದ್ರೆ ಬೇಸರವಾಗುತ್ತೆ" ಎಂದು ಹೇಳಿದ್ದಾರೆ. ಶಂಕರ್ ನಾಗ್ ಪತ್ನಿ ಅರುಂಧತಿ ನಾಗ್ ಅವರ ಹಳೆಯ ಸಂದರ್ಶನವೊಂದು ವೈರಲ್ ಆಗುತ್ತಿದೆ. ಅದರಲ್ಲಿ ಅವರು ಹೇಳಿದ್ದು – "ಶಂಕರ್ ಮೆಟ್ರೋ ಕನಸು ಕಂಡಿದ್ದ. ಅದಕ್ಕಾಗಿ ಲಂಡನ್‌ಗೆ ಹೋಗಿದ್ದ. ತನ್ನ ಸ್ವಂತ ಹಣ ಖರ್ಚು ಮಾಡಿದ್ದ. ನಾನು ಕೇಳಿದೆ, ನಿನ್ನ ಹಣ ಯಾಕೆ ಖರ್ಚು ಮಾಡ್ತಿಯಾ ಅಂತ. ಅದಕ್ಕೆ ಅವನು, 'ನನ್ನ ಹೆಸರು, ನನ್ನ ಹಣ ಇವತ್ತು ಎಲ್ಲವೂ ಈ ನಾಡು ಕೊಟ್ಟದ್ದು. ಬೆಂಗಳೂರಿಗಾಗಿ ನಾನು ಹಣ ಖರ್ಚು ಮಾಡೋದಕ್ಕೆ ಏನು ತಪ್ಪು?' ಅಂತ ಹೇಳಿದ್ದ."

ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಅಭಿಯಾನ ಆರಂಭಿಸಿದ್ದಾರೆ. "ಶಿವಾಜಿನಗರಕ್ಕೆ ಸೆಂಟ್ ಮೇರಿ ಹೆಸರಿಡಿ, ಆದರೆ ಬೇರೆ ಯಾವುದಾದರೂ ಮೆಟ್ರೋ ನಿಲ್ದಾಣಕ್ಕೆ ಶಂಕರ್ ನಾಗ್ ಹೆಸರು ಇರಲಿ. ಇವತ್ತು ಇರುವ ಮೆಟ್ರೋ ಶಂಕ್ರಣ್ಣನ ಕನಸು ಸಾಕಾರವಾಗಿರುವುದು. ಸರ್ಕಾರ ಅವರಿಗೊಂದು ಗೌರವ ಸಲ್ಲಿಸಬೇಕು" ಎಂಬುದಾಗಿ ಜನರು ಒತ್ತಾಯಿಸುತ್ತಿದ್ದಾರೆ.