Back to Top

ಅರಮನೆ ನಗರಿಯಲ್ಲಿ ಅದ್ದೂರಿಯಾಗಿ ನೆರವೇರಿತು ನಿರ್ಮಾಪಕ ಸಂದೇಶ್ ನಾಗರಾಜ್ ಅವರ 80ನೇ ಹುಟ್ಟುಹಬ್ಬ

SSTV Profile Logo SStv September 1, 2025
ಅದ್ಧೂರಿಯಾಗಿ ನೆರವೇರಿದ ಸಂದೇಶ್ ನಾಗರಾಜ್ 80ನೇ ಹುಟ್ಟುಹಬ್ಬ
ಅದ್ಧೂರಿಯಾಗಿ ನೆರವೇರಿದ ಸಂದೇಶ್ ನಾಗರಾಜ್ 80ನೇ ಹುಟ್ಟುಹಬ್ಬ

"ಮಣ್ಣಿನ ದೋಣಿ" ಚಿತ್ರದ ಮೂಲಕ ನಿರ್ಮಾಪಕರಾಗಿ ಜನಪ್ರಿಯರಾಗಿರುವ ಸಂದೇಶ್ ನಾಗರಾಜ್ ರಾಷ್ಟ್ರಪ್ರಶಸ್ತಿ ವಿಜೇತ ನಿರ್ಮಾಪಕರೂ ಹೌದು. ಸಾಕಷ್ಟು ಸದಭಿರುಚಿಯ ಚಿತ್ರಗಳನ್ನು ಕನ್ನಡ ಚಿತ್ರರಂಗಕ್ಕೆ ನೀಡಿರುವ ಇವರು, ವಿಧಾನ ಪರಿಷತ್ ಸದಸ್ಯರಾಗಿ ಎರಡು ಬಾರಿ ಆಯ್ಕೆಯಾಗಿದ್ದಾರೆ. ಜೊತೆಗೆ ಹೋಟೆಲ್ ಉದ್ಯಮಿಯೂ ಆಗಿದ್ದಾರೆ.

ಇತ್ತೀಚೆಗೆ ಸಂದೇಶ್ ನಾಗರಾಜ್ ಅವರ 80ನೇ ಹುಟ್ಟುಹಬ್ಬ ಮೈಸೂರಿನ ವಸ್ತು ಪ್ರದರ್ಶನ ಪ್ರಾಧಿಕಾರದಲ್ಲಿ ಅದ್ದೂರಿಯಾಗಿ ನೆರವೇರಿತು. ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಜಮೀರ್ ಅಹಮದ್, ಭೈರತಿ ಸುರೇಶ್, ಚೆಲುವರಾಯಸ್ವಾಮಿ, ಶಾಸಕರಾದ ತನ್ವೀರ್ ಸೇಠ್, ವಿರೋ಼ಧ ಪಕ್ಷದ ನಾಯಕರಾದ ಆರ್‌ ಅಶೋಕ್, ಪ್ರೊ.ಕೃಷ್ಣೇಗೌಡ, ನಟ ಕಿಚ್ಚ ಸುದೀಪ್, ಡಾಲಿ ಧನಂಜಯ್, ಸೃಜನ್ ಲೋಕೇಶ್, ಯುವ ರಾಜಕುಮಾರ್, ಸಾಧುಕೋಕಿಲ, ಗಿರಿಜಾ ಲೋಕೇಶ್, ಸಾ.ರಾ.ಗೋವಿಂದು, ಎಸ್ ಎ. ಚಿನ್ನೇಗೌಡ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ನರಸಿಂಹಲು, ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್, ಕನ್ನಡ ಚಲನಚಿತ್ರ ನಿರ್ದೇಶಕರ ಸಂಘದ ಅಧ್ಯಕ್ಷ ಎನ್ ಆರ್ ಕೆ ವಿಶ್ವನಾಥ್ ಹಾಗೂ ಚಲನಚಿತ್ರರಂಗಕ್ಕೆ ಸಂಬಂಧಿಸಿದ ಎಲ್ಲಾ ಸಂಸ್ಥೆಗಳ ಹಾಲಿ ಹಾಗೂ ಮಾಜಿ ಪದಾಧಿಕಾರಿಗಳು ಸಮಾರಂಭದಲ್ಲಿ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಸಂದೇಶ್ ನಾಗರಾಜ್, ನಿರ್ಮಾಪಕರಾಗಿ ಹಾಗೂ ಉದ್ಯಮಿಯಾಗಿ ಹೆಸರು ಮಾಡಿದ್ದಾರೆ. ಜೊತೆಗೆ ಎರಡು ಬಾರಿ ವಿಧಾನ ಪರಿಷತ್ ಸದಸ್ಯರು ಆಗಿದ್ದಾರೆ. ಸಾಕಷ್ಟು ಸಮಾಜಮುಖಿ ಕಾರ್ಯಗಳನ್ನು ಮಾಡಿದ್ದಾರೆ. ನಾನು ಅವರು ಹೆಚ್ಚಾಗಿ ಬೇರೆ ಪಕ್ಷಗಳಲ್ಲೇ ಇದ್ದದ್ದು ಹೆಚ್ಚು. ಆದರೂ ನನ್ನ ಅವರ ಗೆಳೆತನ ಬಹಳ ಚೆನ್ನಾಗಿದೆ. ಸಂದೇಶ್ ನಾಗರಾಜ್ ಅವರು ನೂರುಕಾಲ ಸುಖವಾಗಿ ಬಾಳಲಿ. ಅವರಿಂದ ಮತ್ತಷ್ಟು ಸಮಾಜ ಕಾರ್ಯಗಳು ಆಗಲಿ ಎಂದು ಹಾರೈಸಿದರು. ಕಿಚ್ಚ ಸುದೀಪ್ ಸೇರಿದಂತೆ ಅನೇಕ ಗಣ್ಯರು ಸಂದೇಶ್ ನಾಗರಾಜ್ ಅವರಿಗೆ ಚಿತ್ರರಂಗ ಹಾಗೂ ರಾಜಕೀಯ ಗಣ್ಯರು ತಮ್ಮ ಮಾತುಗಳ ಮೂಲಕ ಹಾರೈಸಿದರು.

ಸಮಾರಂಭದ ಹಿಂದಿನ ದಿನ ಕರ್ನಾಟಕ ಚಲನಚಿತ್ರ ಮಂಡಳಿ ಸೇರಿದಂತೆ ಅನೇಕ ಚಿತ್ರರಂಗದ ಸಂಸ್ಥೆಗಳು ಸೇರಿ ಕನ್ನಡ ಚಿತ್ರರಂಗದ ಪರವಾಗಿ ಸಂದೇಶ್ ನಾಗರಾಜ್ ಅವರನ್ನು ಸನ್ಮಾನಿಸಿದ್ದರು.