Back to Top

‘ಲೋಕಃ’ ಸಿನಿಮಾ ವಿವಾದ: ಬೆಂಗಳೂರಿನ ಯುವತಿಯರ ಗೌರವಕ್ಕೆ ಧಕ್ಕೆ? ಕನ್ನಡಿಗರ ಆಕ್ರೋಶ!

SSTV Profile Logo SStv September 2, 2025
ಲೋಕ ಸಿನಿಮಾ ಬಗ್ಗೆ ಕನ್ನಡಿಗರ ಆಕ್ರೋಶ
ಲೋಕ ಸಿನಿಮಾ ಬಗ್ಗೆ ಕನ್ನಡಿಗರ ಆಕ್ರೋಶ

ಇತ್ತೀಚೆಗೆ ಬಿಡುಗಡೆಯಾದ ಮಲಯಾಳಂ ಸಿನಿಮಾ ‘ಲೋಕಃ: ಚಾಪ್ಟರ್ 1 ಚಂದ್ರ’ ಸುತ್ತಲೂ ದೊಡ್ಡ ಮಟ್ಟದ ಚರ್ಚೆ ಮತ್ತು ವಿರೋಧ ವ್ಯಕ್ತವಾಗುತ್ತಿದೆ. ಬೆಂಗಳೂರಿನ ಯುವತಿಯರನ್ನು ‘ಡಗಾರ್’ ಎಂದು ಅವಹೇಳನ ಮಾಡುವ ಸಂಭಾಷಣೆ ಹಾಗೂ ನಗರದ ಪಾರ್ಟಿ–ಡ್ರಗ್ಸ್ ಸಂಸ್ಕೃತಿಯನ್ನು ವೈಭವೀಕರಿಸಿದ ರೀತಿಯಲ್ಲಿ ಚಿತ್ರಿಸಿರುವುದರಿಂದ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಚಿತ್ರದಲ್ಲಿ ನಾಚಿಯಪ್ಪ ಗೌಡ (ಸ್ಯಾಂಡಿ ಅಭಿನಯ) ಪಾತ್ರಕ್ಕೆ ಮದುವೆ ಪ್ರಸ್ತಾಪ ಬರುತ್ತದೆ. ಆಗ ಅವನು, “ನಾನು ಮದುವೆ ಆಗೋದಿಲ್ಲ ಎಂದಲ್ಲ. ಆದರೆ ಇಲ್ಲಿಯವರನ್ನು ಮದುವೆಯಾಗಲ್ಲ. ಇಲ್ಲಿಯವರು ಡಗಾರ್‌ಗಳು” ಎಂದು ಹೇಳುವ ಸಂಭಾಷಣೆ ಬಂದಿದೆ. ಈ ಮಾತು ಬೆಂಗಳೂರು ಯುವತಿಯರ ಗೌರವಕ್ಕೆ ಧಕ್ಕೆ ತರುವಂತದ್ದಾಗಿದೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ಈ ಡೈಲಾಗ್‍ನ್ನು ತೆಗೆದುಹಾಕಬೇಕೆಂದು ಒತ್ತಾಯಿಸಲಾಗುತ್ತಿದೆ. ಚಿತ್ರದಲ್ಲಿ ಬೆಂಗಳೂರನ್ನು ಕೇವಲ ಪಾರ್ಟಿ, ಡ್ರಗ್ಸ್, ಮಾದಕ ವಸ್ತು ಬಳಕೆ ಇವುಗಳಿಗೆ ಮಾತ್ರ ಸೀಮಿತಗೊಳಿಸಿರುವ ರೀತಿ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಹೊರ ಜಗತ್ತಿಗೆ “ಬೆಂಗಳೂರು ಅಷ್ಟಕ್ಕಷ್ಟೇನಾ?” ಎಂಬ ತಪ್ಪು ಕಲ್ಪನೆ ಹೋಗುವ ಭೀತಿ ವ್ಯಕ್ತವಾಗಿದೆ.

ಸ್ಯಾಂಡಿ ತಮಿಳುನಾಡಿನವರು. ಅವರ ಪಾತ್ರದ ಹೆಸರು ನಾಚಿಯಪ್ಪ ಗೌಡವಾದರೂ, ಅವರು ಮಾತನಾಡುವುದು ತಮಿಳು ಶೈಲಿಯಲ್ಲಿ. ಕನ್ನಡಿಗರ ಪಾತ್ರಕ್ಕೆ ಕನ್ನಡದ ಕಲಾವಿದರನ್ನು ಆಯ್ಕೆ ಮಾಡಬಹುದಿತ್ತು ಎಂಬ ಅಭಿಪ್ರಾಯ ಸಮಾಜ ಮಾಧ್ಯಮದಲ್ಲಿ ಹೆಚ್ಚಾಗಿ ಕೇಳಿ ಬರುತ್ತಿದೆ. ಮತ್ತೊಂದು ದೃಶ್ಯದಲ್ಲಿ ಆಟೋ ಚಾಲಕನ “ಎಲ್ಲಿ ಹೋಗಬೇಕು?” ಎಂಬ ಪ್ರಶ್ನೆಗೆ ನಾಯಕ “ಕನ್ನಡ್ ಗೊತ್ತಿಲ್ಲ” ಎಂದು ಉತ್ತರಿಸುತ್ತಾನೆ. ಇದನ್ನು ಅಣಕಿಸುವ ರೀತಿಯಲ್ಲಿ ತೋರಿಸಲಾಗಿದೆ ಎಂಬ ಆರೋಪ ಎದುರಾಗಿದೆ.

ಹಿಂದೆ ಬಾಲಿವುಡ್‌ನ “ಪರಂ ಸುಂದರಿ” ಸಿನಿಮಾದಲ್ಲಿ ಕೇರಳದ ಚಿತ್ರಣವನ್ನು ತಪ್ಪಾಗಿ ತೋರಿಸಿರುವುದರ ವಿರುದ್ಧ ಅಲ್ಲಿ ಪ್ರತಿಭಟನೆಗಳು ನಡೆದಿದ್ದವು. ಅದೇ ತೀಕ್ಷ್ಣತೆಯೊಂದಿಗೆ ಕನ್ನಡಿಗರು ಕೂಡ ಈ ಬಾರಿ ತಮ್ಮ ಧ್ವನಿ ಎತ್ತುತ್ತಿದ್ದಾರೆ. ‘ಲೋಕಃ’ ಸಿನಿಮಾ ಹೊಸ ಪ್ರಯತ್ನ, ಸೂಪರ್ ಹೀರೋ ಶೈಲಿಯ ಕಥಾನಕ. ಚಿತ್ರವಿಡೀ ಬೆಂಗಳೂರನ್ನೇ ನೆಲೆ ಮಾಡಿಕೊಂಡಿದೆ. ಆದರೆ, ಕೆಲವು ತಪ್ಪಾದ ಚಿತ್ರಣಗಳು, ಅವಹೇಳನಕಾರಿ ಪದಗಳು ಮತ್ತು ಭಾಷಾ ಸಂವೇದನೆಗಳನ್ನು ಲೆಕ್ಕಿಸದಿರುವುದರಿಂದ ಸಿನಿಮಾ ಟೀಕೆಗೆ ಗುರಿಯಾಗಿದೆ. ಸಿನಿಮಾ ಕಲೆಯಾದರೂ, ಅದು ಸಮಾಜದ ಪ್ರತಿಬಿಂಬವೂ ಹೌದು. ಭಾಷೆ, ಸಂಸ್ಕೃತಿ, ಮಹಿಳೆಯರ ಗೌರವ – ಇವೆಲ್ಲಕ್ಕೂ ಕಲೆ ಜವಾಬ್ದಾರಿಯುತವಾಗಿರಬೇಕು. ಕನ್ನಡಿಗರು ತಮ್ಮ ಗುರುತಿಗೆ ಧಕ್ಕೆ ಬಾರದಂತೆ ಪ್ರತಿಕ್ರಿಯಿಸುತ್ತಿರುವುದು ಸರಿಯೇ ಸರಿ.