'ಕೂಲಿ' ಬಳಿಕ ಲೋಕೇಶ್ ಕನಕರಾಜ್–ರಚಿತಾ ರಾಮ್ ಜೋಡಿ?


ರಜನಿಕಾಂತ್ ನಟನೆಯ 'ಕೂಲಿ' ಸಿನಿಮಾ ಬಿಡುಗಡೆಯಾದ ಕ್ಷಣದಿಂದಲೇ ಭಾರೀ ನಿರೀಕ್ಷೆ ಹುಟ್ಟಿಸಿತ್ತು. ಉಪೇಂದ್ರ ಹಾಗೂ ರಚಿತಾ ರಾಮ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಈ ಚಿತ್ರ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಪಡೆಯುತ್ತಿದ್ದರೂ ಬಾಕ್ಸಾಫೀಸ್‌ನಲ್ಲಿ ತಕ್ಕಮಟ್ಟಿಗೆ ಸಾಧನೆ ಮಾಡುತ್ತಿದೆ. ವಿಶೇಷವಾಗಿ ರಚಿತಾ ರಾಮ್ ಅವರ ಅಭಿನಯ ಪ್ರೇಕ್ಷಕರನ್ನು ಹಾಗೂ ವಿಮರ್ಶಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.
ಕನ್ನಡ ಚಿತ್ರರಂಗದ ಡಿಂಪಲ್ ಕ್ವೀನ್ ರಚಿತಾ ರಾಮ್ ಈ ಸಿನಿಮಾದ ಮೂಲಕ ಕಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದಾರೆ. ಪ್ರೇಕ್ಷಕರು ಅವರ ಪಾತ್ರ ಹಾಗೂ ಅಭಿನಯವನ್ನು ಮೆಚ್ಚಿಕೊಂಡಿದ್ದಾರೆ. ಕೆಲವರು “'ಕೂಲಿ' ಚಿತ್ರದ ನಿಜವಾದ ನಾಯಕಿ ರಚಿತಾ ರಾಮ್” ಎಂದು ಹೇಳುವ ಮಟ್ಟಿಗೆ ಆಕೆಯ ಪಾತ್ರ ಪ್ರೇಕ್ಷಕರ ಮನಸೂರೆಗೊಂಡಿದೆ. ರಚಿತಾ ರಾಮ್ ಅವರಿಗೆ ಮೊದಲಿನಿಂದಲೂ ನೆಗಟಿವ್ ಶೇಡ್ ಇರುವ ಪಾತ್ರದಲ್ಲಿ ನಟಿಸುವ ಆಸೆ ಇತ್ತು. ರಜನಿಕಾಂತ್ ಅವರ 'ಪಡೆಯಪ್ಪ' ಸಿನಿಮಾದಲ್ಲಿ ರಮ್ಯಾಕೃಷ್ಣ ನಟಿಸಿದ ನೀಲಾಂಬರಿ ಪಾತ್ರದಂತದ್ದೇ ಒಂದು ಅವಕಾಶ ಬೇಕೆಂಬುದು ಅವರ ಬಯಕೆ. 'ಕೂಲಿ' ಸಿನಿಮಾದ ಕಲ್ಯಾಣಿ ಪಾತ್ರದ ಮೂಲಕ ಆ ಕನಸು ನನಸಾಗಿದೆ.
‘ಕೈದಿ’, ‘ಮಾಸ್ಟರ್’, ‘ವಿಕ್ರಂ’ ಹಾಗೂ ‘ಲಿಯೋ’ ಮೂಲಕ ತಮಿಳು ಚಿತ್ರರಂಗದಲ್ಲಿ ತನ್ನದೇ ಆದ ಪ್ರಭಾವ ಬೀರಿದ ಲೋಕೇಶ್ ಕನಕರಾಜ್, ‘ಕೂಲಿ’ ಚಿತ್ರದ ಮೂಲಕ ರಜನಿಕಾಂತ್ ಜೊತೆಗೆ ಕೆಲಸ ಮಾಡುವ ಅವಕಾಶ ಪಡೆದಿದ್ದರು. ಈ ಸಿನಿಮಾದ ಹೈಪ್ 1000 ಕೋಟಿ ರೂ. ಕಲೆಕ್ಷನ್ ಮಾಡುವ ಮಟ್ಟಿಗೆ ಏರಿತ್ತು. ಆದರೆ ನಿರೀಕ್ಷೆಗೂ ಮೀರಿ ಬಾಕ್ಸಾಫೀಸ್‌ನಲ್ಲಿ ಅಷ್ಟೇನೂ ದಾಖಲೆ ಮಾಡದಿದ್ದರೂ, ಸಿನಿಮಾ 500 ಕೋಟಿ ರೂ. ಗ್ರಾಸ್ ಗಳಿಸಿದೆ ಎಂದು ಬಾಕ್ಸಾಫೀಸ್ ವಲಯ ಹೇಳುತ್ತಿದೆ.
ಇದೀಗ ಲೋಕೇಶ್ ನಿರ್ದೇಶನ ಮಾತ್ರವಲ್ಲ, ಹೀರೋ ಆಗಿ ನಟಿಸಲು ಸಜ್ಜಾಗುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಅರುಣ್ ಮಥೇಶ್ವರನ್ ನಿರ್ದೇಶನದಲ್ಲಿ ಲೋಕೇಶ್ ನಟಿಸುತ್ತಾರೆ ಎಂದು ಹೇಳಲಾಗುತ್ತಿದೆ. ಈ ಸಿನಿಮಾದಲ್ಲಿ ರಚಿತಾ ರಾಮ್ ನಾಯಕಿಯಾಗಿ ಕಾಣಿಸಿಕೊಳ್ಳುವರು ಎಂಬ ಗುಸುಗುಸು ತಮಿಳುನಾಡಿನಲ್ಲಿ ಹಬ್ಬಿದೆ. ‘ಕೂಲಿ’ ಚಿತ್ರದಿಂದ ತಮಿಳು ಚಿತ್ರರಂಗದಲ್ಲಿ ತನ್ನದೇ ಆದ ಗುರುತು ಮೂಡಿಸಿಕೊಂಡಿರುವ ರಚಿತಾ ರಾಮ್, ಇದನ್ನು ತನ್ನ ದೊಡ್ಡ ಅವಕಾಶವೆಂದು ಪರಿಗಣಿಸಿದ್ದಾರೆ. ಟ್ರೈಲರ್ ಬಿಡುಗಡೆಯಾಗುವ ತನಕ ತಮ್ಮ ಪಾತ್ರವನ್ನು ರಹಸ್ಯವಾಗಿಟ್ಟಿದ್ದ ರಚಿತಾ, ಸಿನಿಮಾ ಬಿಡುಗಡೆಯಾದ ಬಳಿಕ ತಮಿಳು ಪ್ರೇಕ್ಷಕರ ಪ್ರೀತಿಯನ್ನು ಗಳಿಸಿದ್ದಾರೆ.
ಈ ಚಿತ್ರದಲ್ಲಿ ಮಲಯಾಳಂ ನಟ ಸೌಬಿನ್ ಸಾಹಿರ್ ಮತ್ತು ರಚಿತಾ ರಾಮ್ ಅವರ ಪಾತ್ರಗಳು ಚಿತ್ರದ ಹೃದಯ ಎಂಬಂತೆ ಕಾಣಿಸಿಕೊಂಡಿವೆ. ಅದಕ್ಕಾಗಿಯೇ ಹಲವರು “ಇವರಿಬ್ಬರ ಅಭಿನಯವೇ ಸಿನಿಮಾವನ್ನು ಎಳೆದುಕೊಂಡು ಹೋಗಿದೆ” ಎಂದು ಹೇಳುತ್ತಿದ್ದಾರೆ. ಚಿತ್ರ ಬಿಡುಗಡೆಯಾದ ಬಳಿಕ ಕೆಲವರು ಸಿನಿಮಾ ಸೋತಿದೆ ಎಂದು ಹೇಳಿದರೂ, ಇನ್ನೂ ಸಿನಿಮಾ 500 ಕೋಟಿ ರೂ. ದಾಟಿದೆ ಎಂದು ವರದಿಯಾಗಿದೆ. ಕರ್ನಾಟಕದಲ್ಲಿಯೂ ಸಿನಿಮಾ ತಕ್ಕಮಟ್ಟಿಗೆ ಓಡುತ್ತಿದೆ.
ಒಟ್ಟಿನಲ್ಲಿ, 'ಕೂಲಿ' ಸಿನಿಮಾ ರಚಿತಾ ರಾಮ್‌ಗೆ ಕಾಲಿವುಡ್ ಬಾಗಿಲು ತೆರೆಯುವ ದೊಡ್ಡ ಅವಕಾಶ ನೀಡಿದೆ. ಈಗ ಪ್ರಶ್ನೆ ಏನೆಂದರೆ – ಲೋಕೇಶ್ ಕನಕರಾಜ್ ಮುಂದಿನ ಸಿನಿಮಾದಲ್ಲಿ ಅವರು ನಾಯಕಿಯಾಗಿ ನಟಿಸುತ್ತಾರಾ? ಕಾದು ನೋಡಬೇಕಿದೆ.
Trending News
ಹೆಚ್ಚು ನೋಡಿ"‘ಅವರು ಮೆಂಟಲಿ ಸ್ಟ್ರಾಂಗ್, ಎಮೋಷನಲಿ ವೀಕ್’ – ದರ್ಶನ್ ಬಗ್ಗೆ ವಿ. ನಾಗೇಂದ್ರ ಪ್ರಸಾದ್ ಭಾವುಕರ ಮಾತು"

ಟ್ರೋಲ್ಗಳ ಅಟ್ಟಹಾಸ: ದರ್ಶನ್ ತಾಯಿ ಮೀನಾ ತೂಗುದೀಪ ಹಾಗೂ ಸುದೀಪ್ ತಾಯಿ ಸರೋಜಮ್ಮ ವಿರುದ್ಧ ಕೆಟ್ಟ ಕಾಮೆಂಟ್!
