Back to Top

ಅಮ್ಮನಿಲ್ಲದೆ ಕಷ್ಟ… ಖಾಲಿ ಮನೆ, ಖಾಲಿ ಕುರ್ಚಿ – ಕಿಚ್ಚ ಸುದೀಪ್ ಮನದಾಳದ ನೋವು

SSTV Profile Logo SStv September 1, 2025
ಕಿಚ್ಚ ಸುದೀಪ್ ಮನದಾಳದ ನೋವು
ಕಿಚ್ಚ ಸುದೀಪ್ ಮನದಾಳದ ನೋವು

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ತಮ್ಮ ಹುಟ್ಟುಹಬ್ಬದ ಮುನ್ನಾದಿನ ಮಾಧ್ಯಮಗಳ ಜೊತೆ ಮಾತನಾಡಿದಾಗ ತಮ್ಮ ತಾಯಿಯ ನೆನಪಿನಲ್ಲಿ ತುಂಬಾ ಭಾವುಕರಾದರು. ತಾಯಿ ಇಲ್ಲದ ಮನೆಯಲ್ಲಿ ಹುಟ್ಟುಹಬ್ಬ ಆಚರಿಸುವ ನೋವನ್ನು ಅವರು ಮರೆಮಾಚಲಿಲ್ಲ. ಸುದೀಪ್ ತಮ್ಮ ಮನದಾಳದ ನೋವನ್ನು ಹಂಚಿಕೊಂಡು ಹೇಳಿದರು: “ಅಮ್ಮ ಇಲ್ಲದ ಮನೆಯಲ್ಲಿ ಎಲ್ಲವೂ ಖಾಲಿ ಖಾಲಿ ಅನ್ನಿಸುತ್ತದೆ. ಕೆಳಗಡೆ ಬರೋಕೆ ನಾನು ಇಷ್ಟಪಡುವುದೇ ಇಲ್ಲ. ಸದಾ ಮೇಲಂತಸ್ತಿನಲ್ಲಿ ಇರುತ್ತೇನೆ. ಏಕೆಂದರೆ ಕೆಳಗೆ ಬಂದರೆ ಆ ಖಾಲಿ ಕುರ್ಚಿ, ಖಾಲಿ ಮನೆ ನನ್ನ ಕಣ್ಣಿಗೆ ಬೀಳುತ್ತವೆ. ಅದನ್ನು ನೋಡೋಕೆ ಆಗೋದಿಲ್ಲ. ತುಂಬಾ ಕಷ್ಟವಾಗುತ್ತದೆ.”

“ಹಿಂದೆ ಪ್ರತಿದಿನ ಹೊರಗೆ ಹೋಗುವ ಮುನ್ನ ಅಪ್ಪ ಮತ್ತು ಅಮ್ಮನ ಕಾಲಿಗೆ ಬಿದ್ದು ಆಶೀರ್ವಾದ ಪಡೆದು ಹೋಗುತ್ತಿದ್ದೆ. ಆದರೆ ಈಗ ಅದು ಸಾಧ್ಯವಾಗುತ್ತಿಲ್ಲ. ಪ್ರತಿ ಹುಟ್ಟುಹಬ್ಬಕ್ಕೂ ಅವರಿಬ್ಬರ ಆಶೀರ್ವಾದ ಪಡೆಯುತ್ತಿದ್ದೆ. ಆದರೆ, ಈ ಬಾರಿ ಅಮ್ಮನಿಲ್ಲ. ಅದನ್ನ ಸ್ವೀಕರಿಸುವುದೇ ಕಷ್ಟ.” ಸುದೀಪ್ ಭಾವುಕರಾಗಿ ಹೇಳಿದರು: "ಅಮ್ಮ ಹೋಗಿ ಈಗ ಒಂದು ವರ್ಷವಾಗುತ್ತಿದೆ. ಆದರೆ, ಈ ಒಂದು ವರ್ಷದಲ್ಲಿ ಮನೆಯಲ್ಲಿ ಏನನ್ನೂ ಮಾಡಿಲ್ಲ. ಆಚರಣೆಗಳನ್ನೇ ತಪ್ಪಿಸಿದ್ದೇವೆ. ಅಮ್ಮ ಇಲ್ಲ ಅನ್ನುವ ನೋವು ಇನ್ನೂ ಮನದಲ್ಲಿ ಹಾಗೆಯೇ ಇದೆ. ಕೆಲವೊಮ್ಮೆ ಮಾತಾಡೋಕೆ ಕೂಡ ಆಗೋದಿಲ್ಲ, ಅಷ್ಟು ಕಷ್ಟ ಆಗುತ್ತದೆ."

ಅವರು ಅಭಿಮಾನಿಗಳ ಪ್ರೀತಿಯನ್ನು ಕುರಿತು ಮಾತನಾಡಿ ಹೇಳಿದರು: “ನಾನು ಈ ವರ್ಷ ಮನೆಯಲ್ಲೇ ಏನನ್ನೂ ಮಾಡೋಣ ಅಂತಿರಲಿಲ್ಲ. ಆದರೂ ಅಭಿಮಾನಿಗಳ ಪ್ರೀತಿಗೆ ಬೇಡ ಅಂತ ಹೇಗೆ ಹೇಳೋದು? ಅವರಿಗಾಗಿ ನಂದಿ ಲಿಂಕ್ಸ್ ಗ್ರೌಂಡ್‌ನಲ್ಲಿ ರಾತ್ರಿ 8 ಗಂಟೆಯಿಂದಲೇ ಕಾರ್ಯಕ್ರಮ ಶುರುವಾಗುತ್ತದೆ. ನಾನು 10.30–11 ಗಂಟೆಯೊಳಗೆ ಅಲ್ಲಿಗೆ ಬರುತ್ತೇನೆ. ಮಧ್ಯರಾತ್ರಿ 12 ಗಂಟೆಗೆ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸುತ್ತೇನೆ.” ಒಟ್ಟಿನಲ್ಲಿ, ಕಿಚ್ಚ ಸುದೀಪ್ ತಮ್ಮ ತಾಯಿಯ ಅಭಾವವನ್ನು ಮನದಾಳದಿಂದ ವ್ಯಕ್ತಪಡಿಸಿದ್ದು, “ಅಮ್ಮ ಇಲ್ಲದ ಮನೆಯಲ್ಲಿ ಖಾಲಿತನ” ಎಂಬ ಅವರ ಮಾತು ಪ್ರತಿಯೊಬ್ಬರ ಮನಸ್ಸನ್ನೂ ಸ್ಪರ್ಶಿಸಿದೆ.