Back to Top

ಸುದೀಪ್ ಚಾರಿಟೇಬಲ್ ಟ್ರಸ್ಟ್ ಮುಖಾಂತರ ಅಮ್ಮನ ನೆನಪಿಗೆ ಗಿಡ ನೆಡುವ ಅಭಿಯಾನ

SSTV Profile Logo SStv September 1, 2025
ಕಿಚ್ಚ ಸುದೀಪ್ ಹಸಿರು ಕ್ರಾಂತಿ ಆರಂಭ!
ಕಿಚ್ಚ ಸುದೀಪ್ ಹಸಿರು ಕ್ರಾಂತಿ ಆರಂಭ!

ಕನ್ನಡದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ತಮ್ಮ ತಾಯಿ ಸರೋಜಾ ಅವರ ನೆನಪಿಗಾಗಿ ಹೃದಯಸ್ಪರ್ಶಿ ಸಾಮಾಜಿಕ ಕಾರ್ಯವೊಂದಕ್ಕೆ ಚಾಲನೆ ನೀಡಿದ್ದಾರೆ. ಆಗಸ್ಟ್ 30ರಂದು, ತಾಯಿ ಸರೋಜಾ ಅವರ ಹುಟ್ಟುಹಬ್ಬದ ದಿನ, ಸುದೀಪ್ "ಅಮ್ಮನ ಹೆಜ್ಜೆಗೆ ಹಸಿರು ಹೆಜ್ಜೆ" ಎಂಬ ಉದ್ದೇಶದೊಂದಿಗೆ ಹಸಿರು ಕ್ರಾಂತಿಗೆ ಚಾಲನೆ ನೀಡಿದರು. ಬೆಂಗಳೂರು ಕುಮಾರಸ್ವಾಮಿ ಲೇಔಟ್ ಪಾರ್ಕ್‌ನಲ್ಲಿ ಸುದೀಪ್ ಹಾಗೂ ಅವರ ಕುಟುಂಬದವರು ಸೇರಿಕೊಂಡು ಗಿಡ ನೆಟ್ಟರು. ತಾಯಿಯ ನೆನಪಿಗಾಗಿ ಅವರು ತೆಂಗಿನ ಮರವನ್ನು ನೆಟ್ಟು ಹೊಸ ಬದುಕಿಗೆ ಅಂಕುರ ಕೊಟ್ಟರು. ಇದೇ ಸಂದರ್ಭದಲ್ಲಿ ಸುದೀಪ್ "ಪ್ರತಿ ಮರಕ್ಕೂ ಒಂದು ಕಥೆ ಇದೆ. ಈ ಮರವು ನನ್ನ ಅಮ್ಮನ ಕಥೆ ಹೇಳಲಿ" ಎಂಬ ಹೃದಯಸ್ಪರ್ಶಿ ಸಂದೇಶ ಹಂಚಿಕೊಂಡರು.

ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ತಾಯಿ ಸರೋಜಾ ಅವರು ಅಗಲಿದರು. ಅವರ ಅಗಲಿಕೆಯ ನೋವಿನಿಂದ ಇನ್ನೂ ಸಂಪೂರ್ಣವಾಗಿ ಹೊರಬಂದಿಲ್ಲದ ಸುದೀಪ್, ತಾಯಿಯ ನೆನಪನ್ನು ಸಮಾಜಕ್ಕೆ ಒಳ್ಳೆಯದನ್ನು ಮಾಡುವ ಮೂಲಕ ಉಳಿಸಲು ನಿರ್ಧರಿಸಿದ್ದಾರೆ. ಈ ಕಾರಣದಿಂದಲೇ ಸುದೀಪ್ ಚಾರಿಟೇಬಲ್ ಟ್ರಸ್ಟ್ ಮುಖಾಂತರ ಹಸಿರು ಕ್ರಾಂತಿಯನ್ನು ಮುಂದುವರಿಸಲು ಯೋಜನೆ ರೂಪಿಸಿದ್ದಾರೆ. ಬೆಂಗಳೂರಿನಷ್ಟೇ ಅಲ್ಲ, ಇನ್ನೂ ಹಲವೆಡೆ ಗಿಡ ನೆಡುವ ಕಾರ್ಯಕ್ರಮಗಳು ನಡೆಯಲಿವೆ.

ಸೆಪ್ಟೆಂಬರ್ 2ರಂದು ಕಿಚ್ಚ ಸುದೀಪ್ ಅವರ ಹುಟ್ಟುಹಬ್ಬ. ಪ್ರತಿವರ್ಷ ಅಭಿಮಾನಿಗಳು ಅದನ್ನು ಭರ್ಜರಿಯಾಗಿ ಆಚರಿಸುತ್ತಾರೆ. ಕಳೆದ ಬಾರಿ ಜಯನಗರದ ಎಂಇಎಸ್ ಮೈದಾನದಲ್ಲಿ ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ಕೇಕ್ ಕತ್ತರಿಸಿ ಸಂಭ್ರಮಿಸಿದ್ದರು. ಆದರೆ ಈ ಬಾರಿ ಸುದೀಪ್ ವಿಶೇಷ ಮನವಿ ಮಾಡಿದ್ದಾರೆ "ಮನೆ ಬಳಿ ಬರಬೇಡಿ, ಬದಲಾಗಿ ಸೆಪ್ಟೆಂಬರ್ 1ರ ರಾತ್ರಿ ನಾವು ಎಲ್ಲರೂ ಒಂದೇ ಕಡೆ ಸೇರೋಣ" ಎಂದು ಅಭಿಮಾನಿಗಳಿಗೆ ಸಂದೇಶ ನೀಡಿದ್ದಾರೆ. ಇದರ ಪ್ರಮುಖ ಕಾರಣ ಈ ಬಾರಿ ತಾಯಿ ಇಲ್ಲದ ಮೊದಲ ಹುಟ್ಟುಹಬ್ಬವಾಗಿರುವುದರಿಂದ ಕುಟುಂಬದಲ್ಲಿ ಶಾಂತಿ ವಾತಾವರಣ ಇರಲಿ ಎಂಬ ಅವರ ಬಯಕೆ.

ಸುದೀಪ್ ಅವರ ಈ ಹಸಿರು ಕ್ರಾಂತಿ ಮತ್ತು ತಾಯಿ ನೆನಪಿನ ಕಾರ್ಯವನ್ನು ಅಭಿಮಾನಿಗಳು ಹೃದಯಂಗಮವಾಗಿ ಸ್ವೀಕರಿಸಿದ್ದಾರೆ. "ಅಮ್ಮನ ಹೆಜ್ಜೆಗೆ ಹಸಿರು ಹೆಜ್ಜೆ" ಎಂಬ ಸ್ಲೋಗನ್ ಈಗಾಗಲೇ ಟ್ರೆಂಡ್ ಆಗಿದೆ. ಅಮ್ಮನ ಪ್ರೀತಿಯನ್ನು ಹಸಿರು ಕ್ರಾಂತಿಯ ಮೂಲಕ ಸಮಾಜಕ್ಕೆ ಹಂಚುತ್ತಿರುವ ಕಿಚ್ಚ ಸುದೀಪ್, ಅಭಿಮಾನಿಗಳ ಮನದಲ್ಲಿ ಮತ್ತಷ್ಟು ಪ್ರೀತಿಯನ್ನು ಗಳಿಸಿದ್ದಾರೆ. ಅವರ ಈ ಕಾರ್ಯ ಕನ್ನಡ ಚಿತ್ರರಂಗದಷ್ಟೇ ಅಲ್ಲ, ಸಮಾಜಕ್ಕೂ ಸ್ಫೂರ್ತಿಯಾಗಿದೆ.