Back to Top

ಬಿಗ್ ಬಾಸ್ ಕನ್ನಡ ಸೀಸನ್ 12ಕ್ಕೆ ಕಿಚ್ಚ ಸುದೀಪ್ ಸಜ್ಜು – ಹೊಸ ಪ್ರೋಮೋ ಬಿಡುಗಡೆ

SSTV Profile Logo SStv September 3, 2025
ಬಿಗ್ ಬಾಸ್ ಕನ್ನಡ ಸೀಸನ್ 12ಕ್ಕೆ ಕಿಚ್ಚ ಸುದೀಪ್ ಸಜ್ಜು
ಬಿಗ್ ಬಾಸ್ ಕನ್ನಡ ಸೀಸನ್ 12ಕ್ಕೆ ಕಿಚ್ಚ ಸುದೀಪ್ ಸಜ್ಜು

ನಟ ಕಿಚ್ಚ ಸುದೀಪ್ ಅವರ ಹುಟ್ಟುಹಬ್ಬದಂದು ಕನ್ನಡದ ಬಿಗ್ ಬಾಸ್ ಅಭಿಮಾನಿಗಳಿಗೆ ವಿಶೇಷ ಸಿಹಿ ಸುದ್ದಿ ಸಿಕ್ಕಿದೆ. ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್ ಕನ್ನಡ ಸೀಸನ್ 12’ ಶೀಘ್ರದಲ್ಲೇ ಪ್ರಾರಂಭವಾಗಲಿದ್ದು, ಅದರ ಪ್ರೋಮೋವನ್ನು ಬಿಡುಗಡೆ ಮಾಡಲಾಗಿದೆ. ಸೆಪ್ಟೆಂಬರ್ 28ರ ಭಾನುವಾರ ಬಿಗ್ ಬಾಸ್ ಕನ್ನಡ ಸೀಸನ್ 12 ಗ್ರ್ಯಾಂಡ್ ಓಪನಿಂಗ್ ನಡೆಯಲಿದೆ. ಕಿರುತೆರೆ ಪ್ರೇಕ್ಷಕರಲ್ಲಿ ಬಿಗ್ ಬಾಸ್ ಶೋಗೆ ಇರುವ ಕ್ರೇಜ್ ಅಸಾಧಾರಣ. ಈಗಾಗಲೇ 11 ಸೀಸನ್‌ಗಳು ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಇದೀಗ 12ನೇ ಸೀಸನ್‌ಗೆ ದಿನಗಣನೆ ಶುರುವಾಗಿದೆ.

ಈ ಬಾರಿ ಬಿಡುಗಡೆ ಮಾಡಿದ ಪ್ರೋಮೋದಲ್ಲಿ ಕಿಚ್ಚ ಸುದೀಪ್ ಅವರ ಮಾರ್ಕ್ ಸಿನಿಮಾದ ಉದ್ದ ಕೂದಲಿನ ಲುಕ್ ಭಾರೀ ಗಮನ ಸೆಳೆಯುತ್ತಿದೆ. ಇದೇ ಗೆಟಪ್‌ನಲ್ಲಿ ಅವರು ಬಿಗ್ ಬಾಸ್ ಪ್ರೋಮೋದಲ್ಲಿ ಕಾಣಿಸಿಕೊಂಡಿದ್ದು, ಅಭಿಮಾನಿಗಳು ಖುಷಿಪಟ್ಟಿದ್ದಾರೆ. ಪ್ರೋಮೋದಲ್ಲಿ ಸುದೀಪ್ ಅವರು “ಕರ್ನಾಟಕದಲ್ಲಿ ವೈವಿದ್ಯತೆ ಅಸಂಖ್ಯಾತ. ಊಟ, ಉಡುಗೆ, ಅಭಿರುಚಿ ಪ್ರತಿ ಕ್ಷೇತ್ರದಲ್ಲೂ ವೈವಿಧ್ಯತೆ ಇದೆ. ಕೆಲವರಿಗೆ ಸಿನಿಮಾ, ಕೆಲವರಿಗೆ ಕ್ರೀಡೆ, ಕೆಲವರಿಗೆ ಸುದ್ದಿ ಇಷ್ಟ. ಆದರೆ ಎಲ್ಲರನ್ನೂ ಒಂದಾಗಿಸುವ ಶಕ್ತಿ ಬಿಗ್ ಬಾಸ್ ಶೋದಲ್ಲಿದೆ” ಎಂದು ಹೇಳಿದ್ದಾರೆ.

“ಹೊಸ ಸೆಟ್ ರೆಡಿ, ಹೊಸ ಸ್ಪರ್ಧಿಗಳು ರೆಡಿ, 7 ಕೋಟಿ ಕನ್ನಡಿಗರೂ ರೆಡಿ. ಸರ್, ನೀವು ರೆಡಿಯಾ?” ಎಂಬ ಪ್ರಶ್ನೆಗೆ ಸುದೀಪ್ ಅವರ ಕ್ಲಾಸಿಕ್ ಸ್ಟೈಲ್ ಉತ್ತರ “ರೆಡಿ..” ಎಂಬುದು ಅಭಿಮಾನಿಗಳ ಹೃದಯ ಗೆದ್ದಿದೆ. ಈ ಬಾರಿ ಯಾವೆಲ್ಲ ಸ್ಪರ್ಧಿಗಳು ಮನೆಗೆ ಪ್ರವೇಶಿಸಲಿದ್ದಾರೆ ಎಂಬುದರ ಬಗ್ಗೆ ಕುತೂಹಲ ಈಗಾಗಲೇ ಹೆಚ್ಚಾಗಿದೆ.

ಕಿಚ್ಚ ಸುದೀಪ್ ಅವರು ಪ್ರಸ್ತುತ ‘ಮಾರ್ಕ್’ ಹಾಗೂ ‘ಬಿಲ್ಲ ರಂಗ ಭಾಷಾ’ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅದೇ ವೇಳೆಯಲ್ಲಿ ತಮ್ಮ ನೆಚ್ಚಿನ ಬಿಗ್ ಬಾಸ್ ಶೋವನ್ನು ನಿರೂಪಿಸಲು ಸಜ್ಜಾಗಿರುವುದು ಅಭಿಮಾನಿಗಳಿಗೆ ಡಬಲ್ ಟ್ರೀಟ್ ಆಗಿದೆ. ಸೆಪ್ಟೆಂಬರ್ 28 ರಂದು ‘ಕಲರ್ಸ್ ಕನ್ನಡ’ ವಾಹಿನಿಯಲ್ಲಿ ಬಿಗ್ ಬಾಸ್ ಸೀಸನ್ 12 ಭರ್ಜರಿ ಆರಂಭವಾಗಲಿದೆ.