Back to Top

ತೇಜ್ ಸಜ್ಜಾ – ಪೀಪಲ್ ಮೀಡಿಯಾ ಫ್ಯಾಕ್ಟರಿ ಬ್ಯಾನರ್‌ನಿಂದ ಹೊಸ ಚಿತ್ರ ಘೋಷಣೆ

SSTV Profile Logo SStv August 25, 2025
ತೇಜ್ ಸಜ್ಜಾ ಹುಟ್ಟುಹಬ್ಬಕ್ಕೆ ಕಾನ್ಸೆಪ್ಟ್ ಪೋಸ್ಟರ್‌ ಬಿಡುಗಡೆ
ತೇಜ್ ಸಜ್ಜಾ ಹುಟ್ಟುಹಬ್ಬಕ್ಕೆ ಕಾನ್ಸೆಪ್ಟ್ ಪೋಸ್ಟರ್‌ ಬಿಡುಗಡೆ

‘ಹನುಮಾನ್’ ಸಿನಿಮಾ ಮೂಲಕ ಸೂಪರ್‌ ಹೀರೋ ಸ್ಥಾನ ಪಡೆದ ತೇಜ್‌ ಸಜ್ಜಾ, ಈಗ ‘ಮಿರೈ’ ನಂತರ ಮತ್ತೊಂದು ಮೆಗಾ ಸಿನಿಮಾದಲ್ಲಿ ಸಂಚಲನ ಸೃಷ್ಟಿಸಲು ಸಜ್ಜಾಗಿದ್ದಾರೆ! ‘ಹನುಮಾನ್’‌ ಸಿನಿಮಾ ಮೂಲಕ ದೇಶವ್ಯಾಪಿ ಖ್ಯಾತಿ ಗಳಿಸಿರುವ ನಟ ತೇಜ್‌ ಸಜ್ಜಾ, ಪ್ರಸ್ತುತ ‘ಮಿರೈ’  ಸಿನಿಮಾದಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. ಇದೀಗ ಹುಟ್ಟುಹಬ್ಬದ ವಿಶೇಷ ದಿನದ ಪ್ರಯುಕ್ತ ಪೀಪಲ್ ಮೀಡಿಯಾ ಫ್ಯಾಕ್ಟರಿ ತನ್ನ ಮುಂದಿನ ಚಿತ್ರವನ್ನು ಅದ್ದೂರಿಯಾಗಿ ಘೋಷಿಸಿದೆ. ಈ ಚಿತ್ರದಲ್ಲೂ ತೇಜ್‌ ಸಜ್ಜಾ ನಾಯಕನಾಗಲಿದ್ದಾರೆ. 

‘ಮಿರೈ’ ಸಿನಿಮಾ ಬಳಿಕ ತೇಜ್‌ ಸಜ್ಜಾ ಹಾಗೂ ಪೀಪಲ್ ಮೀಡಿಯಾ ಫ್ಯಾಕ್ಟರಿಯ ಎರಡನೇ ಸಹಯೋಗ ಇದಾಗಿದ್ದು, ದೊಡ್ಡ ಮಟ್ಟದಲ್ಲಿ ಈ ಸಿನಿಮಾ ನಿರ್ಮಾಣವಾಗಲಿದೆ. ನಿರ್ಮಾಪಕ ಟಿ.ಜಿ. ವಿಶ್ವ ಪ್ರಸಾದ್ ಹಾಗೂ ಕೃತಿ ಪ್ರಸಾದ್ ಭಾರೀ ಬಜೆಟ್‌ನಲ್ಲಿ ಈ ಹೊಸ ಚಿತ್ರವನ್ನೂ  ನಿರ್ಮಿಸಲಿದ್ದು, ತಾಂತ್ರಿಕವಾಗಿ ಹೆಚ್ಚು ಬಲಿಷ್ಠವಾಗಿರಲಿದೆ. ಈ ಪ್ಯಾನ್-ಇಂಡಿಯಾ ಚಿತ್ರಕ್ಕಾಗಿ ಬಿಡುಗಡೆಗೊಂಡಿರುವ ಕಾನ್ಸೆಪ್ಟ್ ಪೋಸ್ಟರ್ ಈಗಾಗಲೇ ಅಭಿಮಾನಿಗಳನ್ನು ಹುಚ್ಚೆಬ್ಬಿಸಿದೆ. ಕಪ್ಪು-ಕೆಂಪು ಥೀಮ್‌ನಲ್ಲಿ ಮೂಡಿಬಂದಿರುವ ಪೋಸ್ಟರ್‌ ಸಖತ್‌ ಇಂಟ್ರೆಸ್ಟಿಂಗ್‌ ಆಗಿದೆ.  

ಪೋಸ್ಟರ್‌ನಲ್ಲಿ “ರಾಯಲಸೀಮೆಯಿಂದ ಪ್ರಪಂಚದ ಕೊನೆಯವರೆಗೂ” ಎಂಬ ಕ್ಯಾಪ್ಷನ್‌ ಇದ್ದು, ಪ್ರಾದೇಶಿಕ ಕಥೆಯನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಲಿದೆ ಎಂಬುದನ್ನು ಸೂಚ್ಯವಾಗಿ ಹೇಳುತ್ತದೆ. ಈ ಸಿನಿಮಾದ ನಿರ್ದೇಶಕರು ಯಾರು, ತಾಂತ್ರಿಕ ಬಳಗದ ಜತೆಗೆ ತಾರಾಗಣದ ಮಾಹಿತಿಯೂ ಮುಂದಿನ ದಿನಗಳಲ್ಲಿ ಸಿಗಲಿದೆ.

ಸದ್ಯ ಈ ಪೋಸ್ಟರ್ ಹಾಗೂ ಕುತೂಹಲ ಕೆರಳಿಸುವ ಅಡಿಬರಹ ಅಭಿಮಾನಿಗಳ ನಿರೀಕ್ಷೆಯನ್ನು  ದುಪ್ಪಟ್ಟು ಮಾಡಿದೆ. ಈ ಪ್ಯಾನ್-ಇಂಡಿಯಾ ಚಿತ್ರವನ್ನು 2027ರ ಸಂಕ್ರಾಂತಿಯಂದು ಬಿಡುಗಡೆ ಮಾಡುವುದಾಗಿ ನಿರ್ಮಾಪಕರು ಅಧಿಕೃತವಾಗಿ ಘೋಷಿಸಿದ್ದಾರೆ.