Back to Top

ಹೆಸರಾಂತ ನಿರ್ದೇಶಕ ಸಿಂಪಲ್ ಸುನಿ ಅವರಿಂದ ಅನಾವರಣವಾಯಿತು 'ಓಂ ಶಿವಂ' ಚಿತ್ರದ ಟ್ರೇಲರ್

SSTV Profile Logo SStv August 26, 2025
ಸಿಂಪಲ್ ಸುನಿ ಅವರಿಂದ ಅನಾವರಣವಾಯಿತು 'ಓಂ ಶಿವಂ' ಚಿತ್ರದ ಟ್ರೇಲರ್
ಸಿಂಪಲ್ ಸುನಿ ಅವರಿಂದ ಅನಾವರಣವಾಯಿತು 'ಓಂ ಶಿವಂ' ಚಿತ್ರದ ಟ್ರೇಲರ್

ಚಿತ್ರರಂಗದೊಂದಿಗೆ ಹಲವು ವರ್ಷಗಳ ನಂಟಿರುವ ಅಲ್ವಿನ್ ನಿರ್ದೇಶನದ, ದೀಪಾ ಮೂವೀಸ್ ಲಾಂಛನದಲ್ಲಿ ಕೆ.ಎನ್.ಕೃಷ್ಣ ಅವರು ನಿರ್ಮಿಸಿರುವ ಹಾಗೂ ಭಾರ್ಗವ ಕೃಷ್ಣ ಮತ್ತು ವಿರಾನಿಕ ಶೆಟ್ಟಿ ನಾಯಕ - ನಾಯಕಿಯಾಗಿ ನಟಿಸಿರುವ "ಓಂ ಶಿವಂ" ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭ ಇತ್ತೀಚೆಗೆ ನೆರವೇರಿತು. ಹೆಸರಾಂತ ನಿರ್ದೇಶಕ ಸಿಂಪಲ್ ಸುನಿ ಟ್ರೇಲರ್ ಅನಾವರಣ ಮಾಡಿ, ಚಿತ್ರ ಯಶಸ್ವಿಯಾಗಲೆಂದು ಹಾರೈಸಿದರು. ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.

ಟ್ರೇಲರ್ ಬಿಡುಗಡೆ ಮಾಡಿಕೊಟ್ಟ ಸುನಿ ಅವರಿಗೆ ಧನ್ಯವಾದ ಎಂದು ಮಾತನಾಡಿದ ನಿರ್ದೇಶಕ ಆಲ್ವಿನ್, ನಮ್ಮ ಚಿತ್ರಕ್ಕೆ ಆರಂಭದ ದಿನದಿಂದಲೂ ತಾವು ನೀಡುತ್ತಿರುವ ಪ್ರೋತ್ಸಾಹಕ್ಕೆ ಚಿರ ಋಣಿ. ಈಗಾಗಲೇ ಸಂಗೀತ ನಿರ್ದೇಶಕ ವಿಜಯ್ ಯಾರ್ಡ್ಲಿ ಅವರು ಸಂಗೀತ ನೀಡಿರುವ ನಮ್ಮ ಚಿತ್ರದ ಮೂರು ಹಾಡುಗಳು ಬಿಡುಗಡೆಯಾಗಿದೆ. ನಾಲ್ಕನೇ ಹಾಡನ್ನು ಲೂಸ್ ಮಾದ ಯೋಗಿ ಅವರು ಸೆಪ್ಟೆಂಬರ್ 1 ರಂದು ಬಿಡುಗಡೆ ಮಾಡಲಿದ್ದಾರೆ. ಇಂದು ಟ್ರೇಲರ್ ಅನಾವರಣವಾಗಿದೆ. ಹಾಡುಗಳು ಹಾಗೂ ಟ್ರೇಲರ್ ಈಗಾಗಲೇ ಜನರ ಮನಸ್ಸಿಗೆ ಹತ್ತಿರವಾಗಿದೆ. ಸೆಪ್ಟೆಂಬರ್ 5 ರಂದು ಚಿತ್ರ ತೆರೆಗೆ ಬರಲಿದೆ. ವಿಜಯ್ ಸಿನಿಮಾಸ್ ಅವರು ವಿತರಣೆ ಮಾಡುತ್ತಿದ್ದಾರೆ. ಇದೊಂದು ಲವ್ ಮತ್ತು ಆ್ಯಕ್ಷನ್ ಚಿತ್ರ. ಎರಡು ಜಾನರ್‌ನಲ್ಲಿ ಸಿನಿಮಾ ಸಾಗುತ್ತದೆ. ಇಂದಿನ ಹುಡುಗ-ಹುಡುಗಿ ಪ್ರೀತಿ ಉಳಿಸಿಕೊಳ್ಳಲು ಹೇಗೆಲ್ಲಾ ಹೊರಾಡುತ್ತಾರೆ ಎಂಬ ಕಥೆ ಜೊತೆಗೆ ಭಾವನಾತ್ಮಕ ಸನ್ನಿವೇಶಗಳು ನೋಡುಗರ ಗಮನ ಸೆಳೆಯುತ್ತದೆ ಎಂದು ಹೇಳಿದರು.

ಚಿತ್ರದ ನಿರ್ಮಾಪಕ ಕೃಷ್ಣ ಕೆ.ಎನ್ ಮಾತನಾಡಿ, 20 ವರ್ಷಗಳ ಹಿಂದೆ ನಾನೇ ನಾಯಕನಾಗುವ ಆಸೆ‌ ಇತ್ತು. ಅದು ಆಗಲಿಲ್ಲ. ಈಗ ನನ್ನ ಮಗ ಭಾರ್ಗವ ಕೃಷ್ಣ ಈ ಚಿತ್ರದ ಮೂಲಕ ನಾಯಕನಾಗಿ ಚಿತ್ರರಂಗ ಪ್ರವೇಶಿಸಿದ್ದಾನೆ. ನಾನು ಕೂಡ ನಿರ್ಮಾಣದ ಜೊತೆಗೆ ಪೊಲೀಸ್ ಅಧಿಕಾರಿ ಪಾತ್ರ ಕೂಡ ಮಾಡಿದ್ದೇನೆ. ನಿರ್ದೇಶಕ ಆಲ್ವಿನ್ ಅವರು ಒಂದೊಳ್ಳೆ ಚಿತ್ರ ಮಾಡಿದ್ದಾರೆ. ಚಿತ್ರ ಉತ್ತಮವಾಗಿ ಬರಲು ಚಿತ್ರತಂಡ ಸಾಥ್ ನೀಡಿದೆ. ಕನ್ನಡ,  ತೆಲುಗು ಹಾಗೂ ತಮಿಳು ಮೂರು ಭಾಷೆಗಳಲ್ಲೂ "ಓಂ ಶಿವಂ" ನಿರ್ಮಾಣವಾಗಿದೆ. ಆದರೆ, ಸೆಪ್ಟೆಂಬರ್ 5 ಮೊದಲು ಕನ್ನಡದಲ್ಲಿ ಮಾತ್ರ ಈ ಚಿತ್ರ ಬಿಡುಗಡೆಯಾಗುತ್ತಿದೆ ಎಂದರು.

ನಾನು ದುಬೈನಲ್ಲಿ ಇಂಟರ್ ನ್ಯಾಷನಲ್ ಬ್ಯುಸಿನೆಸ್ ಮುಗಿಸಿದ್ದೇನೆ. ಚಿತ್ರೀಕರಣದ ಸಮಯದಲ್ಲಿ ಅಲ್ಲಿಂದಲೇ  ಓಡಾಡುತ್ತಿದೆ.‌ ಆಲ್ವಿನ್ ಅವರು ಹೇಳಿದ ಕಥೆ ಬಹಳ ಇಷ್ಟವಾಯಿತು. ಮೂರು ಶೇಡ್ ಗಳಲ್ಲಿ ನನ್ನ ಪಾತ್ರ ಇದೆ. ಶಿವ ನನ್ನ ಪಾತ್ರದ ಹೆಸರು. ಚಿತ್ರೀಕರಣಕ್ಕೂ ಮುನ್ನ ತಯಾರಿ ಮಾಡಿಕೊಂಡು ಆನಂತರ ನಟಿಸಿದ್ದೇನೆ. ಲವ್, ಆಕ್ಷನ್, ಸೆಂಟಿಮೆಂಟ್ ಹೀಗೆ ನೋಡುಗನಿಗೆ ಬೇಕಾದ ಎಲ್ಲಾ ಅಂಶಗಳು  ಈ ಚಿತ್ರದಲ್ಲಿದೆ. ನಮ್ಮ ತಂದೆ ಕೃಷ್ಣ ಅವರೆ ಈ ಚಿತ್ರದ ನಿರ್ಮಾಪಕರು. ವಿರಾನಿಕ ಶೆಟ್ಟಿ ಈ ಚಿತ್ರದ ನಾಯಕಿ. ಯಶ್ ಶೆಟ್ಟಿ, ವರ್ಧನ್ ತೀರ್ಥಹಳ್ಳಿ, ಕಾಕ್ರೋಜ್ ಸುಧೀ ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ ಎಂದು ನಾಯಕ ಭಾರ್ಗವ ಕೃಷ್ಣ ತಿಳಿಸಿದರು.

ಚಿತ್ರದ ಆರಂಭದಿಂದಲೂ ಸಹಕಾರ ನೀಡುತ್ತಿರುವ ಪ್ರತಿಯೊಬ್ಬರಿಗೂ ಧನ್ಯವಾದ ತಿಳಿಸಿದ ನಾಯಕಿ ವಿರಾನಿಕ ಶೆಟ್ಟಿ, ತಮ್ಮ ಪಾತ್ರದ ಬಗ್ಗೆ ವಿವರಣೆ ನೀಡಿದರು. ಚಿತ್ರದಲ್ಲಿ ನಟಿಸಿರುವ ನಟ ವರ್ಧನ್ ತೀರ್ಥಹಳ್ಳಿ, ನಟಿ ಅಪೂರ್ವ ಮುಂತಾದ ಚಿತ್ರತಂಡದ ಸದಸ್ಯರು "ಓಂ ಶಿವಂ" ಬಗ್ಗೆ ಮಾತನಾಡಿದರು. ವೀರೇಶ್ ಛಾಯಾಗ್ರಹಣ ಹಾಗೂ ಸತೀಶ್ ಚಂದ್ರ ಅವರ ಸಂಕಲನ ಈ ಚಿತ್ರಕ್ಕಿದೆ.