Back to Top

ಮಹಿಳೆಯರ ಗೌರವಕ್ಕೆ ಧಕ್ಕೆ: ದರ್ಶನ್ ಕುಟುಂಬದ ವಿರುದ್ಧ ಅಸಭ್ಯ ಕಮೆಂಟ್ ಮಾಡಿದವರಿಗೆ ಶಿಕ್ಷೆ ಗ್ಯಾರಂಟಿ

SSTV Profile Logo SStv August 29, 2025
ರಮ್ಯಾ ಬಳಿಕ ಈಗ ದರ್ಶನ್ ಪತ್ನಿ-ಮಗನ ಬಗ್ಗೆ ಅಶ್ಲೀಲ ಕಮೆಂಟ್
ರಮ್ಯಾ ಬಳಿಕ ಈಗ ದರ್ಶನ್ ಪತ್ನಿ-ಮಗನ ಬಗ್ಗೆ ಅಶ್ಲೀಲ ಕಮೆಂಟ್

ಸಾಮಾಜಿಕ ಜಾಲತಾಣಗಳು ಇಂದು ಪ್ರತಿಯೊಬ್ಬರ ಕೈಯಲ್ಲಿರುವ ಶಕ್ತಿ. ಆದರೆ ಕೆಲವರು ಈ ಶಕ್ತಿಯನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ನಟ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ದರ್ಶನ್ ಹಾಗೂ ಪುತ್ರ ವಿನೀಶ್ ಅವರ ಬಗ್ಗೆ ಅಸಭ್ಯ ಹಾಗೂ ಅಶ್ಲೀಲ ಪೋಸ್ಟ್‌ಗಳನ್ನು ಹಾಕಿರುವ ಬಗ್ಗೆ ಮಹಿಳಾ ಆಯೋಗಕ್ಕೆ ದೂರು ದಾಖಲಾಗಿದೆ.

ನೆಲಮಂಗಲದ ಭಾಸ್ಕರ್ ಪ್ರಸಾದ್ ಅವರು ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ. “ವಿಜಯಲಕ್ಷ್ಮಿ ದರ್ಶನ್ ಹಾಗೂ ಅವರ ಮಗನ ವಿರುದ್ಧ ಸೋಶಿಯಲ್ ಮೀಡಿಯಾದಲ್ಲಿ ಅಸಭ್ಯ, ಅವಾಚ್ಯ ಶಬ್ದಗಳಿಂದ ನಿಂದಿಸಲಾಗುತ್ತಿದೆ. ಇದು ಕೇವಲ ಮಾನಸಿಕ ಕಿರುಕುಳವಲ್ಲ, ಮಹಿಳೆಯರ ಗೌರವಕ್ಕೂ ಧಕ್ಕೆ ತರುತ್ತದೆ” ಎಂದು ಅವರು ಮನವಿ ಮಾಡಿದ್ದಾರೆ.

ಈ ದೂರಿನ ಆಧಾರದ ಮೇಲೆ ಮಹಿಳಾ ಆಯೋಗವು ಪೊಲೀಸ್ ಆಯುಕ್ತರಿಗೆ ಪತ್ರ ಬರೆದು ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದೆ. ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಅವರು “ಕಾನೂನು ಪ್ರಕಾರ ಕ್ರಮ ಕೈಗೊಂಡು, 15 ದಿನಗಳೊಳಗೆ ವರದಿ ಸಲ್ಲಿಸುವಂತೆ” ಆದೇಶಿಸಿದ್ದಾರೆ. ಹಿಂದೆಯೂ ಇಂತಹ ಘಟನೆಗಳು ನಡೆದಿವೆ. ನಟಿ ರಮ್ಯಾ ಅವರ ಮೇಲೂ ಅಶ್ಲೀಲ ಕಮೆಂಟ್‌ಗಳು ನಡೆದಿದ್ದು, ಅವರು ದೂರು ನೀಡಿದ ನಂತರ ಕೆಲವರನ್ನು ಪೊಲೀಸರು ಬಂಧಿಸಿದ್ದರು. ಇತ್ತೀಚೆಗಷ್ಟೇ ಪವಿತ್ರಾ ಗೌಡಗೆ ರೇಣುಕಾಸ್ವಾಮಿ ಅಸಭ್ಯವಾಗಿ ಮೆಸೇಜ್ ಮಾಡಿದ ಪರಿಣಾಮ ದೊಡ್ಡ ದುರಂತವೇ ನಡೆಯಿತು. ಆದರೂ ಜನರು ಪಾಠ ಕಲಿಸಿಕೊಳ್ಳದೆ ಮತ್ತೆ ಮತ್ತೆ ಇದೇ ತಪ್ಪು ಮಾಡುತ್ತಿದ್ದಾರೆ ಎಂಬುದು ವಿಷಾದನೀಯ.

ಇಂದು ಲಕ್ಷಾಂತರ ನಕಲಿ (Fake) ಅಕೌಂಟ್‌ಗಳಿಂದ ಅಸಭ್ಯ ಕಮೆಂಟ್‌ಗಳನ್ನು ಮಾಡುವವರ ಸಂಖ್ಯೆ ದಿನೇದಿನೇ ಹೆಚ್ಚುತ್ತಿದೆ. ಇವರು ತಮ್ಮ ನಿಜವಾದ ಗುರುತು ಮುಚ್ಚಿಕೊಂಡು ಇತರರ ವ್ಯಕ್ತಿಗೌರವಕ್ಕೆ ಧಕ್ಕೆ ತರುತ್ತಾರೆ. ಆದರೆ ಇಂತಹ ಕೃತ್ಯಗಳು ಕಾನೂನಿನಲ್ಲಿ ಶಿಕ್ಷಾರ್ಹ. ಮಹಿಳಾ ಆಯೋಗವು ಈಗಾಗಲೇ ಸ್ಪಷ್ಟಪಡಿಸಿರುವಂತೆ, ಈ ರೀತಿಯವರ ಮೇಲೆ ಗಟ್ಟಿಯಾಗಿ ಕ್ರಮ ಕೈಗೊಳ್ಳಲಾಗುತ್ತದೆ. ಇಂಥ ಕಿಡಿಗೇಡಿಗಳ ವರ್ತನೆ ಮಹಿಳೆಯರ ಗೌರವಕ್ಕೆ ನೇರ ಧಕ್ಕೆ ತರುತ್ತದೆ. ಸ್ಟಾರ್ ನಟರ ಕುಟುಂಬಗಳನ್ನು ಗುರಿಯಾಗಿಸಿ ಅವಾಚ್ಯವಾಗಿ ನಿಂದಿಸುವುದು ಅಭಿಮಾನಿಯ ಹೆಸರಿನಲ್ಲಿ ಮಾಡಲಾಗುವ ಅಪರಾಧ. ಮಹಿಳಾ ಆಯೋಗವು ಪೊಲೀಸರಿಗೆ ಸ್ಪಷ್ಟ ಸಂದೇಶ ನೀಡಿದ್ದು, ಇಂತಹವರ ವಿರುದ್ಧ ಕಠಿಣ ಕ್ರಮ ಅನಿವಾರ್ಯ.

ಸೋಶಿಯಲ್ ಮೀಡಿಯಾ ಅಭಿವ್ಯಕ್ತಿಗೆ ವೇದಿಕೆ ಆಗಿದ್ದರೂ, ಅದು ಯಾರನ್ನಾದರೂ ನಿಂದಿಸುವ ಅಥವಾ ಅವಹೇಳನ ಮಾಡುವ ಜಾಗವಲ್ಲ. ದರ್ಶನ್ ಅವರ ಕುಟುಂಬದ ಮೇಲಿನ ಈ ಘಟನೆ ಮತ್ತೊಮ್ಮೆ ನಮ್ಮೆದುರು ಗಂಭೀರ ಪ್ರಶ್ನೆ ಎತ್ತಿದೆ ‘ಅಭಿಮಾನ’ ಹೆಸರಿನಲ್ಲಿ ಅವಾಚ್ಯ ನಿಂದನೆಗೆ ತಿರುಗುವ ನಾವು ನಿಜವಾಗಿಯೂ ಅಭಿಮಾನಿಗಳೇ?’ ನಿಮ್ಮ ಅಭಿಪ್ರಾಯ ಏನು? ಇಂತಹ ನಕಲಿ ಅಕೌಂಟ್‌ಗಳಿಂದ ಕಮೆಂಟ್ ಮಾಡುವವರ ಮೇಲೆ ಗಟ್ಟಿಯಾದ ಶಿಕ್ಷೆ ವಿಧಿಸಬೇಕೇ?