Back to Top

“ನನಗೆ ಆರೋಗ್ಯ ಸರಿಯಿಲ್ಲ, ಬೆದರಿಕೆ ಇದೆ” – ಪೊಲೀಸರಿಗೆ ಮನವಿ ಮಾಡಿದ ಸುಜಾತ ಭಟ್

SSTV Profile Logo SStv August 23, 2025
ಪೊಲೀಸರಿಗೆ ಮನವಿ ಮಾಡಿದ ಸುಜಾತ ಭಟ್
ಪೊಲೀಸರಿಗೆ ಮನವಿ ಮಾಡಿದ ಸುಜಾತ ಭಟ್

ಅನನ್ಯಾ ಭಟ್ ನಾಪತ್ತೆ ಪ್ರಕರಣ ದಿನೇದಿನೇ ಕುತೂಹಲ ಕೆರಳಿಸುತ್ತಿರುವ ಸಮಯದಲ್ಲಿ, ಸುಜಾತ ಭಟ್ ಆರೋಗ್ಯ ಮತ್ತು ಭದ್ರತಾ ಸಮಸ್ಯೆಗಳನ್ನು ಉಲ್ಲೇಖಿಸಿ ಪೊಲೀಸರಿಗೆ ಮನವಿ ಮಾಡಿದ್ದಾರೆ. “ನನಗೆ ಆರೋಗ್ಯ ಸರಿಯಿಲ್ಲ, ಬೆದರಿಕೆಯೂ ಇದೆ. ದಯವಿಟ್ಟು ರಕ್ಷಣೆ ನೀಡಿ” ಎಂದು ಅವರು ಬನಶಂಕರಿ ಪೊಲೀಸರಿಗೆ ಮನವಿ ಸಲ್ಲಿಸಿದ್ದಾರೆ. ಈ ಮನವಿ ಹಿನ್ನೆಲೆಯಲ್ಲಿ ಅವರ ಮನೆಗೆ ಭದ್ರತೆ ಒದಗಿಸಲಾಗಿದೆ.

ಮನೆಯ ಬಳಿ ಯಾರೂ ಬರದಂತೆ ಪೊಲೀಸರು ಕಠಿಣ ಕ್ರಮ ಕೈಗೊಂಡಿದ್ದಾರೆ. ಮಾಧ್ಯಮದವರು, ಸಾರ್ವಜನಿಕರು ಮನೆ ಹತ್ತಿರ ಸೇರದಂತೆ ನಿರ್ಬಂಧ ಹೇರಲಾಗಿದೆ. ಶಿಫ್ಟ್ ಲೆಕ್ಕದಲ್ಲಿ ಪೊಲೀಸರು ಸುಜಾತ ಭಟ್ ಮನೆಗೆ ಭದ್ರತೆ ಒದಗಿಸುತ್ತಿದ್ದಾರೆ.

ಅನನ್ಯಾ ಭಟ್ ನಾಪತ್ತೆ ಪ್ರಕರಣ ತನಿಖೆ ನಡೆಸುತ್ತಿರುವ ಎಸ್‌ಐಟಿ ಅಧಿಕಾರಿಗಳು ಶೀಘ್ರದಲ್ಲೇ ಸುಜಾತ ಭಟ್ ಮನೆಗೆ ಭೇಟಿ ನೀಡುವ ಸಾಧ್ಯತೆಯಿದೆ. ಬಿಎನ್‌ಎಸ್ 131 ಸೆಕ್ಷನ್‌ನಡಿ ವಿಚಾರಣೆಗೆ ನೋಟಿಸ್ ನೀಡಿದ್ದರೂ, ಅವರು ಆರೋಗ್ಯ ಕಾರಣವನ್ನು ಉಲ್ಲೇಖಿಸಿ ಹಾಜರಾಗಿರಲಿಲ್ಲ.

ಇದೀಗ ಬಿಎನ್‌ಎಸ್ 180 ಅಡಿ ವೀಡಿಯೋ ರೆಕಾರ್ಡಿಂಗ್ ಮೂಲಕ ಅವರ ಹೇಳಿಕೆ ದಾಖಲಿಸುವ ಪ್ರಕ್ರಿಯೆ ಕೈಗೊಳ್ಳಲಾಗುವುದು. ಬಿಎನ್‌ಎಸ್ ಕಾಯ್ದೆಯ ಪ್ರಕಾರ 60 ವರ್ಷಕ್ಕಿಂತ ಮೇಲ್ಪಟ್ಟವರು ಅಥವಾ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಸಾಕ್ಷಿದಾರರ ಹೇಳಿಕೆಗಳನ್ನು ಅವರ ನಿವಾಸದಲ್ಲೇ ದಾಖಲಿಸಲು ಅವಕಾಶವಿದೆ.

ಸದ್ಯ ಬನಶಂಕರಿ ಪೊಲೀಸ್ ಇನ್ಸ್ಪೆಕ್ಟರ್ ನೇತೃತ್ವದಲ್ಲಿ ಹದಿನೈದಕ್ಕೂ ಹೆಚ್ಚು ಪೊಲೀಸರನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ. ಮನೆ ಸುತ್ತಮುತ್ತ ಬ್ಯಾರಿಕೇಡ್ ಹಾಕಲಾಗಿದೆ. ಇದು ಸುಜಾತ ಭಟ್‌ಗಿಂತಲೂ ತನಿಖಾ ತಂಡದ ಸುರಕ್ಷತೆಗಾಗಿ ಎಚ್ಚರಿಕೆಯ ಭಾಗವಾಗಿದೆ.