Back to Top

ಅನುಶ್ರೀಗೆ ಮಾಂಗಲ್ಯ ಧಾರಣೆ ಮಾಡಿದ ರೋಷನ್ – ಮದುವೆ ಸಂಭ್ರಮದಲ್ಲಿ ಅನುಶ್ರೀ ಕಣ್ಣೀರು!

SSTV Profile Logo SStv August 28, 2025
ಮದುವೆ ಸಂಭ್ರಮದಲ್ಲಿ ಅನುಶ್ರೀ ಕಣ್ಣೀರು!
ಮದುವೆ ಸಂಭ್ರಮದಲ್ಲಿ ಅನುಶ್ರೀ ಕಣ್ಣೀರು!

ಕನ್ನಡದ ಜನಪ್ರಿಯ ನಿರೂಪಕಿ ಮತ್ತು ನಟಿ ಅನುಶ್ರೀ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕೊಡಗು ಮೂಲದ ಉದ್ಯಮಿ ರೋಷನ್ ಅವರನ್ನು ಅನುಶ್ರೀ ಮದುವೆಯಾಗಿದ್ದು, ಈ ಅದ್ಧೂರಿ ಕಲ್ಯಾಣವು ಇಂದು (ಆಗಸ್ಟ್ 28) ಬೆಂಗಳೂರಿನ ಹೊರವಲಯದ ಕಗ್ಗಲಿಪುರದ ‘ಸಂಭ್ರಮ ಬೈ ಸ್ವಾನ್‌ಲೈನ್ಸ್‌ ಸ್ಟುಡಿಯೋಸ್‌’ ಎಂಬ ರೆಸಾರ್ಟ್‌ನಲ್ಲಿ ನೆರವೇರಿತು.

ಬೆಳಗ್ಗೆ 10:56 ಕ್ಕೆ ಶುಭ ಲಗ್ನದಲ್ಲಿ ರೋಷನ್, ಅನುಶ್ರೀ ಕೊರಳಿಗೆ ತಾಳಿ ಕಟ್ಟಿದರು. ಈ ಕ್ಷಣ ಭಾವುಕರಾದ ಅನುಶ್ರೀ ಕಣ್ಣೀರಿಟ್ಟರು. ತಮ್ಮ ಪತ್ನಿಯ ಕಣ್ಣೀರು ಕಂಡ ರೋಷನ್, ಅವರನ್ನು ಸಮಾಧಾನ ಪಡಿಸಿ ಕೆನ್ನೆಗೆ ಸಿಹಿ ಮುತ್ತು ನೀಡಿದರು. ಈ ಹೃದಯಸ್ಪರ್ಶಿ ಕ್ಷಣವನ್ನು ಹಾಜರಿದ್ದವರು ಚಪ್ಪಾಳೆ ಹೊಡೆದು ಸ್ವಾಗತಿಸಿದರು. ಆಗಸ್ಟ್ 27 ರಂದು, ಗಣೇಶ ಹಬ್ಬದ ಶುಭ ಸಂದರ್ಭದಲ್ಲಿ ಅರಿಶಿನ ಶಾಸ್ತ್ರ ಧಾರ್ಮಿಕ ಸಂಭ್ರಮದಲ್ಲಿ ನೆರವೇರಿತು. ಕುಟುಂಬದವರ ಜೊತೆ ಆಪ್ತರು ಹಾಗೂ ಸ್ನೇಹಿತರು ಈ ಶಾಸ್ತ್ರಗಳಲ್ಲಿ ಭಾಗವಹಿಸಿದ್ದರು.

ಅನುಶ್ರೀ - ರೋಷನ್ ಮದುವೆಗೆ ಮನರಂಜನಾ ಕ್ಷೇತ್ರದ ಅನೇಕ ಗಣ್ಯರು ಸಾಕ್ಷಿಯಾದರು. ನಟ ವಿಜಯ್ ರಾಘವೇಂದ್ರ, ನಟಿ ಸೋನಲ್ ಮಂಥೆರೋ, ಚೈತ್ರಾ ಆಚಾರ್, ಹಾಸ್ಯನಟ ಶರಣ್, ಸಂಗೀತ ವಿದ್ವಾಂಸ ನಾದಬ್ರಹ್ಮ ಹಂಸಲೇಖ, ನಟಿ ಶ್ವೇತಾ ಚೆಂಗಪ್ಪ
ಮುಂತಾದವರು ನವದಂಪತಿಗೆ ಆಶೀರ್ವಾದ ಕೋರಿದರು.

ವರ ರೋಷನ್, ಕೊಡಗು ಮೂಲದ ಉದ್ಯಮಿ. ಐಟಿ ಕ್ಷೇತ್ರದಲ್ಲಿ ಹಿನ್ನಲೆ ಹೊಂದಿರುವ ಅವರು ರಾಮಮೂರ್ತಿ ಹಾಗೂ ಸಿಸಿಲಿಯಾ ದಂಪತಿಯ ಪುತ್ರ. ಡಾ. ರಾಜ್‌ಕುಮಾರ್ ಕುಟುಂಬದ ಯುವ ರಾಜ್‌ಕುಮಾರ್ ಹಾಗೂ ಶ್ರೀದೇವಿ ಭೈರಪ್ಪ ಅವರಿಗೂ ರೋಷನ್ ಆತ್ಮೀಯರಾಗಿದ್ದಾರೆ. ಅನುಶ್ರೀ ಮದುವೆ ಕುರಿತಂತೆ ವರ್ಷಗಳಿಂದ ಅಭಿಮಾನಿಗಳಲ್ಲಿ ಕುತೂಹಲವಿತ್ತು. ಕೊನೆಗೂ ಈ ನಿರೀಕ್ಷೆಗೆ ತೆರೆ ಬಿದ್ದು, ಸ್ಟಾರ್ ಆಂಕರ್ ಹೊಸ ಬದುಕಿಗೆ ಕಾಲಿಟ್ಟಿದ್ದಾರೆ. ಅಭಿಮಾನಿಗಳು ಹಾಗೂ ಸ್ನೇಹಿತರು ಸೋಶಿಯಲ್ ಮೀಡಿಯಾದ ಮೂಲಕ ನವಜೋಡಿಗೆ ಹಾರೈಸುತ್ತಿದ್ದಾರೆ.

ಹೀಗಾಗಿ, “ಅನುಶ್ರೀ ಮದುವೆ ಯಾವಾಗ?” ಎಂಬ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದ್ದು, ಕನ್ನಡದ ಪ್ರೇಕ್ಷಕರು ತಮ್ಮ ನೆಚ್ಚಿನ ಆಂಕರ್‌ಗೆ ನವಜೀವನದ ಹಾರೈಕೆಗಳನ್ನು ಸಲ್ಲಿಸುತ್ತಿದ್ದಾರೆ.