Back to Top

"ಅಪ್ಪು ಸರ್ ನಮ್ಮಿಬ್ಬರನ್ನ ಸೇರಿಸಿದ್ದು" – ಮದುವೆ ಲವ್ ಸ್ಟೋರಿ ಬಿಚ್ಚಿಟ್ಟ ಅನುಶ್ರೀ ರೋಷನ್

SSTV Profile Logo SStv August 28, 2025
ಮದುವೆ ಲವ್ ಸ್ಟೋರಿ ಬಿಚ್ಚಿಟ್ಟ ಅನುಶ್ರೀ ರೋಷನ್
ಮದುವೆ ಲವ್ ಸ್ಟೋರಿ ಬಿಚ್ಚಿಟ್ಟ ಅನುಶ್ರೀ ರೋಷನ್

ಕನ್ನಡದ ಜನಪ್ರಿಯ ನಿರೂಪಕಿ ಅನುಶ್ರೀ ಇದೀಗ ತಮ್ಮ ಜೀವನದ ಹೊಸ ಅಧ್ಯಾಯಕ್ಕೆ ಕಾಲಿಟ್ಟಿದ್ದಾರೆ. ಬಹುಕಾಲದ ಗೆಳೆಯ ರೋಷನ್ ಜೊತೆ ಅವರು ದಾಂಪತ್ಯ ಜೀವನ ಪ್ರಾರಂಭಿಸಿದ್ದಾರೆ. ಬೆಂಗಳೂರಿನ ಹೊರವಲಯದ ಸಂಭ್ರಮ ಬೈ ಸ್ವಾನ್‌ಲೈನ್ಸ್ ಸ್ಟುಡಿಯೋಸ್, ತಿಟ್ಟಹಳ್ಳಿ (ಕಗ್ಗಲಿಪುರ) ನಲ್ಲಿ ಮದುವೆ ಅದ್ದೂರಿಯಾಗಿ ನೆರವೇರಿತು. ಅನುಶ್ರೀ – ರೋಷನ್ ಮದುವೆ ಬಹಳ ಸರಳವಾಗಿಯೂ, ಹೃದಯಸ್ಪರ್ಶಿಯಾಗಿ ಜರುಗಿತು. “ನಮಗೆ ಮದುವೆ ಅಂದ್ರೆ ಕಡಿಮೆ ಜನರ ಜೊತೆ ಸರಳವಾಗಿ ಆಗಬೇಕು ಅನ್ನೋ ಆಸೆ ಇತ್ತು. ಅದೇ ರೀತಿಯಲ್ಲಿ ನೆರವೇರಿತು. ನಿಮಗೆಲ್ಲರ ಪ್ರೀತಿ, ಆಶೀರ್ವಾದಕ್ಕೆ ಧನ್ಯವಾದಗಳು” ಎಂದು ಅನುಶ್ರೀ ಭಾವುಕರಾದರು.

ಅನುಶ್ರೀ ತಮ್ಮ ಲವ್ ಸ್ಟೋರಿ ಬಗ್ಗೆ ಮಾತನಾಡುತ್ತಾ ಹೇಳಿದರು: “ಮೊದಲು ಸ್ನೇಹದಿಂದ ಶುರು ಆಯ್ತು. ಇಬ್ಬರೂ ಕಾಫಿಗೆ ಹೋಗುತ್ತಿದ್ದೆವು. ಆ ಸ್ನೇಹ ಪ್ರೀತಿಗೆ ತಿರುಗಿ, ಈಗ ಮದುವೆಯಾಗಿ ಬಿಟ್ಟೆವು. ಪುನೀತ್ ಪರ್ವ ಕಾರ್ಯಕ್ರಮದಲ್ಲಿ ಮೊದಲ ಬಾರಿ ಭೇಟಿಯಾದ್ವಿ. ಅಪ್ಪು ಸರ್ ಅವರೇ ನಮ್ಮಿಬ್ಬರನ್ನ ಸೇರಿಸಿದಂತಾಗಿದೆ. ಅವರ ಫೋಟೋ ನಮ್ಮ ಮದುವೆ ಮಂಟಪದಲ್ಲೂ ಇಟ್ಟಿದ್ದೆವು. ಅವರ ಆಶೀರ್ವಾದ ನಮ್ಮೊಂದಿಗೆ ಇದೆ ಅನ್ನಿಸಿತು.”

ಅನುಶ್ರೀ ಪತಿ ರೋಷನ್, ಕೊಡಗು ಮೂಲದವರು. ಐಟಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದು, ಕೊಡಗಿನ ರಾಮಮೂರ್ತಿ ಹಾಗೂ ಸಿಸಿಲಿಯಾ ದಂಪತಿಯ ಪುತ್ರ. ಅವರು ಸರಳ ಸ್ವಭಾವದವರಾಗಿದ್ದು, “ಬಿರಿಯಾನಿ, ಫಿಶ್ ಫ್ರೈ ಮಾಡುವಲ್ಲಿ ಸಖತ್ ಎಕ್ಸ್‌ಪರ್ಟ್” ಎಂದು ಅನುಶ್ರೀ ಮೆಚ್ಚಿಕೊಂಡಿದ್ದಾರೆ. “ಮದುವೆ ಒಂದು ಹೆಣ್ಣಿನ ದೊಡ್ಡ ಕನಸು. ಅದು ಹೇಗೆ ಆಗ್ತದೆ ಅನ್ನೋದಕ್ಕಿಂತ ಮದುವೆಯಾದ ಮೇಲೆ ಹೇಗೆ ಬದುಕ್ತೀವಿ ಅನ್ನೋದು ಮುಖ್ಯ. ನಮಗೆ ಸರಳ ವಿವಾಹವೇ ಸಾಕಷ್ಟು ಖುಷಿ ಕೊಟ್ಟಿದೆ. ರೋಷನ್ ಕೋಟ್ಯಾಧಿಪತಿ ಅಲ್ಲ.. ಸಿಂಪಲ್ ಹುಡುಗ. ಅವರ ಸಹಾಯ ಮಾಡುವ ಗುಣ ನನಗೆ ತುಂಬಾ ಇಷ್ಟ.” ಎಂದು ಅನುಶ್ರೀ ಹೇಳಿದ್ದಾರೆ.

ಅನುಶ್ರೀ ಅವರ ಸರಳ ಸಿಹಿ ಮದುವೆ ಹಾಗೂ ಪ್ರೀತಿಯ ಕಥೆ, ಅಭಿಮಾನಿಗಳ ಮನ ಗೆದ್ದಿದೆ. ಅಪ್ಪು ಸರ್ ನೆನಪಿನಲ್ಲೇ ಆರಂಭವಾದ ಈ ದಾಂಪತ್ಯ, ಅವರ ಜೀವನದಲ್ಲಿ ಸಂತೋಷ, ಸೌಖ್ಯ ತಂದುಕೊಡಲಿ ಎಂಬ ಹಾರೈಕೆ ಎಲ್ಲರದಲ್ಲೂ ಮೂಡಿದೆ.