ಕೆಜಿಎಫ್ ಶೆಟ್ಟಿ ಭಾಯ್ ದಿನೇಶ್ ಮಂಗಳೂರು ನಿಧನ – ಸ್ಯಾಂಡಲ್‌ವುಡ್ ದುಃಖದಲ್ಲಿ


ಸ್ಯಾಂಡಲ್‌ವುಡ್‌ಗೆ ಕಲಾವಿದರಾಗಿ ಹಾಗೂ ಕಲಾ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದ ದಿನೇಶ್ ಮಂಗಳೂರು (55) ಇಹಲೋಕ ತ್ಯಜಿಸಿದ್ದಾರೆ. ಅವರು ಯಶ್ ಅಭಿನಯದ ಕೆಜಿಎಫ್-1 ಸಿನಿಮಾದಲ್ಲಿ ಶೆಟ್ಟಿ ಭಾಯ್ ಪಾತ್ರದಿಂದ ವಿಶೇಷವಾಗಿ ಗುರುತಿಸಿಕೊಂಡಿದ್ದರು.
ದಿನೇಶ್ ಮಂಗಳೂರು ದೀರ್ಘಕಾಲದಿಂದ ಅನಾರೋಗ್ಯ ಪೀಡಿತರಾಗಿದ್ದರು. ಕೆಲವು ವರ್ಷಗಳ ಹಿಂದೆ ಕೆಜಿಎಫ್ ಭಾಗ-1 ಶೂಟಿಂಗ್ ಸಮಯದಲ್ಲಿ ಪಾರ್ಶ್ವವಾಯುವಿಗೆ ಒಳಗಾದ ಅವರು, ಕುಂದಾಪುರ ಹಾಗೂ ಬೆಂಗಳೂರಿನ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದರು. ಆದರೆ ಇತ್ತೀಚೆಗೆ ಮತ್ತೆ ತೀವ್ರ ಅಸ್ವಸ್ಥಗೊಂಡು ಕುಂದಾಪುರದ ಸರ್ಜನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಮುಂಜಾನೆ ಅವರು ಕೊನೆಯುಸಿರೆಳೆದರು.
1970 ಜನವರಿ 1ರಂದು ಜನಿಸಿದ ದಿನೇಶ್ ಮಂಗಳೂರು, ಕೊಲ್ಲೂರಿನ ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದರು. ರಂಗಭೂಮಿಯಿಂದ ಪ್ರಾರಂಭವಾದ ಅವರ ಕಲಾಜೀವನ, ಬಳಿಕ ಸಿನಿರಂಗದತ್ತ ಸಾಗಿತು. ರಣವಿಕ್ರಮ, ಕಿರಿಕ್ ಪಾರ್ಟಿ, ಉಳಿದವರು ಕಂಡಂತೆ, ಕೆಜಿಎಫ್ ಸೇರಿದಂತೆ ಹಲವಾರು ಚಿತ್ರಗಳಲ್ಲಿ ಅಭಿನಯಿಸಿ ಪ್ರೇಕ್ಷಕರ ಮೆಚ್ಚುಗೆ ಪಡೆದಿದ್ದರು.
ಇದೇ ರೀತಿ ಅವರು ಕಲಾ ನಿರ್ದೇಶಕರಾಗಿಯೂ ತಮ್ಮ ಪ್ರತಿಭೆ ತೋರಿಸಿದರು. ವೀರ ಮದಕರಿ, ಚಂದ್ರಮುಖಿ ಪ್ರಾಣಸಖಿ ಸೇರಿದಂತೆ ಅನೇಕ ಸಿನಿಮಾಗಳಿಗೆ ಕಲಾ ನಿರ್ದೇಶನ ಮಾಡಿದರು. ದಿನೇಶ್ ಮಂಗಳೂರು ತಮ್ಮ ಪತ್ನಿ ಭಾರತಿ ಪೈ ಹಾಗೂ ಇಬ್ಬರು ಮಕ್ಕಳಾದ ಸೂರ್ಯ ಸಿದ್ಧಾರ್ಥ್ ಮತ್ತು ಸಾಜನ್ ಪೈ ಅವರನ್ನು ಅಗಲಿದ್ದಾರೆ. ಅವರ ನಿಧನದಿಂದ ಕುಟುಂಬ, ಸ್ನೇಹಿತರು ಮತ್ತು ಕನ್ನಡ ಚಿತ್ರರಂಗ ದಿಗ್ಭ್ರಮೆಯಲ್ಲಿದೆ.
Trending News
ಹೆಚ್ಚು ನೋಡಿ‘ಕಾಂತಾರ: ಚಾಪ್ಟರ್ 1’ ಟ್ರೇಲರ್ ಬಿಡುಗಡೆಗೆ ದಿನಾಂಕ ಫಿಕ್ಸ್ – ಚಾಪ್ಟರ್ 1 ಟ್ರೇಲರ್ ನೋಡಲು ಅಭಿಮಾನಿಗಳ ಕಾತರ!
