ಎಲ್ಲಿಗೆ ಪಯಣ ಯಾವುದೋ ದಾರಿ ಲಿರಿಕಲ್ ವಿಡಿಯೋ ಸಾಂಗ್ ಬಿಡುಗಡೆಗೊಳಿಸಿದರು ಡಾ.ಮಂಜುನಾಥ್ ಅಭಿಮನ್ಯು ಕಾಶಿನಾಥ್ ನಾಯಕನಾಗಿ ನಟಿಸಿರುವ ಎಲ್ಲಿಗೆ ಪಯಣ ಯಾವುದೋ ದಾರಿ ಚಿತ್ರವು ಈ ಅಕ್ಟೋಬರ್ 25 ರಂದು ಬಿಡುಗಡೆಯಾಗಲು ಸಜ್ಜಾಗಿದೆ. ಇತ್ತೀಚೆಗಷ್ಟೇ ಈ ಚಿತ್ರದ "ನೀನಿರು ಸಾಕು" ಎಂಬ ಲಿರಿಕಲ್ ವೀಡಿಯೋ ಸಾಂಗ್ ಅನ್ನು ಖ್ಯಾತ ವೈದ್ಯ ಮತ್ತು ಸಂಸದ ಡಾ.ಮಂಜುನಾಥ್ ಬಿಡುಗಡೆಗೊಳಿಸಿದ್ದಾರೆ.
ನೀನಿರು ಸಾಕು ಹಾಡಿಗೆ ಪ್ರಮೋದ್ ಮರವಂತೆ ಸಾಹಿತ್ಯ ನೀಡಿದ್ದು, ವಾಸುಕಿ ವೈಭವ್ ಹಾಗೂ ಶ್ರೀಲಕ್ಷ್ಮಿ ಬೆಳ್ಮಣ್ಣು ಅವರ ಕಂಠಸಿರಿಯಲ್ಲಿ ಹಾಡು ಮೂಡಿಬಂದಿದೆ. ಪ್ರಣವ್ ರಾವ್ ಸಂಗೀತ ಸಂಯೋಜನೆ ಮಾಡಿದ್ದಾರೆ. ವಿಶೇಷವೆಂದರೆ, ಕಿಚ್ಚ ಸುದೀಪ್ ಈ ಚಿತ್ರಕ್ಕಾಗಿ ಒಂದು ಹಾಡನ್ನೂ ಹಾಡಿದ್ದಾರೆ.
ಕಿರಣ್ ಎಸ್ ಸೂರ್ಯ ನಿರ್ದೇಶನದ ಈ ಚಿತ್ರವು ಅತ್ಯಂತ ಸೂಕ್ಷ್ಮ ಕಥಾನಕವನ್ನು ಹೊಂದಿದ್ದು, ಟೀಸರ್ ಮತ್ತು ಟ್ರೈಲರ್ ಮೂಲಕ ಈಗಾಗಲೇ ಪ್ರೇಕ್ಷಕರಲ್ಲಿ ಕುತೂಹಲ ಹೆಚ್ಚಿಸಿದೆ.
ಸುದರ್ಶನ್ ಆರ್ಟ್ಸ್ ಬ್ಯಾನರ್ ಅಡಿಯಲ್ಲಿ ಜತಿನ್ ಪಟೇಲ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದು, ಅಭಿಮನ್ಯು ಕಾಶಿನಾಥ್ ಹಾಗೂ ಸ್ಫೂರ್ತಿ ಉಡಿಮನೆ ಮುಖ್ಯ ಜೋಡಿಯಾಗಿ ಅಭಿನಯಿಸಿದ್ದಾರೆ.