Back to Top

ಕಿಚ್ಚ ಸುದೀಪ್ ಹುಟ್ಟುಹಬ್ಬಕ್ಕೆ ಪತ್ನಿ ಪ್ರಿಯಾ ಸುದೀಪ್‌ – ಅಂಗಾಂಗ ದಾನ ಮಾಡಿ ಸಮಾಜಕ್ಕೆ ಮಾದರಿ!

SSTV Profile Logo SStv September 11, 2025
ಅಂಗ & ಅಂಗಾಂಶ ದಾನ ಮಾಡಿದ ಕಿಚ್ಚ ಸುದೀಪ್‌ ಪತ್ನಿ
ಅಂಗ & ಅಂಗಾಂಶ ದಾನ ಮಾಡಿದ ಕಿಚ್ಚ ಸುದೀಪ್‌ ಪತ್ನಿ

ಕನ್ನಡದ ಅಗ್ರನಟ ಕಿಚ್ಚ ಸುದೀಪ್ ಅವರ ಹುಟ್ಟುಹಬ್ಬದ ಸಂಭ್ರಮವನ್ನು ಈ ಬಾರಿ ವಿಶಿಷ್ಟವಾಗಿ ಆಚರಿಸಲಾಗಿದೆ. ಆದರೆ ಕೇಕ್ ಕತ್ತರಿಸುವುದಕ್ಕಿಂತ, ಪಾರ್ಟಿ ಮಾಡುವುದಕ್ಕಿಂತಲೂ ಮಿಗಿಲಾದ ಕೆಲಸವೊಂದನ್ನು ಅವರ ಪತ್ನಿ ಪ್ರಿಯಾ ಸುದೀಪ್ ಮಾಡಿದ್ದಾರೆ.

ಸಾಮಾನ್ಯವಾಗಿ ಪ್ರತೀ ವರ್ಷ ಸುದೀಪ್ ಅಭಿಮಾನಿಗಳು ರಕ್ತದಾನ, ಅನ್ನದಾನ, ಬಡಮಕ್ಕಳಿಗೆ ಸಹಾಯ ಹೀಗೆ ಅನೇಕ ಸಮಾಜಮುಖಿ ಚಟುವಟಿಕೆಗಳನ್ನು ನಡೆಸುತ್ತಾ ಬಂದಿದ್ದಾರೆ. ಈ ಬಾರಿ ಪ್ರಿಯಾ ಅವರು ಒಂದು ದೊಡ್ಡ ಹೆಜ್ಜೆ ಹಾಕಿದ್ದಾರೆ ಅಂಗ ಮತ್ತು ಅಂಗಾಂಶ ದಾನ ಮಾಡುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ.

ಸುದೀಪ್ ಅವರ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಕಿಚ್ಚ ಸುದೀಪ್ ಕೇರ್ ಫೌಂಡೇಶನ್ ಮೂಲಕ ಪ್ರಿಯಾ ಸುದೀಪ್ ಅಂಗ ಹಾಗೂ ಅಂಗಾಂಶ ದಾನದ ಪ್ರತಿಜ್ಞೆ ಮಾಡಿದ್ದಾರೆ. ಇದರ ಬಗ್ಗೆ ಅವರು ಒಂದು ವೀಡಿಯೋ ಮೂಲಕ ಅಭಿಮಾನಿಗಳಿಗೆ ಹಾಗೂ ಜನತೆಗೆ ಮಾಹಿತಿ ಹಂಚಿಕೊಂಡಿದ್ದಾರೆ.

“ಪ್ರತಿ ವರ್ಷ ಸುದೀಪ್ ಅವರ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ಒಳ್ಳೆಯ ಕಾರ್ಯಗಳನ್ನು ಮಾಡುತ್ತಾರೆ. ರಕ್ತದಾನ, ಅನ್ನದಾನ, ಬಡಮಕ್ಕಳಿಗೆ ಸಹಾಯ ಇವೆಲ್ಲವೂ ಹೃದಯ ತುಂಬಿಸುವ ಕೆಲಸಗಳು. ಆದರೆ ಈ ಬಾರಿ ನಾನು ಸ್ವತಃ ಅಂಗಾಂಗ ದಾನ ಮಾಡಿದ್ದೇನೆ. ಇದರ ಪ್ರಕ್ರಿಯೆ ಬಹಳ ಸುಲಭ. ನಮ್ಮ ಒಂದು ಸಣ್ಣ ನಿರ್ಧಾರದಿಂದಲೇ ಒಂದು ಜೀವ ಉಳಿಯಬಹುದು. ಅದಕ್ಕಿಂತ ದೊಡ್ಡ ಕೊಡುಗೆ ಸಮಾಜಕ್ಕೆ ಇರಲು ಸಾಧ್ಯವಿಲ್ಲ” ಎಂದು ಅವರು ಹೇಳಿದ್ದಾರೆ.

ಅಷ್ಟೇ ಅಲ್ಲ, ಪ್ರಿಯಾ ಅವರು ಅಂಗಾಂಗ ದಾನ ಮಾಡಲು ಮೊದಲು ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂಬ ಮಹತ್ವದ ಸಂದೇಶವನ್ನೂ ನೀಡಿದ್ದಾರೆ. “ನಾವು ಯಾವಾಗ ಹೋಗುತ್ತೇವೋ ಯಾರಿಗೂ ಗೊತ್ತಿಲ್ಲ. ಆದರೆ ಹೋಗುವಾಗ ನಮ್ಮ ದೇಹದ ಒಂದು ಭಾಗ ಮತ್ತೊಬ್ಬರಿಗೆ ಬದುಕು ನೀಡಬಹುದು. ಹಾಗಾಗಿ ಎಲ್ಲರೂ ಈ ಮಹತ್ಕಾರ್ಯದಲ್ಲಿ ಭಾಗಿಯಾಗಬೇಕು” ಎಂದು ಮನವಿ ಮಾಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಅಂಗಾಂಗ ದಾನದ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು ಅಗತ್ಯವಾಗಿದೆ. ಪ್ರಿಯಾ ಸುದೀಪ್ ಅವರ ಈ ಹೆಜ್ಜೆ ಅಭಿಮಾನಿಗಳಲ್ಲಿ ಮಾತ್ರವಲ್ಲ, ಸಮಸ್ತ ಕನ್ನಡಿಗರಲ್ಲಿ ಹೊಸ ಚಿಂತನೆ ಮೂಡಿಸಿದೆ. ಹುಟ್ಟುಹಬ್ಬದ ಸಂಭ್ರಮವನ್ನು ಹಂಚಿಕೊಳ್ಳುವುದಕ್ಕಿಂತ ಜೀವ ಉಳಿಸುವ ಕೆಲಸವನ್ನೇ ಅತ್ಯುತ್ತಮ ಉಡುಗೊರೆ ಎಂದು ಸಾಬೀತು ಮಾಡಿದ್ದಾರೆ.