ಅಭಿಮಾನ ಸ್ಟುಡಿಯೋ ವಿವಾದ: ಅರಣ್ಯಾಧಿಕಾರಿಯ ಪತ್ರ, ವಿಷ್ಣುವರ್ಧನ್ ಅಭಿಮಾನಿಗಳ ಆಗ್ರಹ


ಬೆಂಗಳೂರು ನಗರದಲ್ಲಿ ಪ್ರಸಿದ್ಧ ಅಭಿಮಾನ ಸ್ಟುಡಿಯೋ ಈಗ ಮತ್ತೊಮ್ಮೆ ಸುದ್ದಿಯ ಕೇಂದ್ರವಾಗಿದೆ. ನಟ ವಿಷ್ಣುವರ್ಧನ್ ಅವರ ಸಮಾಧಿಯನ್ನು ಕೆಡವಿದ ಬಳಿಕ, ಅಭಿಮಾನಿಗಳ ಅಸಮಾಧಾನ ಹಾಗೂ ಅರಣ್ಯ ಇಲಾಖೆಯ ಗಂಭೀರ ಆರೋಪಗಳು ಹೊಸ ತಿರುವು ಪಡೆದುಕೊಂಡಿವೆ. ಆಗಸ್ಟ್ 22ರಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ರವೀಂದ್ರ ಕುಮಾರ್ ಅವರು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್ ಅವರಿಗೆ ಪತ್ರ ಬರೆದಿದ್ದಾರೆ. ಈ ಪತ್ರದಲ್ಲಿ ಭೂಮಿ ಲೀಸ್ ನಿಯಮ ಉಲ್ಲಂಘನೆ ಹಾಗೂ ಸ್ಟುಡಿಯೋ ಅಭಿವೃದ್ಧಿಗೆ ಬಳಸಬೇಕಾಗಿದ್ದ ಹಣದ ದುರುಪಯೋಗ ಕುರಿತು ಗಂಭೀರ ಆರೋಪಗಳಿವೆ. ಈ ಪತ್ರ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
1970ರಲ್ಲಿ, ನಟ ಬಾಲಕೃಷ್ಣ ಅವರಿಗೆ ಸ್ಟುಡಿಯೋ ನಿರ್ಮಾಣಕ್ಕಾಗಿ 20 ಎಕರೆ ಜಮೀನು 20 ವರ್ಷ ಲೀಸ್ಗೆ ನೀಡಲಾಗಿತ್ತು. ನಂತರ ಲೀಸ್ ಅವಧಿ ವಿಸ್ತರಣೆ ಮಾಡಲಾಯಿತು. 2004ರಲ್ಲಿ, ಆರ್ಥಿಕ ಸಂಕಷ್ಟದ ನೆಪದಲ್ಲಿ, ಬಾಲಕೃಷ್ಣ ಪುತ್ರರು ಶ್ರೀನಿವಾಸ್ ಹಾಗೂ ಗಣೇಶ್ 10 ಎಕರೆ ಮಾರಲು ಅನುಮತಿ ಕೇಳಿದರು. ಜಿಲ್ಲಾಧಿಕಾರಿಯ ವಿಶೇಷಾಧಿಕಾರ ಬಳಸಿ ಭೂಮಿಯನ್ನು ಮಾರಲಾಯಿತು. ಮಾರಾಟದಿಂದ ಬಂದ ಹಣವನ್ನು ಸ್ಟುಡಿಯೋ ಅಭಿವೃದ್ಧಿಗೆ ಬಳಸುವುದಾಗಿ ಭರವಸೆ ನೀಡಲಾಗಿತ್ತು. ಆದರೆ, ಇಂದಿಗೂ ಸ್ಟುಡಿಯೋ ಯಥಾಸ್ಥಿತಿಯಲ್ಲಿಯೇ ಉಳಿದಿದೆ. ಅಭಿವೃದ್ಧಿ ನಡೆದಿಲ್ಲ.
ಈಗ ಬಾಲಕೃಷ್ಣ ಮೊಮ್ಮಗ ಕಾರ್ತಿಕ್ 1 ಎಕರೆ ಜಮೀನು 14 ಕೋಟಿ ರೂಪಾಯಿಗೆ ಮಾರಲು ಪ್ಲ್ಯಾನ್ ಮಾಡಿದ್ದರು ಎಂಬ ಸುದ್ದಿ ಹೊರಬಂದಿದೆ. ಈ ಮಾಹಿತಿಯನ್ನು ಅರಣ್ಯಾಧಿಕಾರಿ ಪತ್ತೆಹಚ್ಚಿ, ಜಮೀನನ್ನು ವಶಕ್ಕೆ ಪಡೆಯಲು ಜಿಲ್ಲಾಧಿಕಾರಿಗಳಿಗೆ ಶಿಫಾರಸು ಮಾಡಿದ್ದಾರೆ. ವಿಷ್ಣುವರ್ಧನ್ ಅಭಿಮಾನಿಗಳು ಸದ್ಯ 10 ಗುಂಟೆ ಜಾಗವನ್ನು ತಮ್ಮ ಪಾಲಿಗೆ ನೀಡುವಂತೆ ಆಗ್ರಹಿಸುತ್ತಿದ್ದಾರೆ.
ಅವರು ನಟ ವಿಷ್ಣುವರ್ಧನ್ ಅವರ ಸಮಾಧಿ ಜಾಗದಲ್ಲಿ ಸ್ಮಾರಕ ನಿರ್ಮಾಣ ಮಾಡುವ ಉದ್ದೇಶ ಹೊಂದಿದ್ದಾರೆ.
ಜಿಲ್ಲಾಧಿಕಾರಿ ಈ ಕುರಿತು ಏನೆಲ್ಲ ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಅಭಿಮಾನಿಗಳ ಒತ್ತಡ ಹಾಗೂ ಅರಣ್ಯ ಇಲಾಖೆಯ ಶಿಫಾರಸು ನಡುವೆ ಅಭಿಮಾನ ಸ್ಟುಡಿಯೋ ಭವಿಷ್ಯ ಯಾವ ದಿಕ್ಕಿನಲ್ಲಿ ಸಾಗುತ್ತದೆ? ಎಂಬ ಪ್ರಶ್ನೆ ಗಂಭೀರವಾಗಿದೆ. ಈ ವಿವಾದದಲ್ಲಿ ನಿಮ್ಮ ಅಭಿಪ್ರಾಯ ಏನು? ಅಭಿಮಾನ ಸ್ಟುಡಿಯೋ ಸರ್ಕಾರ ವಶಕ್ಕೆ ತೆಗೆದುಕೊಳ್ಳಬೇಕಾ? ಅಥವಾ ಅಭಿಮಾನಿಗಳು ಕೇಳುತ್ತಿರುವಂತೆ ಸ್ಮಾರಕ ನಿರ್ಮಾಣ ಮಾಡಬೇಕಾ?
Trending News
ಹೆಚ್ಚು ನೋಡಿ‘ಕಾಂತಾರ: ಚಾಪ್ಟರ್ 1’ ಟ್ರೇಲರ್ ಬಿಡುಗಡೆಗೆ ದಿನಾಂಕ ಫಿಕ್ಸ್ – ಚಾಪ್ಟರ್ 1 ಟ್ರೇಲರ್ ನೋಡಲು ಅಭಿಮಾನಿಗಳ ಕಾತರ!
