ಪ್ರೇಮ್ ನಿರ್ದೇಶನದ ಬಹುನಿರೀಕ್ಷಿತ ಸಿನಿಮಾ ‘KD’ ಯಾವಾಗ ಅಭಿಮಾನಿಗಳ ಮುಂದೆ ಬರಲಿದೆ?


ಕನ್ನಡ ಚಿತ್ರರಂಗದ ಅಭಿಮಾನಿಗಳಲ್ಲಿ ಭಾರಿ ನಿರೀಕ್ಷೆ ಹುಟ್ಟಿಸಿದ್ದ ‘KD’ ಸಿನಿಮಾ ಇನ್ನೂ ಬಿಡುಗಡೆಯ ಹಾದಿ ಕಾಣದೆ ಅಲುಗಾಡುತ್ತಿದೆ. ಮೂರು ವರ್ಷಗಳ ಹಿಂದೆ ಸೆಟ್‌ಎದ್ದ ಈ ಪ್ಯಾನ್ ಇಂಡಿಯಾ ಪ್ರಾಜೆಕ್ಟ್, ಅಭಿಮಾನಿಗಳನ್ನು ದೊಡ್ಡ ನಿರೀಕ್ಷೆಯಲ್ಲಿ ಇಟ್ಟಿತ್ತು. ಈಗಾಗಲೇ ಬಿಡುಗಡೆಯಾದ ಎರಡು ಹಾಡುಗಳು ಹಾಗೂ ಟೀಸರ್‌ಗೆ ಭರ್ಜರಿ ಪ್ರತಿಕ್ರಿಯೆ ಸಿಕ್ಕಿದೆ. ಆದರೂ, ಚಿತ್ರದ ಬಿಡುಗಡೆ ದಿನಾಂಕದ ಬಗ್ಗೆ ಯಾವುದೇ ಅಧಿಕೃತ ಘೋಷಣೆ ಬಂದಿಲ್ಲ.
ಕಳೆದ ಡಿಸೆಂಬರ್‌ನಲ್ಲಿ ‘KD’ ತೆರೆಗೆ ತರ್ತೇವೆ ಎಂದು ಪ್ರೇಮ್ ಘೋಷಿಸಿದ್ದರು. “ಯಾವುದೇ ಸಿನಿಮಾ ಬಂದರೂ ಹೆದರುವುದಿಲ್ಲ, ನಿಗದಿತ ಸಮಯಕ್ಕೆ ನಮ್ಮ ಸಿನಿಮಾ ಬಿಡುಗಡೆಯಾಗುತ್ತದೆ” ಎಂದಿದ್ದರು. ಆದರೆ ಆ ನಂತರ ಚಿತ್ರತಂಡ ಸಂಪೂರ್ಣ ಮೌನ ಸಾಧಿಸಿದೆ. ಪ್ಯಾನ್ ಇಂಡಿಯಾ ಟೂರ್ ಮಾಡಿ ಟೀಸರ್‌ವನ್ನೂ ರಿಲೀಸ್ ಮಾಡಿದ್ದರೂ, ಸಿನಿಮಾ ಬರುತ್ತದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಕೆವಿಎನ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಮೂಡಿ ಬರುತ್ತಿರುವ ಈ ಚಿತ್ರದಲ್ಲಿ: ಸಂಜಯ್ ದತ್, ಕ್ರೇಜಿಸ್ಟಾರ್ ರವಿಚಂದ್ರನ್, ಶಿಲ್ಪಾ ಶೆಟ್ಟಿ, ರಮೇಶ್ ಅರವಿಂದ್, ನಾಯಕಿಯಾಗಿ ರೀಷ್ಮಾ ನಾಣಯ್ಯ, ಬಾಲಿವುಡ್ ನಟಿ ನೋರಾ ಫತೇಹಿ ವಿಶೇಷ ಪಾತ್ರದಲ್ಲಿ ಮಿಂಚುತ್ತಿದ್ದಾರೆ. ವಿಲಿಯಂ ಡೇವಿಡ್ ಛಾಯಾಗ್ರಹಣ ಹಾಗೂ ಅರ್ಜುನ್ ಜನ್ಯಾ ಸಂಗೀತ ಚಿತ್ರಕ್ಕಿದೆ.
‘KD’ ಸಿನಿಮಾ 70-80ರ ದಶಕದ ನೈಜ ಘಟನೆಗಳ ಆಧಾರದ ಮೇಲೆ ಮೂಡಿಬರುತ್ತಿದೆ. ಪ್ರೇಮ್ ನಿರ್ದೇಶನದಲ್ಲಿ ಭಾರೀ ಸೆಟ್‌ಗಳನ್ನು ಹಾಕಿ ಚಿತ್ರೀಕರಣ ನಡೆಸಲಾಗಿದೆ. ಬೆಂಗಳೂರು, ಮೈಸೂರು ಮತ್ತು ವಿದೇಶಗಳಲ್ಲಿ ಚಿತ್ರೀಕರಣ ಮುಗಿದಿದೆ ಎಂದು ಹೇಳಲಾಗುತ್ತಿದೆಯಾದರೂ, ಇನ್ನೂ ಕೆಲವು ಭಾಗ ಬಾಕಿ ಉಳಿದಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಸಿನಿಮಾದ ರೀ-ರೆಕಾರ್ಡಿಂಗ್ ಮತ್ತು ಸಾಂಗ್ ರೆಕಾರ್ಡಿಂಗ್ ವಿದೇಶದಲ್ಲಿ ನಡೆಯುತ್ತಿದೆ. ನಿರ್ಮಾಪಕರು ಯಾವುದಕ್ಕೂ ರಾಜಿಯಾಗದೇ ಚಿತ್ರವನ್ನು ಅದ್ಧೂರಿಯಾಗಿ ಮೂಡಿಸಲು ಶ್ರಮಿಸುತ್ತಿದ್ದಾರೆ. ಆದರೆ ಇದೇ ಕಾರಣಕ್ಕೆ ಸಿನಿಮಾದ ಬಿಡುಗಡೆ ದಿನಾಂಕವನ್ನು ಮುಂದೂಡುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.
ಈ ವರ್ಷದ ಅಕ್ಟೋಬರ್‌ನಲ್ಲಿ ರಿಷಬ್ ಶೆಟ್ಟಿ ಅವರ ಕಾಂತಾರ 1, ಡಿಸೆಂಬರ್ 12ಕ್ಕೆ ದರ್ಶನ್ ಅಭಿನಯದ ಡೆವಿಲ್, ಡಿಸೆಂಬರ್ 25ಕ್ಕೆ ಶಿವರಾಜ್‌ಕುಮಾರ್–ಉಪೇಂದ್ರ–ರಾಜ್ ಬಿ ಶೆಟ್ಟಿ ಕಾಂಬೋ 45 ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಇಂತಹ ಸಮಯದಲ್ಲಿ ‘KD’ಗೆ ಸೂಕ್ತವಾದ ಸ್ಲಾಟ್ ಸಿಗುವುದೇ ಅನುಮಾನವಾಗಿದೆ. ಧ್ರುವ ಸರ್ಜಾ ನಟನೆಯ ಪ್ರತಿ ಸಿನಿಮಾಗಳೂ ಬಿಡುಗಡೆಯಾಗಲು ಎರಡು-ಮೂರು ವರ್ಷ ಹಿಡಿಯುತ್ತಿದೆ. ‘KD’ ಕೂಡ ಅದೇ ಹಾದಿಯಲ್ಲಿದೆ. ಪ್ರೇಮ್ ನಿರ್ದೇಶಕರೇ ಕೂಡಾ ಸಿನಿಮಾದ ಬಿಡುಗಡೆ ದಿನಾಂಕದ ಬಗ್ಗೆ ಸ್ಪಷ್ಟ ಹೇಳಿಕೆ ನೀಡದಿರುವುದು ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿದೆ.
‘KD’ ಈ ವರ್ಷ ತೆರೆಗೆ ಬರ್ತದೆ? ಇಲ್ಲ ಅಷ್ಟೇ ಮುಂದೂಡ್ತದೆ? ಪ್ರೇಮ್ ನಿರ್ದೇಶನದ ಈ ಬಹುನಿರೀಕ್ಷಿತ ಸಿನಿಮಾ ಯಾವಾಗ ಅಭಿಮಾನಿಗಳ ಮುಂದೆ ಬರಲಿದೆ ಎಂಬುದೇ ಇನ್ನೂ ರಹಸ್ಯವಾಗಿದೆ.
Trending News
ಹೆಚ್ಚು ನೋಡಿ‘ಕಾಂತಾರ: ಚಾಪ್ಟರ್ 1’ ಟ್ರೇಲರ್ ಬಿಡುಗಡೆಗೆ ದಿನಾಂಕ ಫಿಕ್ಸ್ – ಚಾಪ್ಟರ್ 1 ಟ್ರೇಲರ್ ನೋಡಲು ಅಭಿಮಾನಿಗಳ ಕಾತರ!
