Back to Top

ನನ್ನ ಸಿನಿಮಾ ಸೋಲಲು ಅವನೇ ಕಾರಣ: ಯಶ್ ತಾಯಿ ಪುಷ್ಪ ಆರೋಪ!

SSTV Profile Logo SStv August 23, 2025
ಪುಷ್ಪನಿಂದ ಕೆಆರ್‌ಜಿ ಸ್ಟುಡಿಯೊಸ್ ವಿರುದ್ಧ ಆಕ್ರೋಶ
ಪುಷ್ಪನಿಂದ ಕೆಆರ್‌ಜಿ ಸ್ಟುಡಿಯೊಸ್ ವಿರುದ್ಧ ಆಕ್ರೋಶ

ಸ್ಟಾರ್ ನಟ ಯಶ್ ಅವರ ತಾಯಿ ಮತ್ತು ನಿರ್ಮಾಪಕಿ ಪುಷ್ಪ ಈಗ ಕನ್ನಡ ಚಿತ್ರರಂಗದಲ್ಲಿ ದೊಡ್ಡ ವಿವಾದಕ್ಕೆ ಕಾರಣರಾಗಿದ್ದಾರೆ. ಅವರ ನಿರ್ಮಾಣದ ‘ಕೊತ್ತಲವಾಡಿ’ ಸಿನಿಮಾ ಇತ್ತೀಚೆಗೆ ಬಿಡುಗಡೆಯಾಗಿ ಬಾಕ್ಸ್ ಆಫೀಸ್‌ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡದೆ ಫ್ಲಾಪ್ ಆಯಿತು. ಆದರೆ, ಈ ಸೋಲಿಗೆ ಪ್ರೇಕ್ಷಕರು ಕಾರಣವಲ್ಲ, ಚಿತ್ರಮಂದಿರ ಲಾಬಿ ಕಾರಣ ಎಂದು ಪುಷ್ಪ ನೇರವಾಗಿ ಆರೋಪ ಮಾಡಿದ್ದಾರೆ. ‘ಕೊತ್ತಲವಾಡಿ’ ಬಿಡುಗಡೆಯ ಮುನ್ನವೇ ಪುಷ್ಪಲತಾ ನೀಡಿದ ಸಂದರ್ಶನಗಳು ವೈರಲ್ ಆಗಿದ್ದವು. ಸಿಡಿಗುಂಡಿನ ಉತ್ತರಗಳಿಂದ ಅವರು ಸಾಕಷ್ಟು ಚರ್ಚೆಗೆ ಕಾರಣರಾಗಿದ್ದರು. ಆದರೆ ಸಿನಿಮಾ ಬಿಡುಗಡೆಯಾಗಿ ನಿರೀಕ್ಷಿತ ರೀತಿಯಲ್ಲಿ ಯಶಸ್ಸು ಕಾಣದೆ ಹಿನ್ನಡೆಯಾಯಿತು.

“ನಮ್ಮ ಸಿನಿಮಾ ಸೋಲಲು ಜನರು ಕಾರಣ ಅಲ್ಲ, ಬೇರೆ ಕಾರಣ ಇದೆ. ಚಿತ್ರಮಂದಿರ ಕೊಡದೆ ತೊಂದರೆ ಮಾಡಲಾಗಿದೆ. ಅದು ಯಾರೂ ಅಲ್ಲ ಕಾರ್ತಿಕ್. ಅವರು ತಮ್ಮ ‘ಎಕ್ಕ’ ಸಿನಿಮಾಕ್ಕೆ ಚಿತ್ರಮಂದಿರಗಳನ್ನು ಇಟ್ಟುಕೊಂಡು ನಮ್ಮ *‘ಕೊತ್ತಲವಾಡಿ’*ಗೆ ಅವಕಾಶ ಕೊಡಲಿಲ್ಲ” ಎಂದು ನೇರ ಆರೋಪ ಮಾಡಿದ್ದಾರೆ.

“ನಾಳೆ ನನ್ನ ಸಿನಿಮಾಗಳು ಚೆನ್ನಾಗಿ ಹೋದಾಗ ನಾನು ಸಹ ಅವರಿಗೆ ಇದೇ ಕೆಲಸ ಮಾಡುತ್ತೇನೆ. ನಾನು ಸಹಿಸಿಕೊಂಡು ಕುಳಿತುಕೊಳ್ಳುವವಳಲ್ಲ. ಅವರ ಹಿಂದೆ ಯಾರು ಇದ್ದಾರೋ ಅವರ ಹೆಸರನ್ನೂ ಮುಂದಿನ ದಿನಗಳಲ್ಲಿ ಮಾಧ್ಯಮಗಳ ಮುಂದೆ ತರುತ್ತೀನಿ” ಎಂದು ಎಚ್ಚರಿಕೆ ನೀಡಿದ್ದಾರೆ. “ಪ್ರಪಂಚ ಗುಂಡಗಿದೆ. ಇಂದು ನನಗೆ ಆಗಿದ್ದು ನಾಳೆ ಅವರಿಗೆ ಆಗಲಿದೆ. ದುರುದ್ದೇಶದಿಂದ ನನ್ನನ್ನು ತುಳಿದಿದ್ದಾರೆ. ಆದರೆ ನಾನು ಹಿಂಜರಿಯುವುದಿಲ್ಲ. ನನ್ನನ್ನು ಕೆಣಕಿದರೆ ನಾನು ಇನ್ನೂ ಡಬಲ್ ಆಗುತ್ತೀನಿ.”

ಇನ್ನೊಂದೆಡೆ, ಕೆಆರ್‌ಜಿ ಸಂಸ್ಥೆ ನಿರ್ಮಾಪಕ ಹಾಗೂ ವಿತರಕ ಕಾರ್ತಿಕ್ ಗೌಡ ಈ ಆರೋಪದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ‘ಎಕ್ಕ’ ಸಿನಿಮಾ ಜುಲೈ 18ರಂದು ಬಿಡುಗಡೆಯಾಗಿ ಯಶಸ್ಸು ಕಂಡಿತ್ತು. ಅದರ ಕೆಲವೇ ದಿನಗಳ ಬಳಿಕ ‘ಕೊತ್ತಲವಾಡಿ’ ಬಿಡುಗಡೆಯಾದ ಕಾರಣ, ಚಿತ್ರಮಂದಿರ ಹಂಚಿಕೆಯಲ್ಲಿ ರಾಜಕೀಯ ನಡೆದಿದೆ ಎಂಬ ಆರೋಪ ಪುಷ್ಪ ಅವರಿಂದ ಕೇಳಿಬಂದಿದೆ.