Back to Top

ಗರ್ಭದಲ್ಲಿರುವ ಮಗುವನ್ನು ಬಿಡದ ದರ್ಶನ್ ಫ್ಯಾನ್ಸ್; ಅಂಧಾಭಿಮಾನವೋ? ವಿಶಿಷ್ಟ ಪ್ರಯತ್ನವೋ?

SSTV Profile Logo SStv August 28, 2025
ಮಗುವಿಗೂ ಡಿ-ಬಾಸ್ ಫ್ಯಾನ್ ಮ್ಯಾಡ್ನೆಸ್
ಮಗುವಿಗೂ ಡಿ-ಬಾಸ್ ಫ್ಯಾನ್ ಮ್ಯಾಡ್ನೆಸ್

ಅತಿಯಾದರೆ ಅಮೃತವೂ ವಿಷವಾಗುತ್ತದೆ ಎನ್ನುವ ಮಾತಿದೆ. ಅಭಿಮಾನ ಕೂಡ ಅತಿಯಾದಾಗ ಅಂಧಾಭಿಮಾನವಾಗುತ್ತದೆ. ಇಂತಹ ಅಂಧಾಭಿಮಾನಿ ವರ್ತನೆಗಳನ್ನು ನಾವು ಸಿನಿತಾರೆಯರ ಅಭಿಮಾನಿಗಳಲ್ಲಿ ಹೆಚ್ಚು ನೋಡುತ್ತಿದ್ದೇವೆ. ಇತ್ತೀಚಿನ ಉದಾಹರಣೆಯೇ ನಟ ದರ್ಶನ್ ಅವರ ಹೊಸ ಸಿನಿಮಾ ‘ಡೆವಿಲ್’ ಚಿತ್ರದ ಹಾಡಿನ ಸುತ್ತಲಿನ ವಿಚಿತ್ರ ಘಟನೆ.

ದರ್ಶನ್ ಅಭಿನಯದ ‘ಡೆವಿಲ್’ ಚಿತ್ರದ “ಇದ್ರೇ ನೆಮ್ದಿಯಾಗಿರ್ಬೇಕ್” ಹಾಡು ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ. 4 ದಿನಗಳಲ್ಲಿ ಒಂದು ಕೋಟಿಗೂ ಹೆಚ್ಚು ವೀಕ್ಷಣೆ ಗಿಟ್ಟಿಸಿಕೊಂಡ ಈ ಸಾಂಗ್ ಗ್ಲೋಬಲ್ ಮಟ್ಟದಲ್ಲೇ ನಂ.5 ಟ್ರೆಂಡಿಂಗ್ ಸ್ಥಾನ ಪಡೆದುಕೊಂಡಿದೆ. ಅಜನೀಶ್ ಲೋಕನಾಥ್ ಸಂಗೀತ, ಅನಿರುದ್ಧ ಶಾಸ್ತ್ರಿ ಸಾಹಿತ್ಯ ಹಾಗೂ ದೀಪಕ್ ಬ್ಲೂ ಅವರ ದನಿ ಹಾಡಿಗೆ ಹೆಚ್ಚಿನ ಕ್ರೇಜ್ ತಂದುಕೊಟ್ಟಿದೆ.

ಸಾಮಾನ್ಯವಾಗಿ ತಾಯಿ ಗರ್ಭದಲ್ಲಿರುವ ಮಗುವಿಗೆ ಶ್ಲೋಕ, ಭಜನೆ, ಸುಮಧುರ ಸಂಗೀತಗಳನ್ನು ಕೇಳಿಸುವುದು ಒಂದು ಉತ್ತಮ ಪದ್ಧತಿ. ಅಧ್ಯಯನಗಳ ಪ್ರಕಾರ 20 ವಾರಗಳ ನಂತರ ಮಗು ತಾಯಿಯ ಧ್ವನಿ ಮತ್ತು ಹೊರಗಿನ ಸಂಗೀತವನ್ನು ಕೇಳಬಲ್ಲದು. ಇದು ಮಗುವಿನ ಮೆದುಳಿನ ಬೆಳವಣಿಗೆಯಲ್ಲಿಯೂ ಸಹಕಾರಿಯೇ ಆಗುತ್ತದೆ. ಆದರೆ ಒಬ್ಬ ದರ್ಶನ್ ಅಭಿಮಾನಿ ತನ್ನ ಪತ್ನಿಯ ಗರ್ಭದಲ್ಲಿರುವ ಮಗುವಿಗೆ ‘ಡೆವಿಲ್’ ಹಾಡು ಕೇಳಿಸಿದ ವೀಡಿಯೋವನ್ನು ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾನೆ! ಇದನ್ನು ನೋಡಿ ಕೆಲವರು ಮೆಚ್ಚಿ ಸಮರ್ಥಿಸಿದರೆ, ಹಲವರು “ಇದು ಅಭಿಮಾನ ಅಲ್ಲ, ಅಂಧಾಭಿಮಾನ” ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದಕ್ಕೂ ಮುಂಚೆ ದರ್ಶನ್ ಜೈಲು ಸೇರಿದಾಗ ಅವರ ಕೈದಿಯ ಸಂಖ್ಯೆ 6106 ಅನ್ನು ಅಭಿಮಾನಿಗಳು ಟ್ಯಾಟೂ ಮಾಡಿಸಿಕೊಂಡಿದ್ದರು. ಕೆಲವರು ತಮ್ಮ ವಾಹನಗಳ ಮೇಲೆಯೂ ಆ ನಂಬರ್ ಬರೆಸಿಕೊಂಡಿದ್ದರು. ಇಂತಹ ಘಟನೆಗಳು ಅಭಿಮಾನ ಮತ್ತು ಅಂಧಾಭಿಮಾನಗಳ ನಡುವಿನ ಅಂತರವನ್ನು ಸ್ಪಷ್ಟಪಡಿಸುತ್ತವೆ. ಪ್ರಕಾಶ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ಡೆವಿಲ್’ ಒಂದು ಆಕ್ಷನ್ ಥ್ರಿಲ್ಲರ್. ರಚನಾ ರೈ ನಾಯಕಿಯಾಗಿ ಕಾಣಿಸಿಕೊಂಡಿದ್ದು, ಅಚ್ಯುತ್ ಕುಮಾರ್, ಮಹೇಶ್ ಮಂಜ್ರೇಕರ್ ಮೊದಲಾದ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಬೆಂಗಳೂರು, ಮೈಸೂರು, ರಾಜಸ್ಥಾನ ಹಾಗೂ ಥಾಯ್ಲೆಂಡ್‌ನಲ್ಲಿ ಚಿತ್ರೀಕರಣಗೊಂಡಿರುವ ಈ ಚಿತ್ರ ಡಿಸೆಂಬರ್ 12 ರಂದು ಬಿಡುಗಡೆಯಾಗುತ್ತಿದೆ.

ರೇಣುಕಾಸ್ವಾಮಿ ಪ್ರಕರಣದಲ್ಲಿ ನಟ ದರ್ಶನ್ ಜೈಲಿನಲ್ಲಿ ಇದ್ದರೂ, ಅಭಿಮಾನಿಗಳು ಚಿತ್ರ ಬಿಡುಗಡೆಯ ವೇಳೆಗೆ ಅವರು ಹೊರಗೆ ಬರುತ್ತಾರೆ ಎಂಬ ನಿರೀಕ್ಷೆಯಲ್ಲಿ ಕಾಯುತ್ತಿದ್ದಾರೆ. ನಿಮ್ಮ ಅಭಿಪ್ರಾಯವೇನು? ಗರ್ಭಿಣಿಯ ಮಗುವಿಗೆ ‘ಡೆವಿಲ್’ ಹಾಡು ಕೇಳಿಸುವುದು ಅಭಿಮಾನವೋ? ಅಂಧಾಭಿಮಾನವೋ?