ಜೆಪಿ ನಗರದಲ್ಲಿ ಅದ್ಧೂರಿ ಗಣೇಶ ಹಬ್ಬ: ಎಚ್ ಡಿ ಕುಮಾರಸ್ವಾಮಿ & ನಿಖಿಲ್ ಕುಟುಂಬದ ಸಾಂಪ್ರದಾಯಿಕ ಆಚರಣೆ!


ಬೆಂಗಳೂರು ನಗರದ ಜೆಪಿ ನಗರದಲ್ಲಿರುವ ತಮ್ಮ ಸ್ವಂತ ನಿವಾಸದಲ್ಲಿ ಗೌರಿ-ಗಣೇಶ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ್ದಾರೆ ಜೆಡಿಎಸ್ ನಾಯಕ, ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಮತ್ತು ಪುತ್ರ ನಿಖಿಲ್ ಕುಮಾರಸ್ವಾಮಿ ಕುಟುಂಬ. ಈ ಬಾರಿ ಹಬ್ಬದ ಖುಷಿ ದೆಹಲಿಯಿಂದ ಬೆಂಗಳೂರಿಗೆ ವಿಸ್ತರಿಸಿತು. ಕೆಲಸದ ನಿಮಿತ್ತ ಎಚ್ ಡಿ ಕುಮಾರಸ್ವಾಮಿ ತಮ್ಮ ಕುಟುಂಬದೊಂದಿಗೆ ದೆಹಲಿಯಲ್ಲೇ ವಾಸವಾಗಿದ್ದರೂ, ಗೌರಿ-ಗಣೇಶ ಹಬ್ಬಕ್ಕಾಗಿ ವಿಶೇಷವಾಗಿ ಬೆಂಗಳೂರಿಗೆ ಆಗಮಿಸಿ ಕುಟುಂಬಸ್ಥರ ಜೊತೆ ಭಕ್ತಿಯಿಂದ ಹಬ್ಬ ಆಚರಿಸಿದರು.
ಕುಟುಂಬಸ್ಥರೊಂದಿಗೆ ಗಣೇಶ ಹಾಗೂ ಗೌರಿ ಮೂರ್ತಿಗಳನ್ನು ಮನೆಯಲ್ಲಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಯಿತು. ಎಚ್ ಡಿ ಕುಮಾರಸ್ವಾಮಿ, ಪತ್ನಿ ಅನಿತಾ ಕುಮಾರಸ್ವಾಮಿ, ಪುತ್ರ ನಿಖಿಲ್, ಸೊಸೆ ರೇವತಿ ಮತ್ತು ಮೊಮ್ಮಗ ಅವ್ಯಾನ್ ದೇವ್ ಹಬ್ಬದ ಸಂಭ್ರಮದಲ್ಲಿ ಭಾಗವಹಿಸಿದರು.
ನಿಖಿಲ್ ಕುಮಾರಸ್ವಾಮಿ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಬ್ಬದ ಫೋಟೋಗಳನ್ನು ಹಂಚಿಕೊಂಡು ಬರೆದಿದ್ದಾರೆ:
“ವಕ್ರತುಂಡ ಮಹಾಕಾಯ ಕೋಟಿ ಸೂರ್ಯ ಸಮಪ್ರಭ | ನಿರ್ವಿಘ್ನಂ ಕುರು ಮೇ ದೇವ ಸರ್ವ ಕಾರ್ಯೇಷು ಸರ್ವದಾ ||
ಬೆಂಗಳೂರು ಜೆಪಿ ನಗರ ನಿವಾಸದಲ್ಲಿ ಕುಟುಂಬ ಸಮೇತರಾಗಿ ಗೌರಿ ಗಣೇಶ ಹಬ್ಬವನ್ನು ಆಚರಿಸಲಾಯಿತು.
ವಿಘ್ನ ನಿವಾರಕ ಗಣೇಶನು ತಮ್ಮ ವಿಘ್ನಗಳನ್ನು ನಿವಾರಿಸಿ, ಸುಖ, ಶಾಂತಿ, ನೆಮ್ಮದಿ ದಯಪಾಲಿಸಲಿ ಎಂದು ಪ್ರಾರ್ಥಿಸಲಾಯಿತು.”
ನಿಖಿಲ್ ಕುಮಾರಸ್ವಾಮಿ ಪತ್ನಿ ರೇವತಿ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ. ಎಚ್ ಡಿ ಕುಮಾರಸ್ವಾಮಿ-ಅನಿತಾ ಕುಮಾರಸ್ವಾಮಿ ದಂಪತಿ ಭಕ್ತಿಯಿಂದ ಪೂಜೆ ಸಲ್ಲಿಸಿದ ಫೋಟೋಗಳು ವೈರಲ್ ಆಗಿವೆ. ಮಗ ಅವ್ಯಾನ್ ದೇವ್ ಕೂಡ ಕುಟುಂಬದ ಜೊತೆ ಸಂಭ್ರಮ ಹಂಚಿಕೊಂಡಿದ್ದಾನೆ. ಈ ಹಿಂದೆ ದೆಹಲಿಯಲ್ಲೇ ವರಮಹಾಲಕ್ಷ್ಮೀ ಹಬ್ಬ ಹಾಗೂ ಕೃಷ್ಣ ಜನ್ಮಾಷ್ಟಮಿ ಆಚರಿಸಿದ್ದ ಕುಮಾರಸ್ವಾಮಿ ಕುಟುಂಬ, ಈ ಬಾರಿ ಬೆಂಗಳೂರಿನಲ್ಲಿ ಗಣಪತಿ ಹಬ್ಬವನ್ನು ಆಚರಿಸಿದ್ದು ವಿಶೇಷ.
ನಿಖಿಲ್ ಕುಮಾರಸ್ವಾಮಿ ರೇವತಿ ದಂಪತಿ 2020ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಅವ್ಯಾನ್ ದೇವ್ ಅವರ ಒಬ್ಬನೇ ಮಗ. ಪ್ರತಿಯೊಂದು ಹಬ್ಬವನ್ನೂ ಕುಟುಂಬ ಸಮೇತರಾಗಿ ಸಂಭ್ರಮಿಸುವ ಕುಮಾರಸ್ವಾಮಿ ಕುಟುಂಬ ಈ ಬಾರಿ ಕೂಡ ಭಕ್ತಿಭಾವದಿಂದ ಹಾಗೂ ಅದ್ಧೂರಿಯಾಗಿ ಆಚರಿಸಿದ್ದು ಅಭಿಮಾನಿಗಳ ಮನ ಸೆಳೆದಿದೆ.
Trending News
ಹೆಚ್ಚು ನೋಡಿ‘ಕಾಂತಾರ: ಚಾಪ್ಟರ್ 1’ ಟ್ರೇಲರ್ ಬಿಡುಗಡೆಗೆ ದಿನಾಂಕ ಫಿಕ್ಸ್ – ಚಾಪ್ಟರ್ 1 ಟ್ರೇಲರ್ ನೋಡಲು ಅಭಿಮಾನಿಗಳ ಕಾತರ!
