Back to Top

ಭಾರ್ಗವಿ ಎಲ್‌ಎಲ್‌ಬಿ ಬಳಿಕ, ಬೆಳ್ಳಿ ತೆರೆಗೆ ಕಾಲಿಡುತ್ತಿರುವ ಗೌತಮಿ ಜಾಧವ್ – ಸಿನಿಮಾ ಯಾವುದು?

SSTV Profile Logo SStv August 25, 2025
ಹಾರರ್ ಎಂಟರ್‌ಟೈನರ್ "ಮಂಗಳಾಪುರಂ"ನಲ್ಲಿ ಗೌತಮಿ
ಹಾರರ್ ಎಂಟರ್‌ಟೈನರ್ "ಮಂಗಳಾಪುರಂ"ನಲ್ಲಿ ಗೌತಮಿ

‘ಬಿಗ್ ಬಾಸ್‌’ ಕನ್ನಡ ಸೀಸನ್ 11ರಲ್ಲಿ ಸ್ಪರ್ಧಿಯಾಗಿದ್ದ ನಟಿ ಗೌತಮಿ ಜಾಧವ್, ಬಹಳ ದಿನಗಳ ನಂತರ ಮತ್ತೆ ಚಲನಚಿತ್ರ ರಂಗಕ್ಕೆ ಮರಳಿದ್ದಾರೆ. ಇತ್ತೀಚೆಗೆ ಕಲರ್ಸ್ ಕನ್ನಡ ವಾಹಿನಿಯ ‘ಭಾರ್ಗವಿ ಎಲ್‌ಎಲ್‌ಬಿ’ ಧಾರಾವಾಹಿಯಲ್ಲಿ ಗೆಸ್ಟ್ ರೋಲ್ ಮಾಡಿದ್ದ ಅವರು, ಈಗ ‘ಮಂಗಳಾಪುರಂ’ ಎಂಬ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಈ ಸಿನಿಮಾದಲ್ಲಿ ಗೌತಮಿ ಸುಕನ್ಯಾ ಎಂಬ ಪಾತ್ರವನ್ನು ನಿರ್ವಹಿಸುತ್ತಿದ್ದು, “ಆಸ್ತಿಕರ ನಾಡಿಗೆ ನಾಸ್ತಿಕನ ಮಡದಿಯಾಗಿ ಬರುತ್ತಿದ್ದೇನೆ.. ನಿಮ್ಮೆಲ್ಲರ ಪ್ರೋತ್ಸಾಹ ಬೇಕು” ಎಂದು ಪಾತ್ರ ಪರಿಚಯ ಮಾಡಿದ್ದಾರೆ.

ಚಿತ್ರದ ನಾಯಕನಾಗಿ ‘ಕವಲುದಾರಿ’ ಖ್ಯಾತಿಯ ರಿಷಿ ನಟಿಸುತ್ತಿದ್ದು, ಜೊತೆಗೆ ಹಿರಿಯ ನಟ ಕಾಶಿನಾಥ್ ಅವರ ಪುತ್ರ ಅಭಿಮನ್ಯು ಕೂಡ ಮುಖ್ಯ ಪಾತ್ರದಲ್ಲಿದ್ದಾರೆ. ತುಳು ಚಿತ್ರರಂಗದಲ್ಲಿ ಹೆಸರು ಮಾಡಿರುವ ರಂಜಿತ್ ರಾಜ್ ಸುವರ್ಣ ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ.

‘ಮಂಗಳಾಪುರಂ’ ಒಂದು ಮರ್ಡರ್ ಮಿಸ್ಟರಿ ಡ್ರಾಮಾ, ಇದರಲ್ಲಿ ನಂಬಿಕೆ, ಮೂಢನಂಬಿಕೆ ಮತ್ತು ಪವಾಡಗಳ ಕುರಿತು ಕಥೆ ಸಾಗಲಿದೆ. ಚಿತ್ರತಂಡ ಈಗಾಗಲೇ ಫಸ್ಟ್ ಲುಕ್ ಬಿಡುಗಡೆ ಮಾಡಿ ಎಲ್ಲರ ಗಮನ ಸೆಳೆದಿದೆ. ಕಾರ್ಕಳ, ತೀರ್ಥಹಳ್ಳಿ, ಮಡಿಕೇರಿ ಮತ್ತು ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆದಿದೆ.

ಈ ಚಿತ್ರಕ್ಕೆ ಗೌತಮಿ ಅವರ ಪತಿ ಅಭಿಷೇಕ್ ಕಾಸರಗೋಡು ಛಾಯಾಗ್ರಹಣ ಮಾಡುತ್ತಿರುವುದು ವಿಶೇಷ. ವಿದ್ವಾನ್ ಪ್ರಸನ್ನ ತಂತ್ರಿ ಮೂಡಬಿದ್ರೆ ಮತ್ತು ರಾಮ್ ಪ್ರಸಾದ್ ಅವರು ನಿರ್ಮಾಣ ಮಾಡುತ್ತಿರುವ ಈ ಸಿನಿಮಾ ಅವರ ಪ್ರಥಮ ನಿರ್ಮಾಣ ಪ್ರಯತ್ನ. ಸಂಗೀತ ನಿರ್ದೇಶನವನ್ನು ಅನೂಪ್ ಸಿಳೀನ್ ನಿರ್ವಹಿಸುತ್ತಿದ್ದು, ಶೀಘ್ರದಲ್ಲೇ ಸಿನಿಮಾ ತೆರೆಗೆ ಬರಲಿದೆ.