Back to Top

‘ಯುವ ಸಂಭ್ರಮ’ದಲ್ಲಿ ತ್ರಿವಿಕ್ರಮ್‌ ಮತ್ತು ಕಾರ್ತಿಕ್‌ ಮಹೇಶ್‌ ವಿರುದ್ಧ ಅವಮಾನ? ನಟ ತ್ರಿವಿಕ್ರಮ್ ನೀಡಿದ ಸ್ಪಷ್ಟನೆ

SSTV Profile Logo SStv September 17, 2025
‘ಯುವ ಸಂಭ್ರಮ’ದಲ್ಲಿ ತ್ರಿವಿಕ್ರಮ್–ಕಾರ್ತಿಕ್ ಮಹೇಶ್ಗೆ ಅವಮಾನ
‘ಯುವ ಸಂಭ್ರಮ’ದಲ್ಲಿ ತ್ರಿವಿಕ್ರಮ್–ಕಾರ್ತಿಕ್ ಮಹೇಶ್ಗೆ ಅವಮಾನ

ದಸರಾ ಹಬ್ಬದ ಅಂಗವಾಗಿ ನಡೆದ ‘ಯುವ ಸಂಭ್ರಮ’ ಕಾರ್ಯಕ್ರಮದಲ್ಲಿ, ‘ಬಿಗ್ ಬಾಸ್‌’ ಕನ್ನಡ ಸೀಸನ್ 11ರ ರನ್ನರ್ ಅಪ್ ತ್ರಿವಿಕ್ರಮ್ ಹಾಗೂ ಸೀಸನ್ 10ರ ವಿಜೇತ ಕಾರ್ತಿಕ್ ಮಹೇಶ್‌ಗೆ ವೇದಿಕೆಯಲ್ಲಿ ಮಾತನಾಡಲು ಅವಕಾಶ ಸಿಗಲಿಲ್ಲವೆಂಬ ಆರೋಪಗಳು ಸೋಶಿಯಲ್ ಮೀಡಿಯಾದಲ್ಲಿ ಜೋರಾಗಿ ಹರಿದಾಡುತ್ತಿವೆ. ಅಭಿಮಾನಿಗಳ ಪ್ರಕಾರ, ಇಬ್ಬರಿಗೂ ಸೂಕ್ತ ಗೌರವ ನೀಡದೆ ಅವಮಾನ ಮಾಡಲಾಗಿದೆ. ಆದರೆ, ಈ ಬಗ್ಗೆ ನಟ ತ್ರಿವಿಕ್ರಮ್ ತಾವು ಅನುಭವಿಸಿದ ಸತ್ಯಾಸತ್ಯತೆಗಳನ್ನು ಹಂಚಿಕೊಂಡಿದ್ದಾರೆ.

ತ್ರಿವಿಕ್ರಮ್ ಮಾಧ್ಯಮಗಳ ಜೊತೆ ಮಾತನಾಡುತ್ತಾ, ತಮಗೆ ಯಾವ ರೀತಿಯ ಅವಮಾನವಾಗಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ.
ಅವರ ಮಾತಿನಲ್ಲಿ: “ಪ್ರತಿ ಬಾರಿಗೆ ಅವರು ನಮ್ಮನ್ನ ಆಹ್ವಾನಿಸುತ್ತಾರೆ. ನಮಗೆ ಸ್ವಲ್ಪ ಸಮಯವನ್ನು ಕೊಡುತ್ತಾರೆ. ನಾವು ಸ್ಟೇಜ್ ಮೇಲೆ ಹೋದಾಗ ಹಲವಾರು ವಿಚಾರಗಳನ್ನು ಹಂಚಿಕೊಳ್ಳಬೇಕು ಅನ್ನಿಸುತಿರುತ್ತದೆ. ಆದರೆ ಅಭಿಮಾನಿಗಳ ‘ಡಿ ಬಾಸ್... ಡಿ ಬಾಸ್...’ ಕೂಗಾಟದ ನಡುವೆ ನಮ್ಮ ಮಾತು ಕೇಳಿಸದೇ ಹೋಗುತ್ತದೆ. ಇದನ್ನ ನಾನು ಅವಮಾನವೆಂದು ತೆಗೆದುಕೊಂಡಿಲ್ಲ. ಏಕೆಂದರೆ, ನಾನೂ ಡಿ ಬಾಸ್ ಅವರ ಅಭಿಮಾನಿ. ಅವರ ಹೆಸರು ಕೂಗಿದಾಗ ನನಗೂ ಸಂತೋಷವೇ ಆಗುತ್ತದೆ. ಆದರೆ ನಾನು ಹೇಳಬೇಕೆಂದುಕೊಂಡ ವಿಷಯಗಳು ಹೇಳಲಾಗದೇ ಹೋದರೆ ಸ್ವಲ್ಪ ಬೇಜಾರು ಆಗುತ್ತದೆ ಅಷ್ಟೇ.”

ತ್ರಿವಿಕ್ರಮ್ ತಮ್ಮ ಭಾವನೆ ಹಂಚಿಕೊಳ್ಳುತ್ತಾ, ಅಭಿಮಾನಿಗಳ ಉತ್ಸಾಹವನ್ನು ಗೌರವಿಸಿದ್ದಾರೆ. ಆದರೆ ಅದೇ ಸಮಯದಲ್ಲಿ ಅವರು ಹೇಳಲು ಬಯಸಿದ ಮಾತುಗಳೇ ನಿಲ್ಲಿಬಿಡುವುದರಿಂದ ಸ್ವಲ್ಪ ಅಸಮಾಧಾನವಿದೆ ಎಂದಿದ್ದಾರೆ.

“ನಮಗೆ ದೊರೆಯುವ ಇಂತಹ ದೊಡ್ಡ ವೇದಿಕೆಗಳಲ್ಲಿ ನಮ್ಮ ಭಾವನೆಗಳನ್ನು ಹಂಚಿಕೊಳ್ಳಬೇಕು ಅಂತ ಹೋದಾಗ, ಕೆಲವರು ಕಿರುಚುತ್ತಾರೆ. ಅವರು ಯಾರನ್ನೂ ವೈಯಕ್ತಿಕವಾಗಿ ಹರ್ಟ್ ಮಾಡಬೇಕೆಂದು ಮಾಡುತ್ತಿಲ್ಲ. ಆದರೆ ಕನಿಷ್ಠ ಎರಡು ನಿಮಿಷಗಳಾದರೂ ಮಾತನಾಡಲು ಅವಕಾಶ ಕೊಟ್ಟರೆ ಸಾಕು. ಆಮೇಲೆ ಎಷ್ಟು ಬೇಕಾದರೂ ಕೂಗಲಿ.”

ತ್ರಿವಿಕ್ರಮ್ ಪ್ರಕಾರ, ಈ ದಿನಗಳಲ್ಲಿ ಅಭಿಮಾನಿಗಳ ವರ್ತನೆಗೆ ಸೋಶಿಯಲ್ ಮೀಡಿಯಾದ ಪ್ರಭಾವ ಹೆಚ್ಚಾಗಿದೆ. “ಇದೀಗ ಎಲ್ಲವೂ ಲೈಕ್ಸ್ ಮತ್ತು ವೀವ್ಸ್ ಮೇಲೆ ನಿಂತಿದೆ. ಕ್ಯಾಮೆರಾ ತಮ್ಮ ಕಡೆ ಪ್ಯಾನ್ ಆಗುತ್ತದೆ ಎಂದು ಗೊತ್ತಾದಾಗ, ಜೋರಾಗಿ ಕಿರುಚುತ್ತಾರೆ. ಹೀಗಾಗಿಯೇ ನಾವು ಹೇಳಬೇಕಾದ್ದು ಹೇಳಲಾಗದೇ ಹೋಗುತ್ತದೆ. ಇದನ್ನ ನೇರವಾಗಿ ತಡೆಹಿಡಿಯಲು ಸಾಧ್ಯವಿಲ್ಲ.”

ತ್ರಿವಿಕ್ರಮ್ ತಮ್ಮ ಸಂದೇಶದಲ್ಲಿ ಸ್ಪಷ್ಟಪಡಿಸಿರುವುದು ಏನೆಂದರೆ, ಅವರಿಗೆ ಅಥವಾ ಕಾರ್ತಿಕ್ ಮಹೇಶ್ ಅವರಿಗೆ ಅವಮಾನ ಮಾಡಿಲ್ಲ. ಬದಲಿಗೆ ಅಭಿಮಾನಿಗಳ ಡಿ ಬಾಸ್ ಪ್ರೀತಿ ಅವರ ಮಾತುಗಳ ಮಧ್ಯೆ ಅಡ್ಡಿಯಾಗಿದೆ. ಆದರೆ, ಅವರು ಮನವಿ ಮಾಡಿಕೊಂಡಿರುವುದು ಯಾರೇ ವೇದಿಕೆಗೆ ಬಂದರೂ ಕನಿಷ್ಠ ಎರಡು ನಿಮಿಷ ಮೌನವಾಗಿ ಕೇಳಿಸಿಕೊಳ್ಳಿ, ಆಮೇಲೆ ಎಷ್ಟು ಬೇಕಾದರೂ ಕೂಗಬಹುದು.

‘ಯುವ ಸಂಭ್ರಮ’ ಕಾರ್ಯಕ್ರಮದ ಸುತ್ತಲಿನ ವಿವಾದಕ್ಕೆ ತ್ರಿವಿಕ್ರಮ್ ಬುದ್ಧಿವಂತಿಕೆಯಿಂದ ಸ್ಪಷ್ಟನೆ ನೀಡಿದ್ದಾರೆ. ಅಭಿಮಾನಿಗಳ ಪ್ರೀತಿ ತಮ್ಮ ಮಾತುಗಳನ್ನು ಅಡ್ಡಿಪಡಿಸಿದರೂ, ಅದನ್ನು ಅವರು ಅವಮಾನ ಎಂದು ತೆಗೆದುಕೊಳ್ಳದೆ, ಬದಲಿಗೆ ಸ್ವಲ್ಪ ಬೇಜಾರು ಎಂದಷ್ಟೇ ಹೇಳಿದ್ದಾರೆ.