Back to Top

"ಗೆರಿಲ್ಲಾ WAR" ಚಿತ್ರದಲ್ಲಿ ರಿಯಲ್ ಸ್ಟಾರ್ ಉಪೇಂದ್ರ - ಓಂಪ್ರಕಾಶ್ ರಾವ್ ಜೋಡಿ. ತೆರೆಯ ಮೇಲೆ ಮಾಡಲಿದೆ ಮೋಡಿ

SSTV Profile Logo SStv September 17, 2025
"ಗೆರಿಲ್ಲಾ WAR" ಚಿತ್ರದಲ್ಲಿ ರಿಯಲ್ ಸ್ಟಾರ್ ಉಪೇಂದ್ರ
"ಗೆರಿಲ್ಲಾ WAR" ಚಿತ್ರದಲ್ಲಿ ರಿಯಲ್ ಸ್ಟಾರ್ ಉಪೇಂದ್ರ

"AK 47", "ಲಾಕಪ್ ಡೆತ್",  " ಕಲಾಸಿಪಾಳ್ಯ", "ಹುಚ್ಚ" ಸೇರಿದಂತೆ ಸಾಕಷ್ಟು ಜನಪ್ರಿಯ ಚಿತ್ರಗಳನ್ನು ನಿರ್ದೇಶಿಸಿರುವ ಹಿರಿಯ ನಿರ್ದೇಶಕ ಓಂಪ್ರಕಾಶ್ ರಾವ್ ನಿರ್ದೇಶನದ 50ನೇ ಚಿತ್ರ "ಗೆರಿಲ್ಲಾ WAR". ಈ ಚಿತ್ರದ ನಾಯಕರಾಗಿ ರಿಯಲ್ ಸ್ಟಾರ್ ಉಪೇಂದ್ರ ಅಭಿನಯಿಸುತ್ತಿದ್ದಾರೆ. ಸೆಪ್ಟೆಂಬರ್ 18 ಉಪೇಂದ್ರ ಅವರ ಹುಟ್ಟುಹಬ್ಬ. ಈ ಸಂದರ್ಭದಲ್ಲಿ ವಿಶೇಷ ಪೋಸ್ಟರ್ ಬಿಡುಗಡೆ ಮಾಡಿ "ಗೆರಿಲ್ಲಾ WAR" ಚಿತ್ರತಂಡ ಉಪೇಂದ್ರ ಅವರಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದೆ.

ಪ್ರಸ್ತುತ ಓಂಪ್ರಕಾಶ್ ರಾವ್ ನಿರ್ದೇಶನದ ಬಹು ನಿರೀಕ್ಷಿತ "ತ್ರಿಶೂಲಂ" ಚಿತ್ರದಲ್ಲೂ ಉಪೇಂದ್ರ ಅವರು ನಟಿಸಿದ್ದು, "ಗೆರಿಲ್ಲಾ WAR" ಇವರಿಬ್ಬರ ಕಾಂಬಿನೇಶನ್ ನಲ್ಲಿ ಮೂಡಿಬರುತ್ತಿರುವ ಎರಡನೇ ಚಿತ್ರವಾಗಿದೆ.     

                   

ಬೇಬಿ ಇಂಚರ ಅರ್ಪಿಸುವ, ಎನ್ ಎಸ್ ರಾವ್ ಸಿನಿ ಕ್ರಿಯೇಷನ್ಸ್ ಲಾಂಛನದಲ್ಲಿ ಓಂಪ್ರಕಾಶ್ ರಾವ್ ಹಾಗೂ ಆರ್ ವಾಸುದೇವ ರೆಡ್ಡಿ ಅವರು ನಿರ್ಮಿಸುತ್ತಿರುವ ಈ ಚಿತ್ರದ ಚಿತ್ರೀಕರಣ ಸದ್ಯದಲ್ಲೇ ಆರಂಭವಾಗಲಿದೆ. ಡೆನ್ನಿಸಾ ಪ್ರಕಾಶ್ ಅವರು ಬರೆದಿರುವ ಕಥೆಗೆ ಓಂಪ್ರಕಾಶ್ ರಾವ್ ಅವರೆ ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಖ್ಯಾತ ಸಾಹಿತಿ ಹಾಗೂ ಸಂಗೀತ ನಿರ್ದೇಶಕ ಹಂಸಲೇಖ ಅವರು ಹಾಡುಗಳನ್ನು ಬರೆದು ಸಂಗೀತ ಸಂಯೋಜಿಸುತ್ತಿದ್ದಾರೆ. ರವಿಕುಮಾರ್ ಛಾಯಾಗ್ರಹಣ, ಲಕ್ಷ್ಮಣ್ ರೆಡ್ಡಿ ಸಂಕಲನ ಹಾಗೂ ರವಿವರ್ಮ ಅವರ ಸಾಹಸ ನಿರ್ದೇಶನವಿರುವ "ಗೆರಿಲ್ಲಾ ವಾರ್" ಚಿತ್ರಕ್ಕೆ ದೀಪು ಪಿ.ಆರ್ ಸಂಭಾಷಣೆ ಬರೆಯುತ್ತಿದ್ದಾರೆ.                

ಉಪೇಂದ್ರ ಅವರಿಗೆ ನಾಯಕಿಯಾಗಿ ನಿಮಿಕಾ ರತ್ನಾಕರ್ ನಟಿಸುತ್ತಿದ್ದಾರೆ. ರಂಗಾಯಣ ರಘು, ಸ್ವಸ್ತಿಕ್ ಶಂಕರ್, ಅಚ್ಯುತ್ ರಾವ್, ಭಾಸ್ಕರ್ ಶೆಟ್ಟಿ, ಆರಾಧ್ಯ, ಶ್ವೇತ ವೀರೇಶ್ ಮುಂತಾದವರು ತಾರಾಬಳಗದಲ್ಲಿದ್ದಾರೆ.

"ಗೆರಿಲ್ಲಾ WAR" ಒಂದು ರೀತಿಯ ಯುದ್ಧವಾಗಿದ್ದು, ಅಲ್ಲಿ ಒಂದು ಸಣ್ಣ ಗುಂಪು ದೊಡ್ಡ ಸಂಖ್ಯೆಯ ಶತ್ರುಗಳೊಂದಿಗೆ ವ್ಯವಹರಿಸುವಾಗ ಅಸಾಂಪ್ರದಾಯಿಕ ತಂತ್ರಗಳನ್ನು ಬಳಸುತ್ತದೆ. ಹಿಂದೆ ಈ ರೀತಿಯ ಯುದ್ಧಗಳು ಆಗಿರುವ ಅನೇಕ ಉದಾಹರಣೆಗಳಿದೆ. ಹಾಗಂತ ನಮ್ಮದು ಐತಿಹಾಸಿಕ ಚಿತ್ರವಲ್ಲ. ಈ ವಿಷಯವನ್ನಿಟ್ಟುಕೊಂಡು ಪ್ರಸಕ್ತ ನಾವು ಎದುರಿಸುತ್ತಿರುವ ಅನೇಕ ಸಮಸ್ಯೆಗಳ ಬಗ್ಗೆ ತೋರಿಸುವ ಪ್ರಯತ್ನ ಮಾಡಲಾಗುತ್ತಿದೆ. ಉಪೇಂದ್ರ ಅವರು ಈ ಚಿತ್ರದಲ್ಲಿ ಸೈನಿಕನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆದರೆ ಈ ಸೈನಿಕ ಗಡಿ ಮಾತ್ರ ಕಾಯುವ ಸೈನಿಕನಲ್ಲ‌‌. ಪ್ರಸ್ತುತ ನಾವು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸುವ ಧೀಮಂತ ನಾಯಕ. ಇನ್ನೂ, ಈಗಿನ ನೂತನ ತಂತ್ರಜ್ಞಾನಗಳನ್ನು ಬಳಸಿಕೊಂಡು ಅಪಾರವೆಚ್ಚದಲ್ಲಿ ಅದ್ದೂರಿಯಾಗಿ ಈ ಚಿತ್ರ ಮೂಡಿಬರಲಿದೆ ಎಂದು ನಿರ್ದೇಶಕ ಓಂಪ್ರಕಾಶ್ ರಾವ್ ತಿಳಿಸಿದ್ದಾರೆ.