‘ಕೊತ್ತಲವಾಡಿ’ ಸಂಭಾವನೆ ಕಿರಿಕ್ – ಯಶ್ ತಾಯಿ ನಿರ್ಮಾಣದ ಮೊದಲ ಸಿನಿಮಾದ ವಿವಾದಕ್ಕೆ ಮೇಜರ್ ಟ್ವಿಸ್ಟ್!


ಯಶ್ ತಾಯಿ ಪುಷ್ಪ ನಿರ್ಮಾಣದಲ್ಲಿ ಮೂಡಿ ಬಂದ ಮೊದಲ ಸಿನಿಮಾ ‘ಕೊತ್ತಲವಾಡಿ’ ಆಗಸ್ಟ್ 1ರಂದು ತೆರೆಗೆ ಬಂದು ಇದೀಗ ಒಟಿಟಿಯಲ್ಲಿಯೂ ಲಭ್ಯವಾಗಿದೆ. ಆದರೆ ಸಿನಿಮಾ ಬಿಡುಗಡೆಯಾದ ಕೆಲವು ವಾರಗಳ ಬಳಿಕವೇ ಇದು ಸಂಭಾವನೆ ಕಿರಿಕ್ ವಿಷಯಕ್ಕೆ ಸಿಕ್ಕಿಬಿದ್ದಿದೆ. ಚಿತ್ರದಲ್ಲಿ ನಟಿಸಿದ ಕೆಲ ಕಲಾವಿದರು ತಮ್ಮ ಸಂಭಾವನೆ ನೀಡದಿರುವ ಬಗ್ಗೆ ದೂರಲು ಆರಂಭಿಸಿದ್ದು, ಈಗ ಅದೇ ವಿಚಾರಕ್ಕೆ ದೊಡ್ಡ ತಿರುವು ಸಿಕ್ಕಿದೆ.
ಚಿತ್ರದಲ್ಲಿ ಸಹನಟನಾಗಿ ಕಾಣಿಸಿಕೊಂಡ ಮಹೇಶ್ ಗುರು, “ಮೂರು ತಿಂಗಳು ಶೂಟಿಂಗ್‌ನಲ್ಲಿ ಪಾಲ್ಗೊಂಡಿದ್ದರೂ ನನಗೆ ಸಂಭಾವನೆ ನೀಡಿಲ್ಲ” ಎಂದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮೂಲಕ ಹಂಚಿಕೊಂಡಿದ್ದರು. ಅವರು ತಮ್ಮ ಮಾತುಗಳು ಯಶ್ ತಾಯಿಯ ಕಿವಿಗೆ ತಲುಪಬೇಕು ಎಂಬ ಆಶಯವನ್ನೂ ವ್ಯಕ್ತಪಡಿಸಿದ್ದರು.
ಆದರೆ ಈ ದೂರಿನ ನಂತರ, ಚಿತ್ರದ ನಿರ್ದೇಶಕ ಶ್ರೀರಾಜ್ ಆಕ್ರೋಶ ವ್ಯಕ್ತಪಡಿಸಿ, “ಮಹೇಶ್ ಗುರು ಅವರಿಗೆ ಪಾವತಿಯನ್ನು ಈಗಾಗಲೇ ಮಾಡಲಾಗಿದೆ. ಆದರೂ ಅವರು ಸುಳ್ಳು ಆರೋಪ ಮಾಡುತ್ತಿದ್ದಾರೆ” ಎಂದು ಹೇಳಿದ್ದಾರೆ. ಇಷ್ಟೇ ಅಲ್ಲದೆ, ಶ್ರೀರಾಜ್ ಅವರು ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು NCR (Non-Cognizable Report) ದಾಖಲಿಸಿಕೊಂಡಿದ್ದಾರೆ.
ಪೋಲೀಸ್ ದೂರು ದಾಖಲಾಗುತ್ತಿದ್ದಂತೆ, ಮಹೇಶ್ ಗುರು ಮತ್ತೆ ತಮ್ಮ ಮಾತು ಹಂಚಿಕೊಂಡಿದ್ದಾರೆ: “ನನಗೆ ಹಣದಾಸೆ ಇಲ್ಲ. ಕೋಟಿಗಟ್ಟಲೆ ಕೇಳುತ್ತಿಲ್ಲ. ಕೇವಲ ಒಪ್ಪಂದದ ಪ್ರಕಾರ ಬಾಕಿ ಉಳಿದಿರುವ ₹1.5 ಲಕ್ಷ ಹಣ ಕೇಳುತ್ತಿದ್ದೇನೆ. ಸಿನಿಮಾಗೆ ತೊಂದರೆಯಾಗಬಾರದು ಅಂತ ಇಷ್ಟು ದಿನ ಸುಮ್ಮನಿದ್ದೆ.” “ಮೊದಲು ನಗದು ಕೊಟ್ಟಿದ್ದೇನೆ ಅಂತ ಹೇಳಿದ್ದರು, ಈಗ ಆನ್‌ಲೈನ್ ಕಳುಹಿಸಿದ್ದೇನೆ ಅಂತ ಹೇಳುತ್ತಿದ್ದಾರೆ. ನನ್ನ ಖಾತೆ ವಿವರ ಪರಿಶೀಲಿಸುತ್ತೇನೆ. ನಾನು ಯಾವುದೇ ಷಡ್ಯಂತ್ರ ಮಾಡುತ್ತಿಲ್ಲ, ಕೇವಲ ನ್ಯಾಯ ಕೇಳುತ್ತಿದ್ದೇನೆ.” ಎಂದು ಭಾವನಾತ್ಮಕವಾಗಿ ವ್ಯಕ್ತಪಡಿಸಿದ್ದರು.
ಮಹೇಶ್ ಗುರು ಮಾತ್ರವಲ್ಲದೆ, ಚಿತ್ರದಲ್ಲಿ ಅಭಿನಯಿಸಿದ ಇನ್ನೊಬ್ಬ ಸಹನಟಿಗೂ ಸಂಭಾವನೆ ನೀಡಿಲ್ಲ ಎಂಬ ಆರೋಪ ಕೂಡಾ ಕೇಳಿಬಂದಿದೆ. ಅವರ ತಾಯಿ ಸ್ವರ್ಣ ಭಾವನಾತ್ಮಕವಾಗಿ, “ನನ್ನ ಮಗಳು ಮೂರು ತಿಂಗಳು ಶ್ರಮ ಪಟ್ಟಿದ್ದಾಳೆ. ಅವಳಿಗೆ ಅಪ್ಪ ಇಲ್ಲ, ನಾನೇ ಅವಳನ್ನು ನೋಡಿಕೊಳ್ಳುತ್ತೇನೆ. ನಮ್ಮಂಥ ಬಡವರ ಮಕ್ಕಳ ಹಣ ಕೊಡದೆ ಉದ್ದಾರ ಆಗ್ತೀರಾ? ನನ್ನ ಮಗಳು ಬೆಳಗ್ಗೆಯಿಂದ ಏನು ತಿನ್ನದೇ ಮಲಗಿದ್ದಾಳೆ” ಎಂದು ನಿರ್ದೇಶಕರಿಗೆ ಬೇಸರ ವ್ಯಕ್ತಪಡಿಸಿದ್ದಾರೆ.
ಈ ಮಾತಿನ ಆಡಿಯೋ ಕ್ಲಿಪ್ ಕೂಡಾ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಇದೀಗ, ‘ಕೊತ್ತಲವಾಡಿ’ ಸಂಭಾವನೆ ವಿವಾದ ಗಂಭೀರ ತಿರುವು ಪಡೆದಿದೆ. ಒಂದು ಕಡೆ ನಿರ್ದೇಶಕರು “ಸಂಭಾವನೆ ನೀಡಲಾಗಿದೆ” ಎಂದು ಹೇಳುತ್ತಿದ್ದರೆ, ಇನ್ನೊಂದು ಕಡೆ ಕಲಾವಿದರು “ನ್ಯಾಯ ದೊರಕಿಲ್ಲ” ಎಂದು ಬೀಗುತ್ತಿದ್ದಾರೆ. ಪೋಲೀಸರು ತನಿಖೆ ನಡೆಸುತ್ತಿರುವ ಹಿನ್ನಲೆಯಲ್ಲಿ, ಈ ವಿವಾದ ಯಾವ ದಾರಿಗೆ ಹೋಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.
ಯಶ್ ತಾಯಿ ನಿರ್ಮಿಸಿದ ಮೊದಲ ಸಿನಿಮಾ ‘ಕೊತ್ತಲವಾಡಿ’ ಈಗ ಬಾಕ್ಸ್ ಆಫೀಸ್ ಯಶಸ್ಸಿಗಿಂತ ಹೆಚ್ಚು ಸಂಭಾವನೆ ಕಿರಿಕ್ ವಿಷಯಕ್ಕೆ ಹೆಸರಾಗುತ್ತಿದೆ. ಕಲಾವಿದರ ಬೇಸರ, ನಿರ್ದೇಶಕರ ಪ್ರತಿಕ್ರಿಯೆ ಮತ್ತು ಪೊಲೀಸ್ ತನಿಖೆ ಎಲ್ಲಾ ಸೇರಿ, ಸಿನಿಮಾ ಬಿಡುಗಡೆಯ ನಂತರವೂ ಚರ್ಚೆಗೆ ಕಾರಣವಾಗಿವೆ.
Trending News
ಹೆಚ್ಚು ನೋಡಿಬರ್ತಡೇ ಸಂಭ್ರಮದಲ್ಲಿ ಲಕ್ಷ್ಮೀ ನಿವಾಸದ ಸಿದ್ದೇಗೌಡ್ರು ಖ್ಯಾತಿಯ ಧನಂಜಯ್ ಹೊಸ ಸಿನಿಮಾ ಅನೌನ್ಸ್..
