"ಅಭಿಮಾನಿಗಳ ಆಕ್ರೋಶಕ್ಕೆ ಕಾನೂನು ಉತ್ತರ – ವಿಷ್ಣುವರ್ಧನ್ ಸ್ಮಾರಕ ವಿವಾದಕ್ಕೆ ರಂಗಾಯಣ ರಘು ಪ್ರತಿಕ್ರಿಯೆ"


ವಿಷ್ಣುವರ್ಧನ್ ಸಮಾಧಿಯನ್ನು ರಾತ್ರೋರಾತ್ರಿ ನೆಲಸಮ ಮಾಡಿದ ಘಟನೆ ಕರ್ನಾಟಕದಾದ್ಯಂತ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಅಭಿಮಾನಿಗಳ ಹೃದಯದಲ್ಲಿ ನೋವು ಮೂಡಿಸಿದ ಈ ಘಟನೆಗೆ ಸಂಬಂಧಿಸಿದಂತೆ ಹಲವಾರು ಚಿತ್ರರಂಗದ ಕಲಾವಿದರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಕುರಿತು ಹಿರಿಯ ನಟ ರಂಗಾಯಣ ರಘು ಅವರು ತಮ್ಮ ಸ್ಪಷ್ಟ ಅಭಿಪ್ರಾಯ ನೀಡಿದ್ದಾರೆ.
ಅಭಿಮಾನಿಗಳು ವಿಷ್ಣುವರ್ಧನ್ ಸಮಾಧಿ ಅಭಿಮಾನ್ ಸ್ಟುಡಿಯೋದಲ್ಲೇ ಇರಬೇಕು ಎಂದು ಬಯಸಿದರು. ಆದರೆ ಕಾನೂನಾತ್ಮಕ ತೊಡಕಿನಿಂದಾಗಿ, ಸಮಾಧಿ ಸ್ಥಳಾಂತರಗೊಂಡು ಮೈಸೂರಿನಲ್ಲಿ ಸ್ಮಾರಕ ನಿರ್ಮಿಸಲಾಯಿತು. ಇತ್ತೀಚೆಗೆ ಅಭಿಮಾನ್ ಸ್ಟುಡಿಯೋದಲ್ಲಿದ್ದ ಸಮಾಧಿಯನ್ನು ತೆರವುಗೊಳಿಸಿದ್ದಕ್ಕೆ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದರೂ, “ಪೊಲೀಸರ ಸಮ್ಮುಖದಲ್ಲಿ ನಡೆದಿದ್ದರೆ ಅದು ಕಾನೂನಿನ ಪ್ರಕಾರವೇ ಆಗಿದೆ” ಎಂದು ರಂಗಾಯಣ ರಘು ಹೇಳಿದರು.
“ವಿಷ್ಣು ಸರ್ ಹೆಚ್ಚು ಸಮಯ ಕಳೆದಿದ್ದು ಭಾರತಿ ಮೇಡಂ ಜೊತೆ. ಅವರು ಹೇಗಿರಬೇಕು, ಏನು ಮಾಡಬೇಕು ಎಂಬುದನ್ನು ಭಾರತಿ ಮೇಡಂಗೆ ಹೇಳಿಕೊಂಡಿದ್ದರು. ಭಾರತಿ ಮೇಡಂ ಮತ್ತು ಅನಿರುದ್ಧ್ ಅವರು ಅಭಿಮಾನಿಗಳ ಭಾವನೆ ಉಳಿಸಲು ಸಾಕಷ್ಟು ಪ್ರಯತ್ನ ಮಾಡಿದ್ದಾರೆ. ಆದರೆ ಕಾನೂನಿನ ತೊಡಕು ಇದ್ದಾಗ ಮೈಸೂರಿನಲ್ಲಿ ಸ್ಮಾರಕ ನಿರ್ಮಿಸುವುದೇ ಸರಿಯಾದ ನಿರ್ಧಾರ.”
ರಂಗಾಯಣ ರಘು ಅವರು, ಬಾಲಣ್ಣ ಅವರ ಜಾಗವಾಗಿರುವ ಅಭಿಮಾನ್ ಸ್ಟುಡಿಯೋದಲ್ಲಿ ಸಮಾಧಿ ಉಳಿಸುವುದು ಕಾನೂನಾತ್ಮಕವಾಗಿ ಸಾಧ್ಯವಾಗಲಿಲ್ಲ ಎಂದು ಸ್ಪಷ್ಟಪಡಿಸಿದರು. “ಅಭಿಮಾನಿಗಳಿಗೆ ಇಲ್ಲಿ ಸಮಾಧಿ ಇರಬೇಕು ಎನ್ನುವುದು ಸಹಜ. ಆದರೆ ಎಲ್ಲವೂ ಕಾನೂನಿನ ಪ್ರಕಾರವೇ ನಡೆಯಬೇಕು” ಎಂದೂ ಅವರು ಹೇಳಿದರು. ಮೈಸೂರಿನ ಸ್ಮಾರಕವನ್ನು ಅವರು ಚಾಮುಂಡಿ ಬೆಟ್ಟದಂತೆ ನೆನಪಿಸಿಕೊಂಡು, ಅಭಿಮಾನಿಗಳು ಅಲ್ಲಿ ಭೇಟಿ ನೀಡಿ ಗೌರವ ಸಲ್ಲಿಸಬಹುದು ಎಂದು ಅಭಿಪ್ರಾಯಪಟ್ಟರು.