ವಿಷ್ಣುವರ್ಧನ್ ಅಸ್ತಿಗಾಗಿ ಪೊಲೀಸರ ಮೊರೆ ಹೋದ ಅಭಿಮಾನಿಗಳು – ಅಭಿಮಾನ್ ಸ್ಟುಡಿಯೋ ವಿವಾದ ಮತ್ತೆ ಭುಗಿಲೆದ್ದಿದೆ


ಕನ್ನಡದ ಮೇರುನಟ ವಿಷ್ಣುವರ್ಧನ್ ಅವರ ಸಮಾಧಿ ಮತ್ತು ಅಸ್ತಿ ವಿಚಾರ ಮತ್ತೊಮ್ಮೆ ಸಂಚಲನ ಸೃಷ್ಟಿಸಿದೆ. ವರ್ಷಗಳಿಂದ ವಿವಾದಕ್ಕೆ ಕಾರಣವಾಗಿರುವ ಅಭಿಮಾನ್ ಸ್ಟುಡಿಯೋ ಈಗ ಮತ್ತೆ ಸುದ್ದಿಯಲ್ಲಿದೆ. ಅಭಿಮಾನಿಗಳ ಹೃದಯಕ್ಕೆ ಹತ್ತಿರವಾಗಿದ್ದ ವಿಷ್ಣುವರ್ಧನ್ ಸಮಾಧಿಯನ್ನು ನೆಲಸಮಗೊಳಿಸಿರುವ ಘಟನೆ, ಅವರ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಅಭಿಮಾನ್ ಸ್ಟುಡಿಯೋದಲ್ಲಿದ್ದ ವಿಷ್ಣುವರ್ಧನ್ ಸಮಾಧಿ, ಹಲವು ವರ್ಷಗಳಿಂದ ಅಭಿಮಾನಿಗಳ ಭಾವನಾತ್ಮಕ ನೆಲೆಯಾಗಿತ್ತು. ಆದರೆ, ಇತ್ತೀಚೆಗೆ ಆ ಸಮಾಧಿಯನ್ನು ಸಂಪೂರ್ಣವಾಗಿ ತೆರವುಗೊಳಿಸಲಾಗಿದೆ. ಈ ಸುದ್ದಿಯು ಅಭಿಮಾನಿಗಳಲ್ಲಿ ಆಘಾತ ಉಂಟುಮಾಡಿದೆ.
ಅಸ್ತಿಗೆ ಭಾವನಾತ್ಮಕ ಸಂಬಂಧ ಹೊಂದಿರುವ ಅಭಿಮಾನಿಗಳು, ಪ್ರತಿವರ್ಷವೂ ಪೂಜೆ ಹಾಗೂ ಸಂಸ್ಕಾರ ಮಾಡುವ ಉದ್ದೇಶ ಹೊಂದಿರುವುದರಿಂದ, ಆ ಅಸ್ತಿಯನ್ನು ಅವರಿಗೆ ಹಸ್ತಾಂತರಿಸಬೇಕೆಂದು ಬೇಡಿಕೆ ಇಟ್ಟಿದ್ದಾರೆ. ಕೆಂಗೇರಿ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ಅಭಿಮಾನಿಗಳು, “ಒಮ್ಮೆ ಆ ಅಸ್ತಿಯನ್ನು ನಾಶಪಡಿಸಿದರೆ ಕಾನೂನು ಹೋರಾಟ ಮಾಡುತ್ತೇವೆ” ಎಂದು ಎಚ್ಚರಿಕೆ ನೀಡಿದ್ದಾರೆ. “ಅಸ್ತಿಯನ್ನು ನಮಗೆ ಹಸ್ತಾಂತರಿಸಿ, ನಾವು ಭಕ್ತಿಯಿಂದ ಸಂರಕ್ಷಿಸುತ್ತೇವೆ” ಎಂದು ಮನವಿ ಮಾಡಿದ್ದಾರೆ.
ವಿಷ್ಣು ಸ್ಮಾರಕ ವಿಚಾರ ಹಲವು ವರ್ಷಗಳಿಂದ ಕೋರ್ಟ್ ಹಂತವರೆಗೂ ಹೋಗಿದೆ. ಅಭಿಮಾನಿಗಳು ಅಭಿಮಾನ್ ಸ್ಟುಡಿಯೋದಲ್ಲಿಯೇ ಸ್ಮಾರಕ ನಿರ್ಮಾಣಕ್ಕೆ ಆಗ್ರಹಿಸಿದ್ದರು. ಆದರೆ ಬಾಲಣ್ಣ ಕುಟುಂಬ ಇದಕ್ಕೆ ಒಪ್ಪದ ಕಾರಣ, ನ್ಯಾಯಾಲಯವೂ ಅಭಿಮಾನಿಗಳ ಮನವಿಯನ್ನು ತಿರಸ್ಕರಿಸಿತು. ಬಾಲಣ್ಣ ಕುಟುಂಬದವರೇ ಸಮಾಧಿಯನ್ನು ಉಳಿಸುವ ಅಥವಾ ತೆರವುಗೊಳಿಸುವ ಅಧಿಕಾರ ಹೊಂದಿದ್ದರು.
ಮೇರುನಟ ವಿಷ್ಣುವರ್ಧನ್ ಸಮಾಧಿಯನ್ನು ತೆರವುಗೊಳಿಸಿರುವುದು, ಅಭಿಮಾನಿಗಳ ಪ್ರಕಾರ, ಕರ್ನಾಟಕದ ಸಾಂಸ್ಕೃತಿಕ ಪರಂಪರೆಗೆ ದೊಡ್ಡ ಆಘಾತ. “ಇಂತಹ ಘಟನೆಗಳು ಮರುಕಳಿಸಬಾರದು” ಎಂದು ಅವರು ಆಶಿಸಿದ್ದಾರೆ. ಅಭಿಮಾನಿಗಳ ಬೇಡಿಕೆಗೆ ಅಧಿಕಾರಿಗಳು ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ. ಆದರೆ, ವಿಷ್ಣು ಅಭಿಮಾನಿಗಳ ಭಾವನೆಗಳನ್ನು ಸಮಾಧಾನಪಡಿಸುವುದು ಈಗಿನ ಮುಖ್ಯ ಸವಾಲಾಗಿದೆ.