ವಿಷ್ಣು ಸಮಾಧಿ ಸ್ಥಳವನ್ನು ರಾಷ್ಟ್ರಮಟ್ಟದ ಪ್ರವಾಸಿ ತಾಣವನ್ನಾಗಿ ಮಾಡಬೇಕು – ಶೋಭಾ ಕರಂದ್ಲಾಜೆ


ನಟ ಡಾ. ವಿಷ್ಣುವರ್ಧನ್ ಅವರ ಸಮಾಧಿ ಸ್ಥಳವನ್ನು ನೆಲಸಮಗೊಳಿಸಿರುವ ಘಟನೆಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು, ಸಮಾಧಿ ಸ್ಥಳವಿರುವ ಭೂಮಿಯನ್ನು ಸರ್ಕಾರ ಸ್ವಾಧೀನಪಡಿಸಿಕೊಂಡು, ಕಲಾಗ್ರಾಮವಾಗಿ ಅಭಿವೃದ್ಧಿಪಡಿಸುವಂತೆ ಆಗ್ರಹಿಸಿದ್ದಾರೆ.
ಪತ್ರದಲ್ಲಿ, ವಿಷ್ಣುವರ್ಧನ್ ಅವರ ಅಪಾರ ಕೊಡುಗೆ, ಅವರ ಗೌರವ ಕಾಪಾಡುವ ಅಗತ್ಯ ಹಾಗೂ ಅಭಿಮಾನಿಗಳ ಭಾವನೆಗಳ ಮಹತ್ವವನ್ನು ಉಲ್ಲೇಖಿಸಿದ್ದಾರೆ. ಅಭಿಮಾನ್ ಸ್ಟುಡಿಯೋ ಭಾಗವನ್ನು ರಾತ್ರೋರಾತ್ರಿ ಕೆಡವಿರುವುದು ಅನ್ಯಾಯಕಾರಿಯಾಗಿದೆ ಎಂದು ಶೋಭಾ ಆರೋಪಿಸಿದ್ದಾರೆ.
ಅವರು, ಭೂಮಿ ಮಾಲೀಕರಿಗೆ ಸರಿಯಾದ ಪರಿಹಾರ ನೀಡಿ, ಆ ಸ್ಥಳವನ್ನು ಕಲೆ-ಸಂಸ್ಕೃತಿ ಕೇಂದ್ರವಾಗಿ ರೂಪಿಸಿ, ರಾಷ್ಟ್ರಮಟ್ಟದ ಪ್ರವಾಸಿ ತಾಣವನ್ನಾಗಿ ಮಾಡಬೇಕೆಂದು ಒತ್ತಾಯಿಸಿದ್ದಾರೆ. "ಕನ್ನಡಿಗರ ಕರ್ತವ್ಯವೇ ಕಲಾವಿದರ ಘನತೆ-ಗೌರವ ಕಾಪಾಡುವುದು" ಎಂದು ಶೋಭಾ ಕರಂದ್ಲಾಜೆ ಪತ್ರದಲ್ಲಿ ಹೇಳಿದ್ದಾರೆ.