"ವಿಷ್ಣು ಸ್ಮಾರಕ ನಿರ್ಮಾಣಕ್ಕೆ ನಿಮ್ಮ ಜೊತೆ ನಾವಿದ್ದೇವೆ" – ಅಭಿಮಾನಿಗಳ ಕೈಹಿಡಿದ ನಟ ಅನಿರುದ್ಧ


ಅಭಿಮಾನ್ ಸ್ಟುಡಿಯೋದಲ್ಲಿ ನಟ ವಿಷ್ಣುವರ್ಧನ್ ಸಮಾಧಿಯನ್ನು ನೆಲಸಮಗೊಳಿಸಿದ ಘಟನೆ ಕನ್ನಡ ಚಿತ್ರರಂಗದಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು. ಈ ಹಿನ್ನೆಲೆ ನಟ ಅನಿರುದ್ಧ ಅವರು ವಿಷ್ಣುವರ್ಧನ್ ಅಭಿಮಾನಿಗಳ ಪರವಾಗಿ ನಿಂತು, “ವಿಷ್ಣು ಸ್ಮಾರಕ ನಿರ್ಮಾಣಕ್ಕೆ ನಿಮ್ಮ ಜೊತೆ ನಾವಿದ್ದೇವೆ” ಎಂದು ಭರವಸೆ ನೀಡಿದ್ದಾರೆ. ಬೆಂಗಳೂರು ಜಯನಗರದಲ್ಲಿರುವ ವಿಷ್ಣುವರ್ಧನ್ ಅವರ ನಿವಾಸದಲ್ಲಿ ಅಭಿಮಾನಿಗಳೊಂದಿಗೆ ಸಭೆ ನಡೆಸಿದ ಅನಿರುದ್ಧ ಅವರು, ಈ ಕುರಿತು ಹಲವಾರು ವಿಚಾರಗಳನ್ನು ಸ್ಪಷ್ಟಪಡಿಸಿದರು.
“ಸಮಾಧಿ ತೆರವುಗೊಳಿಸಲು ನಾವು ದುಡ್ಡು ತೆಗೆದುಕೊಂಡಿಲ್ಲ”, ಅಭಿಮಾನಿಗಳ ನೋವು ತಮ್ಮದು ಕೂಡ ಎಂದು ಹೇಳಿದ ಅನಿರುದ್ಧ, ಕೆಲವರು ನಮ್ಮ ಕುಟುಂಬದ ಮೇಲೆ ದುಡ್ಡು ವ್ಯವಹಾರದ ಆರೋಪ ಮಾಡಿರುವುದನ್ನು ಖಂಡಿಸಿದರು. “ತಂದೆಯ ಸ್ಮಾರಕ ತೆರವುಗೊಳಿಸಲು ನಾವು ಹಣ ಪಡೆಯುತ್ತೇವೆ ಎಂಬುದು ವಿಕೃತ ಮನಸ್ಸಿನ ಆಲೋಚನೆ. ಇದು ಸಂಪೂರ್ಣ ತಪ್ಪು” ಎಂದು ಅವರು ಸ್ಪಷ್ಟನೆ ನೀಡಿದರು.
“ಸ್ಮಾರಕಕ್ಕೆ ಜಾಗ ಗಲಾಟೆ ವರ್ಷಗಳಿಂದ ನಡೆಯುತ್ತಿದೆ”, ವಿಷ್ಣು ಸಮಾಧಿ ಅಭಿಮಾನ್ ಸ್ಟುಡಿಯೋದಲ್ಲಿ ನಡೆದದ್ದು ಸರ್ಕಾರ ಹಾಗೂ ಅಂಬರೀಶ್ ಅವರ ಒತ್ತಾಯದಿಂದ ಎಂದು ಹೇಳಿದರು. “ಆ ಸಮಯದಲ್ಲಿ ಜಾಗ ವಿವಾದಿತ ಎಂಬುದು ನಮಗೆ ತಿಳಿದಿರಲಿಲ್ಲ. ಹಲವು ಬಾರಿ ಗೀತಾ ಬಾಲಿ ಅವರನ್ನು ಸಂಪರ್ಕಿಸಿದ್ದೇವೆ. ಆದರೆ ಕಾನೂನು ಸಮಸ್ಯೆಗಳು ಇತ್ಯರ್ಥವಾಗದೆ ಬಿಟ್ಟವು” ಎಂದು ಅನಿರುದ್ಧ ತಿಳಿಸಿದರು. ವಿಷ್ಣುವರ್ಧನ್ ಪತ್ನಿ ಭಾರತಿ ಅಮ್ಮ ಸಮಾಧಿ ವಿವಾದ ಬಗೆಹರಿಸಿಕೊಳ್ಳಲು ಕಣ್ಣೀರಿಟ್ಟು ವಿನಂತಿ ಮಾಡಿದ್ದರು ಎಂದು ಅನಿರುದ್ಧ ನೆನಪಿಸಿಕೊಂಡರು. “ಅವರು ಕೇವಲ ವಿಷ್ಣುವರ್ಧನ್ ಪತ್ನಿಯಲ್ಲ, ಹಿರಿಯ ಕಲಾವಿದೆ, ಪಂಚಭಾಷಾ ತಾರೆ. ಅಂತವರ ಮೇಲೆ ಆರೋಪ ಮಾಡುವುದು ಅನ್ಯಾಯ” ಎಂದರು.
ಅಭಿಮಾನಿಗಳಿಗಾಗಿ ವಿಷ್ಣು ಸ್ಮಾರಕ ನಿರ್ಮಾಣ ಅಗತ್ಯವಿದೆ ಎಂದು ಹೇಳಿದ ಅನಿರುದ್ಧ, “ಸರ್ಕಾರ ಜಾಗ ನೀಡಲಿ ಅಥವಾ ನಾವು ಕೊಂಡುಕೊಳ್ಳಲಿ, ಸ್ಮಾರಕ ನಿರ್ಮಾಣಕ್ಕೆ ನಾವು ಸದಾ ಅಭಿಮಾನಿಗಳ ಜೊತೆ ನಿಂತಿದ್ದೇವೆ. ಆದರೆ ಅಭಿಮಾನಿಗಳ ಹೆಸರಿನಲ್ಲಿ ವ್ಯಾಪಾರ ಮಾಡಬಾರದು” ಎಂದು ಎಚ್ಚರಿಕೆ ನೀಡಿದರು. ಕುಟುಂಬದ ಮೇಲೆ ಹಲವು ವರ್ಷಗಳಿಂದ ಅನಗತ್ಯ ಆರೋಪಗಳನ್ನು ಮಾಡಲಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದ ಅನಿರುದ್ಧ, ಮುಂದಿನಿಂದ ಇಂತಹ ಆರೋಪ ಮಾಡಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ವಿಷ್ಣುವರ್ಧನ್ ಕನ್ನಡ ಚಲನಚಿತ್ರರಂಗಕ್ಕೆ ಮಾಡಿದ ಕೊಡುಗೆಯನ್ನು ಅಭಿಮಾನಿಗಳು ಎಂದಿಗೂ ಮರೆಯುವುದಿಲ್ಲ. ಅವರ ಸ್ಮಾರಕ ನಿರ್ಮಾಣ ಈಗ ಅಭಿಮಾನಿಗಳ ಹಕ್ಕಿನ ಹೋರಾಟವಾಗಿ ಪರಿಣಮಿಸಿದೆ. ಅನಿರುದ್ಧ ಅವರ ನಿಲುವು, ವಿಷ್ಣು ಅಭಿಮಾನಿಗಳಿಗೆ ಹೊಸ ಭರವಸೆಯ ಕಿರಣವಾಗಿ ಪರಿಣಮಿಸಿದೆ.