Back to Top

ವಿಭಿನ್ನ ಕಥಾಹಂದರ ಹೊಂದಿರುವ "ಸಾರಂಗಿ" ಚಿತ್ರದಲ್ಲಿ ಎರಡೇ ಪಾತ್ರಗಳು: ಇದು ಹೊಸತಂಡದ ಹೊಸಪ್ರಯತ್ನ

SSTV Profile Logo SStv August 11, 2025
ವಿಭಿನ್ನ ಕಥಾಹಂದರ ಹೊಂದಿರುವ "ಸಾರಂಗಿ" ಚಿತ್ರದಲ್ಲಿ ಎರಡೇ ಪಾತ್ರಗಳು
ವಿಭಿನ್ನ ಕಥಾಹಂದರ ಹೊಂದಿರುವ "ಸಾರಂಗಿ" ಚಿತ್ರದಲ್ಲಿ ಎರಡೇ ಪಾತ್ರಗಳು

ಹೊಸತಂಡದ ಹೊಸಪ್ರಯತ್ನಗಳು ಕನ್ನಡ ಚಿತ್ರರಂಗದಲ್ಲಿ ನಡೆಯುತ್ತಿರುತ್ತದೆ. ಅಂತಹ ವಿಭಿನ್ನ ಕಥಾಹಂದರ ಹೊಂದಿರುವ ಚಿತ್ರ "ಸಾರಂಗಿ". ಈ ಚಿತ್ರದಲ್ಲಿ ಕೇವಲ ಎರಡೇ ಪಾತ್ರಗಳಿರುವುದು ವಿಶೇಷ. ಚಿತ್ರದ ಕುರಿತು ಹೆಚ್ಚಿನ ಮಾಹಿತಿಯನ್ನು ಚಿತ್ರತಂಡದ ಸದಸ್ಯರು ಪತ್ರಿಕಾಗೋಷ್ಠಿಯಲ್ಲಿ ನೀಡಿದರು.

 ಮನುಷ್ಯ ದಿನ ಬೆಳಗ್ಗಾದರೆ ಎಲ್ಲರ ಮುಂದೆ ಒಂದೊಂದು ತರಹದ ಮುಖವಾಡ ಧರಿಸಿ ಜೀವನ ನಡೆಸುತ್ತಿರುತ್ತಾನೆ. ಆದರೆ, ಒಂದು ಅನಿರೀಕ್ಷಿತ ಸನ್ನಿವೇಶ ಎದುರಾದಾಗ ನಾವು ನಮ್ಮ ಮೌಲ್ಯಗಳನ್ನು ಉಳಸಿಕೊಳ್ಳುತ್ತೇವಾ? ಅದರಿಂದ ಹೇಗೆ ಪಾರಾಗುತ್ತೇವೆ ಎಂಬುದೆ ಚಿತ್ರದ ಕಥಾಸಾರಾಂಶ. ಜೆ.ಆಚಾರ್ ಈ ಚಿತ್ರದ ನಿರ್ದೇಶಕರು. ಅವರೆ ಚಿತ್ರಕ್ಕೆ ಕಥೆ ಬರೆದಿದ್ದಾರೆ. ಮಿಸ್ಟಿಕ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಚಿತ್ರವಿದು. ಕೇವಲ ಎರಡೇ ಪಾತ್ರಗಳು ಈ ಚಿತ್ರದಲ್ಲಿದೆ. ನಾನು ಹಾಗೂ ಶ್ವೇತ ಅರಕೆರೆ ಈ ಪಾತ್ರಗಳಲ್ಲಿ ಅಭಿನಯಿಸಿದ್ದೇವೆ‌. ನಾನು ಮೂಲತಃ ರಂಗಭೂಮಿ ಕಲಾವಿದ.  ಯು.ಎಸ್ ನಲ್ಲಿ ಥಿಯೇಟರ್ ನಡೆಸುತ್ತಿದ್ದೆ. ಈಗ ಬೆಂಗಳೂರಿನಲ್ಲಿ ವಾಸವಿದ್ದೇನೆ. ಇನ್ನೂ, "ಸಾರಂಗಿ" ಅಂದರೆ ಒಂದು ಬೆಟ್ಟದ ಹೆಸರು. ಬೆಟ್ಟದ ಸುತ್ತ ಏನೆಲ್ಲಾ ನಡೆಯುತ್ತದೆ ಎಂಬುದನ್ನು ನಿರ್ದೇಶಕರು ಇದರಲ್ಲಿ ತೋರಿಸಿದ್ದಾರೆ. ತೇಜೇಶ್ ಅವರು ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ಚಿತ್ರ ತೆರೆಗೆ ಬರಲು ಸಿದ್ದವಾಗಿದೆ. ಆಗಸ್ಟ್ ನಲ್ಲಿ ಮೊದಲು ಯು.ಎಸ್ ನಲ್ಲಿ,  ಅಕ್ಟೋಬರ್ ವೇಳೆಗೆ ಕರ್ನಾಟಕದಲ್ಲಿ ನಮ್ಮ ಚಿತ್ರ ಬಿಡುಗಡೆಯಾಗಲಿದೆ ಎಂದು ನಾಯಕ ಹಾಗೂ ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್ ಚಂದರ್ ತಿಳಿಸಿದರು.

ನಾನು ಮೂಲತಃ ಮಂಗಳೂರಿನವಳು. ರಂಗಭೂಮಿ ಕಲಾವಿದೆ‌‌. ಜೊತೆಗೆ ಭರತನಾಟ್ಯ ಕಲಾವಿದೆ. ಈ ಚಿತ್ರದ ಕಥೆ ಹಾಗೂ ನನ್ನ ಪಾತ್ರ ಎರಡು ಕೂಡ ಚೆನ್ನಾಗಿದೆ ಎಂದರು ನಾಯಕಿ ಶ್ವೇತ ಅರಕೆರೆ‌. ನಾನು ಬೆಂಗಳೂರಿನವನು. ಉದ್ಯಮಿ‌. ನಿರ್ದೇಶಕರು ಹೇಳಿದ ಕಥೆ ಇಷ್ಟವಾಯಿತು. ಚಿತ್ರ ನಿರ್ಮಾಣಕ್ಕೆ ಮುಂದಾದೆ ಎಂದು ನಿರ್ಮಾಪಕ ತೇಜೇಶ್ ಹೇಳಿದರು. ಛಾಯಾಗ್ರಾಹಕ ನವಿ ನಂಜಪ್ಪ, ಸೌಂಡ್ ಡಿಸೈನರ್ ಸ್ಯಾಮ್ ಕಪ್ಪರ್, ಸಹ ನಿರ್ದೇಶಕ ದುಶ್ಯಂತ್ ರೈ ಹಾಗೂ ಸಹ ಛಾಯಾಗ್ರಾಹಕ ಪ್ರಶಾಂತ್ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.