Back to Top

ಖ್ಯಾತ ನಿರ್ದೇಶಕ ಎಸ್. ನಾರಾಯಣ್ ಕುಟುಂಬದಲ್ಲಿ ಬಿರುಗಾಳಿ – ವರದಕ್ಷಿಣೆ ಕಿರುಕುಳ ಪ್ರಕರಣದಲ್ಲಿ FIR!

SSTV Profile Logo SStv September 11, 2025
ವರದಕ್ಷಿಣೆ ಕಿರುಕುಳದಲ್ಲಿ ನಿರ್ದೇಶಕ ನಾರಾಯಣ್ ಹೆಸರು
ವರದಕ್ಷಿಣೆ ಕಿರುಕುಳದಲ್ಲಿ ನಿರ್ದೇಶಕ ನಾರಾಯಣ್ ಹೆಸರು

ಕನ್ನಡ ಚಲನಚಿತ್ರರಂಗದಲ್ಲಿ ‘ಕಲಾ ಸಮ್ರಾಟ’ ಎಂಬ ಬಿರುದಿನಿಂದ ಖ್ಯಾತಿ ಪಡೆದ ನಿರ್ದೇಶಕ ಎಸ್. ನಾರಾಯಣ್ ಅವರ ಕುಟುಂಬದಲ್ಲಿ ಇದೀಗ ಬಿರುಗಾಳಿ ಎದ್ದಿದೆ. ವರದಕ್ಷಿಣೆ ಕಿರುಕುಳದ ಗಂಭೀರ ಆರೋಪದ ಹಿನ್ನೆಲೆಯಲ್ಲಿ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಈ ಪ್ರಕರಣ ಚಿತ್ರರಂಗದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ನಾರಾಯಣ್ ಅವರ ಪುತ್ರ ಪವನ್ 2021ರಲ್ಲಿ ಪವಿತ್ರಾ ಅವರೊಂದಿಗೆ ವಿವಾಹವಾಗಿದ್ದರು. ಆದರೆ, ಮದುವೆಯ ಮೂರು ವರ್ಷಗಳಲ್ಲೇ ಅವರ ಸಂಬಂಧದಲ್ಲಿ ಭಾರೀ ಅಲೆಮಾಳೆ ಶುರುವಾಗಿದೆ. ಪವಿತ್ರಾ, ತನ್ನ ಪತಿ ಪವನ್, ಅತ್ತೆ ಭಾಗ್ಯಲಕ್ಷ್ಮಿ ಹಾಗೂ ಮಾವ ಎಸ್. ನಾರಾಯಣ್ ಅವರ ವಿರುದ್ಧ ಗಂಭೀರ ಆರೋಪಗಳನ್ನು ಹೊರಿಸಿದ್ದಾರೆ.

ಸೊಸೆ ಪವಿತ್ರಾ ಆರೋಪದ ವಿವರ, ಪವನ್ ಓದಿಲ್ಲದ ಕಾರಣ ಕೆಲಸ ಸಿಗುತ್ತಿರಲಿಲ್ಲ, ನಾನು ಮನೆ ಖರ್ಚು ಭರಿಸುತ್ತಿದ್ದೆ. ‘ಕಲಾ ಸಾಮ್ರಾಟ್ ಟೀಂ ಅಕಾಡಮಿ’ ಫಿಲ್ಮ್ ಇನ್‌ಸ್ಟಿಟ್ಯೂಟ್ ಆರಂಭಿಸಲು ಹಣ ಕೇಳಿ, ನಾನು ತಾಯಿಯ ಒಡವೆಗಳನ್ನು ಅಡವಿಟ್ಟು ಕೊಟ್ಟಿದ್ದೆ. ಸಂಸ್ಥೆ ಲಾಸ್ ಆದ ನಂತರ ಮತ್ತಷ್ಟು ನೆರವಿಗಾಗಿ ನಾನು ₹10 ಲಕ್ಷ ಸಾಲ ಮಾಡಿ ಪವನ್‌ಗೆ ನೀಡಿದ್ದೆ. ಇಷ್ಟೆಲ್ಲಾ ಮಾಡಿದರೂ, ಪತಿ ಮತ್ತು ಅತ್ತೆ ಭಾಗ್ಯಲಕ್ಷ್ಮಿ ಪ್ರತಿದಿನ ಹಲ್ಲೆ ನಡೆಸಿ ಹಣ ತರುವಂತೆ ಒತ್ತಾಯಿಸುತ್ತಿದ್ದರು.

ಒತ್ತಾಯಕ್ಕೆ ಬಗ್ಗದ ಕಾರಣ, ಅವರು ನನ್ನನ್ನು ಮನೆಯಿಂದ ಹೊರಹಾಕಿದರು.  ಮದುವೆ ಸಮಯದಲ್ಲಿ ಒಂದು ಲಕ್ಷದ ಉಂಗುರ ಹಾಗೂ ಖರ್ಚು ವೆಚ್ಚದ ಹಣ ಪಡೆದುಕೊಂಡಿದ್ದರು. “ಮುಂದಿನ ದಿನಗಳಲ್ಲಿ ನನ್ನ ಮಗನಿಗೆ ಯಾವುದೇ ತೊಂದರೆ ಉಂಟಾದರೆ ಅದರ ಹೊಣೆ ಎಸ್. ನಾರಾಯಣ್, ಭಾಗ್ಯಲಕ್ಷ್ಮಿ ಹಾಗೂ ಪವನ್ ಅವರೇ” ಎಂದು ಆರೋಪಿಸಿದ್ದಾರೆ.

ಈ ದೂರಿನ ಆಧಾರದ ಮೇಲೆ ಪೊಲೀಸರು ವರದಕ್ಷಿಣೆ ಕಿರುಕುಳ ಪ್ರಕರಣದಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ‘ಕುಟುಂಬಪ್ರಿಯ ವ್ಯಕ್ತಿ’, ‘ಶಾಂತ ಸ್ವಭಾವದ ಕಲಾವಿದ’ ಎಂಬ ಹೆಸರನ್ನು ಗಳಿಸಿದ್ದ ಎಸ್. ನಾರಾಯಣ್ ಅವರ ವಿರುದ್ಧ ಇಂತಹ ಆರೋಪ ಕೇಳಿಬಂದಿರುವುದು ಅಭಿಮಾನಿಗಳು ಮತ್ತು ಚಲನಚಿತ್ರ ವಲಯದವರಲ್ಲಿ ಆಘಾತ ಮೂಡಿಸಿದೆ.

ಇದೀಗ ಪ್ರಕರಣ ಯಾವ ದಿಕ್ಕಿನಲ್ಲಿ ಸಾಗುತ್ತದೆ, ಪೊಲೀಸರು ಮುಂದಿನ ಹಂತದಲ್ಲಿ ಯಾವ ಕ್ರಮ ಕೈಗೊಳ್ಳುತ್ತಾರೆ ಎಂಬ ಕುತೂಹಲ ಎಲ್ಲರಲ್ಲೂ ಮೂಡಿದೆ.