ರಕ್ಷಾಬಂಧನ ಸಂಭ್ರಮದಲ್ಲಿ ಲವ್ಲಿ ಸ್ಟಾರ್ ಪ್ರೇಮ್ ಮಕ್ಕಳು – ಅಕ್ಕ-ತಮ್ಮನ ಮುದ್ದಿನ ಬಾಂಧವ್ಯ


ಕನ್ನಡ ಚಿತ್ರರಂಗದ ಲವ್ಲಿ ಸ್ಟಾರ್ ಪ್ರೇಮ್ ಮತ್ತು ಜ್ಯೋತಿ ದಂಪತಿಗಳು ಇತ್ತೀಚೆಗೆ ತಮ್ಮ 25ನೇ ವಿವಾಹ ವಾರ್ಷಿಕೋತ್ಸವವನ್ನು ಅದ್ದೂರಿಯಾಗಿ ಆಚರಿಸಿಕೊಂಡಿದ್ದರು. ಅವರ ಮಕ್ಕಳು ಅಮೃತಾ ಪ್ರೇಮ್ ಮತ್ತು ಏಕಾಂತ್ ಪ್ರೇಮ್ ಮಾತ್ರ ಕುಟುಂಬದ ಹೆಮ್ಮೆಗಾಗಿಯೇ ಅಲ್ಲ, ತಮ್ಮ ಅಕ್ಕ-ತಮ್ಮನ ಬಾಂಧವ್ಯದ ಮೂಲಕವೂ ಎಲ್ಲರ ಮನಗೆದ್ದಿದ್ದಾರೆ. ರಕ್ಷಾಬಂಧನದ ಪ್ರಯುಕ್ತ ಅಮೃತಾ ತಮ್ಮ ತಮ್ಮನೊಂದಿಗೆ ಹಂಚಿಕೊಂಡ ನೆನಪುಗಳು ಮತ್ತು ಪ್ರೀತಿ, ನಗು-ಜಗಳಗಳಿಂದ ತುಂಬಿದ ಬಾಲ್ಯದ ಕ್ಷಣಗಳನ್ನು ನೆನೆದಿದ್ದಾರೆ.
ಅಮೃತಾ ಪ್ರೇಮ್ ಅವರ ಮಾತಿನಲ್ಲಿ, ಏಕಾಂತ್ ಕೇವಲ ತಮ್ಮನಲ್ಲ, ಅಣ್ಣನಂತೆ ಜವಾಬ್ದಾರಿಯುತ ವ್ಯಕ್ತಿ. “ಅವನಿಗೆ ನನಗಿಂತ ಹೆಚ್ಚು ವಿಷಯಗಳು ಗೊತ್ತು. ಅವನು ಹೊರಗೆ ಸ್ವಲ್ಪ ತರಲೆ ಮಾಡುತ್ತಿದ್ದರೂ, ಮನೆಯಲ್ಲಿ ನನ್ನಿಗಿಂತ ಹೆಚ್ಚು ಸೀರಿಯಸ್ ಆಗಿರುತ್ತಾನೆ. ಆದರೆ ಅವನ ಜೊತೆಗೆ ಇದ್ದಾಗ ನಾನು ಮಗುತರ ವರ್ತಿಸುತ್ತೇನೆ” ಎಂದು ಹೇಳಿದ್ದಾರೆ. ತನ್ನ ಸಿನಿಮಾ ಪ್ರೀತಿ ಹುಟ್ಟಲು ಏಕಾಂತ್ ಕಾರಣ ಎಂಬ ಅಮೃತಾ, “ಚಿಕ್ಕಂದಿನಿಂದಲೇ ಅವನಿಗೆ ಸಿನಿಮಾ ಹುಚ್ಚು. ನಾನು ನಟನೆಯತ್ತ ಬರಲು ಪ್ರೇರಣೆ ನೀಡಿದ್ದು ಅವನ ‘ಗುರುಶಿಷ್ಯರು’ ಸಿನಿಮಾದ ನಟನೆ. ಅವನ ನಟನೆಗೆ ನಾನು ಮೊದಲ ಫ್ಯಾನ್” ಎಂದು ಹೆಮ್ಮೆ ಪಟ್ಟಿದ್ದಾರೆ.
ಬಾಲ್ಯದಲ್ಲಿ ಆಗಾಗ ಜಗಳವಾಡುತ್ತಿದ್ದ ಅಕ್ಕ-ತಮ್ಮ ಇದೀಗ ಒಬ್ಬರ ಬೆಂಬಲಿಗರಾಗಿ ಬೆಳೆದಿದ್ದಾರೆ. “ಇಂದಿಗೂ ನಾನು ಮತ್ತು ಅಮ್ಮ ಜಗಳವಾಡಿದರೆ, ಅವನು ನನ್ನ ಪರ ನಿಂತುಕೊಳ್ಳುತ್ತಾನೆ. ಅವನು ಮಾಸ್ ಹೀರೋ ಆಗಿ ಲಾಂಚ್ ಆಗಬೇಕೆಂಬುದು ನನ್ನ ಕನಸು” ಎಂದು ಅಮೃತಾ ಹೇಳಿದ್ದಾರೆ. ರಕ್ಷಾಬಂಧನ ದಿನದ ಸಂಪ್ರದಾಯಗಳನ್ನೂ ಅಮೃತಾ ಪ್ರೀತಿಯಿಂದ ಹಂಚಿಕೊಂಡಿದ್ದಾರೆ “ಪ್ರತಿ ವರ್ಷ ಬೆಳಿಗ್ಗೆ ದೇವರಿಗೆ ಕೈಮುಗಿದು ಏಕಾಂತ್‌ಗೆ ರಾಖಿ ಕಟ್ಟುತೇನೆ, ಸಿಹಿ ತಿನಿಸಿ ಶುಭಾಶಯ ಹೇಳುತ್ತೇನೆ. ಚಿಕ್ಕವರಿದ್ದಾಗ ಅಮ್ಮನೇ ರಾಖಿ ಮತ್ತು ಗಿಫ್ಟ್ ತಂದು ಕೊಡುತ್ತಿದ್ದರು. ಈಗ ಅವನೇ ನನ್ನ ಗಿಫ್ಟ್ ಆಯ್ಕೆ ಮಾಡಿ ತರುತ್ತಾನೆ.”
ಅಕ್ಕ-ತಮ್ಮನ ಈ ಅಪರೂಪದ ಬಾಂಧವ್ಯ, ಪರಸ್ಪರ ಪ್ರೀತಿ ಮತ್ತು ಬೆಂಬಲ, ರಕ್ಷಾಬಂಧನದ ಸಾರ್ಥಕತೆಯನ್ನು ಇನ್ನಷ್ಟು ಮಧುರಗೊಳಿಸುತ್ತದೆ.