“ಐಷಾರಾಮಿ ಸವಲತ್ತುಗಳಿಗೆ ಬ್ರೇಕ್!” – ಸುಪ್ರೀಂ ಆದೇಶದ ಬಳಿಕ ಜೈಲಿನ ಕಠಿಣ ನಿಯಮದಲ್ಲಿ ಸುಸ್ತಾದ ದರ್ಶನ್


"ಚಾಲೆಂಜಿಂಗ್ ಸ್ಟಾರ್" ಎಂದೇ ಖ್ಯಾತಿ ಪಡೆದ ನಟ ದರ್ಶನ್ ಇದೀಗ ಜೈಲಿನ ಕಠಿಣ ನಿಯಮಗಳಿಂದ ಸಂಕಷ್ಟ ಅನುಭವಿಸುತ್ತಿದ್ದಾರೆ. ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಅವರ ಜಾಮೀನು ರದ್ದುಪಡಿಸಿದ್ದು, ಇನ್ನು ಮುಂದೆ ಅವರಿಗೆ ಯಾವುದೇ ಐಷಾರಾಮಿ ಸವಲತ್ತು ದೊರೆಯದಂತೆ ಕಟ್ಟುನಿಟ್ಟಿನ ಆದೇಶ ನೀಡಿದೆ. ಇದರ ಪರಿಣಾಮವಾಗಿ ದರ್ಶನ್ ಸಾಮಾನ್ಯ ಕೈದಿಯಂತೆ ಜೈಲಿನ ಎಲ್ಲಾ ನಿಯಮಗಳನ್ನು ಪಾಲಿಸಬೇಕಾದ ಪರಿಸ್ಥಿತಿ ಬಂದಿದೆ.
ಹಿಂದಿನ ಬಾರಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್ ಇದ್ದಾಗ ಅವರಿಗೆ ಅನೇಕ ವಿಶೇಷ ಸವಲತ್ತುಗಳು ಒದಗಿಸಲಾಗಿತ್ತು. ಮನೆ ಊಟ, ಹೆಚ್ಚಿನ ಸೌಲಭ್ಯಗಳು ಸೇರಿದಂತೆ ಐಷಾರಾಮಿ ವಾತಾವರಣದಲ್ಲಿ ಕಾಲ ಕಳೆಯಲು ಸಾಧ್ಯವಾಗಿತ್ತು. ಈ ಫೋಟೋಗಳು ವೈರಲ್ ಆಗಿ ದೊಡ್ಡ ವಿವಾದಕ್ಕೂ ಕಾರಣವಾಗಿದ್ದವು. ಈ ಬಾರಿ ಅದೇ ತಪ್ಪು ಮರುಕಳಿಸದಂತೆ ಸುಪ್ರೀಂ ಕೋರ್ಟ್ ಎಚ್ಚರಿಕೆ ನೀಡಿದ್ದು, ಅಧಿಕಾರಿಗಳು ಕಟ್ಟುನಿಟ್ಟಾಗಿ ಜೈಲು ಮ್ಯಾನ್ಯುಯಲ್ ಪ್ರಕಾರವೇ ನಡೆದುಕೊಳ್ಳುತ್ತಿದ್ದಾರೆ.
ಈ ಬಾರಿ ದರ್ಶನ್‌ರಿಗೆ ಮನೆಯಿಂದ ಯಾವುದೇ ರೀತಿಯ ಆಹಾರ ತರುವಂತಿಲ್ಲ. ಜೈಲು ಮ್ಯಾನ್ಯುಯಲ್ ಪ್ರಕಾರ ಇರುವ ಆಹಾರವನ್ನೇ ಸೇವಿಸಬೇಕಾಗಿದೆ. ಬೆಳಗಿನ ತಿಂಡಿ, ಮಧ್ಯಾಹ್ನದ ಊಟ ಹಾಗೂ ರಾತ್ರಿ ಊಟ ಜೈಲಿನ ಅಡುಗೆಮನೆಯಲ್ಲೇ ತಯಾರಾದ ಆಹಾರ. ಹಿಂದಿನಂತೆ ವಿಶಿಷ್ಟ ಆಹಾರ ವ್ಯವಸ್ಥೆಗೆ ಅವಕಾಶ ಇಲ್ಲ.
ಬೆಂಗಳೂರು ಮಳೆಗಾಲದ ಚಳಿಗಾಲದ ವಾತಾವರಣದಲ್ಲಿ ದರ್ಶನ್ ಹೊದ್ದುಕೊಳ್ಳಲು ಎರಡು ಬೆಡ್‌ಶೀಟ್ ಬೇಕೆಂದು ಮನವಿ ಮಾಡಿದ್ದರು. ಆದರೆ ಜೈಲು ನಿಯಮ ಪ್ರಕಾರ ಒಂದೇ ಬೆಡ್‌ಶೀಟ್ ಕೊಡಲು ಅವಕಾಶವಿದ್ದು, ಅದನ್ನೇ ನೀಡಲಾಗಿದೆ. ಬೇರೇನು ಮಾತು ಆಡದೇ ಅವರು ಅದನ್ನೇ ಸ್ವೀಕರಿಸಿದ್ದಾರೆ. ಇದರಿಂದ ದರ್ಶನ್ ಅವರಿಗೆ ಅಸೌಕರ್ಯವಾಗಿದೆಯೆಂಬ ಸುದ್ದಿ ಹರಿದಾಡುತ್ತಿದೆ.
ಜೈಲಿಗೆ ಹೋಗುವ ಮುನ್ನವೇ ದರ್ಶನ್ ತಮ್ಮ ಕೂದಲು ಮುಡಿಕೊಟ್ಟಿದ್ದಾರೆ. ಕಳೆದ ಬಾರಿ ಕೂದಲು ಉದುರುವ ಸಮಸ್ಯೆಯಿಂದ ಬಳಲಿದ ಅವರು ಈ ಬಾರಿ ಮುಂಚಿತವಾಗಿಯೇ ಅದಕ್ಕೆ ಪರಿಹಾರ ಕಂಡುಕೊಂಡಿದ್ದಾರೆ. ಸದ್ಯ ದರ್ಶನ್ ಸೇರಿದಂತೆ ಪ್ರಕರಣದ ಆರೋಪಿಗಳು ಕ್ವಾರಂಟೈನ್ ಸೆಲ್‌ನಲ್ಲಿ ಇರಿಸಲಾಗಿದ್ದು, ಬಳಿಕ ಅವರನ್ನು ಮುಖ್ಯ ಸೆಲ್‌ಗೆ ವರ್ಗಾಯಿಸುವ ಪ್ರಕ್ರಿಯೆ ನಡೆದಿದೆ.
ಹೀಗಾಗಿ, ಹೈಕೋರ್ಟ್ ಜಾಮೀನು ಪಡೆದ ಬಳಿಕ ಹೊರಗೆ ಹಾಯಾಗಿ ಜೀವನ ನಡೆಸುತ್ತಿದ್ದ ದರ್ಶನ್ ಈಗ ಮತ್ತೆ ಸಾಮಾನ್ಯ ಕೈದಿಯ ಜೀವನ ನಡೆಸುವಂತಾಗಿದೆ. ಜೈಲು ಮ್ಯಾನ್ಯುಯಲ್ ನಿಯಮಗಳು ಅವರಿಗೆ ದೊಡ್ಡ ಸವಾಲಾಗಿದ್ದು, ಕೇವಲ ಎರಡು ದಿನಗಳಲ್ಲೇ ಅವರು ಸುಸ್ತಾಗಿದ್ದಾರೆ ಎನ್ನಲಾಗಿದೆ. ಒಟ್ಟಾರೆ, ಸುಪ್ರೀಂ ಕೋರ್ಟ್‌ನ ಕಟ್ಟುನಿಟ್ಟಿನ ತೀರ್ಪು ದರ್ಶನ್ ಅವರ ಐಷಾರಾಮ ಜೀವನಕ್ಕೆ ಅಂತ್ಯಗಂಟಿಸಿದ್ದು, ಮುಂದೆ ಅವರು ಹೇಗೆ ಈ ಕಠಿಣ ಜೈಲು ಜೀವನವನ್ನು ಎದುರಿಸುತ್ತಾರೋ ಕಾದು ನೋಡಬೇಕಾಗಿದೆ.