ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ವಿರುದ್ಧ 3.5 ಕೋಟಿ ವಂಚನೆ ಆರೋಪ – ಆಪ್ತ ಬಳಗದ ಸ್ಪಷ್ಟನೆ


ಕನ್ನಡ ಚಿತ್ರರಂಗದ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ವಿರುದ್ಧ 3.15 ಕೋಟಿ ರೂಪಾಯಿ ವಂಚನೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಈ ಪ್ರಕರಣ ಈಗ ಚರ್ಚೆಗೆ ಗ್ರಾಸವಾಗಿದೆ. ನಿರ್ದೇಶಕ ರಾಘವೇಂದ್ರ ಹೆಗಡೆ ಅವರ ದೂರು ಆಧರಿಸಿ ಮುಂಬೈನ ಅಂಬೋಲಿ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದ್ದು, ಈ ಕುರಿತು ಧ್ರುವ ಸರ್ಜಾ ಅವರ ಆಪ್ತ ಬಳಗದಿಂದ ಸ್ಪಷ್ಟನೆ ಬಂದಿದೆ.
ನಿರ್ದೇಶಕ ರಾಘವೇಂದ್ರ ಹೆಗಡೆ ಅವರು 2018ರಿಂದ 2021ರವರೆಗೆ ಧ್ರುವ ಸರ್ಜಾಗೆ 3.15 ಕೋಟಿ ರೂಪಾಯಿ ನೀಡಿದ್ದು, ಈ ಹಣವನ್ನು ಸಿನಿಮಾ ನಿರ್ಮಾಣಕ್ಕಾಗಿ ಅಡ್ವಾನ್ಸ್ ರೂಪದಲ್ಲಿ ನೀಡಿದ್ದೇನೆಂದು ಹೇಳಿದ್ದಾರೆ. ಆದರೆ, ನಟ ತಮ್ಮ ನಟನೆಯ ಬದ್ಧತೆಗಳನ್ನು ಪೂರೈಸದೆ, ಸಿನಿಮಾ ಮುಂದುವರಿಸಲಿಲ್ಲ ಎಂಬುದು ಅವರ ಆರೋಪ. ರಾಘವೇಂದ್ರ ಹೆಗಡೆ ಅವರ ಪ್ರಕಾರ, ಧ್ರುವ ಸರ್ಜಾ ಸೋಲ್ಜರ್ ಎಂಬ ಸಿನಿಮಾದ ಸ್ಕ್ರಿಪ್ಟ್ ಮಾಡಿದ್ದು, ಒಪ್ಪಂದಕ್ಕೆ ಸಹಿ ಮಾಡುವ ಮುನ್ನವೇ ಹಣ ಸ್ವೀಕರಿಸಿದ್ದರು. ಈ ಹಣದಿಂದ ಅಪಾರ್ಟ್‌ಮೆಂಟ್ ಕೂಡ ಖರೀದಿಸಿದ್ದಾರೆ ಎನ್ನಲಾಗಿದೆ.
ಧ್ರುವ ಸರ್ಜಾ ಅವರ ಆಪ್ತ ಬಳಗದವರು ಈ ಆರೋಪಗಳಿಗೆ ಪ್ರತಿಕ್ರಿಯಿಸುತ್ತಾ, ಈ ಅಡ್ವಾನ್ಸ್ ಹಣ 8 ವರ್ಷಗಳ ಹಿಂದೆಯೇ ನೀಡಲಾಗಿತ್ತು ಎಂದು ಹೇಳಿದ್ದಾರೆ. ಸಿನಿಮಾ ವಿಷಯವಾಗಿ ಆಗಾಗ ಮೀಟಿಂಗ್‌ಗಳು ನಡೆದಿದ್ದು, ಸೈನಿಕರ ಕಥೆ ಆಧಾರಿತ ಚಿತ್ರ ಮಾಡೋಣ ಎಂಬ ಚರ್ಚೆ ಆಗುತ್ತಿತ್ತು. ಜೂನ್ 8ರಂದು ರಾಘವೇಂದ್ರ ಹೆಗಡೆ ಅವರು ಬಂದು ತಂಡವನ್ನು ಭೇಟಿಯಾಗಿ ಮಾತನಾಡಿ ಹೋದರು. ಅವರು ಕನ್ನಡದಲ್ಲಿ ಬದಲಾಗಿ ತಮಿಳು ಅಥವಾ ತೆಲುಗಿನಲ್ಲಿ ಸಿನಿಮಾ ಮಾಡಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದರು. ಆದರೆ ಧ್ರುವ ಸರ್ಜಾ ತಂಡ ಕನ್ನಡಕ್ಕೇ ಆದ್ಯತೆ ನೀಡಬೇಕೆಂದು ತಿಳಿಸಿತು.
ರಾಘವೇಂದ್ರ ಹೆಗಡೆ ಈ ಸಲಹೆಯನ್ನು ಒಪ್ಪದೇ, ಜೂನ್ 10ರಂದು ಮುಂಬೈ ಕೋರ್ಟ್‌ನಿಂದ ನೋಟಿಸ್ ಕಳುಹಿಸಿದರು. ಅದಕ್ಕೆ ಜೂನ್ 15ರಂದೇ ಧ್ರುವ ಸರ್ಜಾ ತಂಡದಿಂದ ಉತ್ತರ ನೀಡಲಾಗಿದೆ. ಪ್ರಸ್ತುತ ಇಬ್ಬರ ವಕೀಲರ ನಡುವೆ ಮಾತುಕತೆ ನಡೆಯುತ್ತಿದೆ. ಈ ಪ್ರಕರಣ ಕಾನೂನು ಹಾದಿಯಲ್ಲಿ ಸಾಗುತ್ತಿರುವುದರಿಂದ, ಸತ್ಯಾಸತ್ಯತೆ ಮುಂದಿನ ದಿನಗಳಲ್ಲಿ ಬಹಿರಂಗವಾಗಲಿದೆ. ಆದರೆ ಧ್ರುವ ಸರ್ಜಾ ಅಭಿಮಾನಿಗಳ ನಡುವೆ ಈ ಪ್ರಕರಣ ದೊಡ್ಡ ಚರ್ಚೆಗೆ ಕಾರಣವಾಗಿದೆ.