Back to Top

“‘ಹುಡುಗರು’ ಚಿತ್ರದ ‘ಪಂಕಜಾ..’ ಗೆ ಸ್ಟೆಪ್ ಹಾಕಿದ ಶೆಫಾಲಿ ಜರಿವಾಲ, 42ನೇ ವಯಸ್ಸಿನಲ್ಲಿ ನಿಧನ”

SSTV Profile Logo SStv June 28, 2025
ಶೆಫಾಲಿ ಜರಿವಾಲ, 42ನೇ ವಯಸ್ಸಿನಲ್ಲಿ ನಿಧನ
ಶೆಫಾಲಿ ಜರಿವಾಲ, 42ನೇ ವಯಸ್ಸಿನಲ್ಲಿ ನಿಧನ

ನಟಿ ಶೆಫಾಲಿ ಜರಿವಾಲಾ ಅವರು ಕೇವಲ 42ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ನಿಧನರಾಗಿರುವ ಸುದ್ದಿ ಇಡೀ ಚಿತ್ರರಂಗ ಹಾಗೂ ಅಭಿಮಾನಿಗಳಲ್ಲಿ ಆಘಾತ ತಂದಿದೆ. ಮುಂಬೈನ ಅಂಧೇರಿಯ ಲೋಖಂಡ್‌ವಾಲಾ ನಿವಾಸದಲ್ಲಿ ಜೂನ್ 27ರ ಬೆಳಿಗ್ಗೆ ಎದೆನೋವಿನಿಂದ ತೀವ್ರ ಅಸ್ವಸ್ಥರಾದ ಶೆಫಾಲಿಯನ್ನು ತಕ್ಷಣವೇ ಆಸ್ಪತ್ರೆಗೆ ಸೇರಿಸಲಾಯಿತಾದರೂ, ಅವರು ಮಾರ್ಗಮಧ್ಯದಲ್ಲಿಯೇ ಪ್ರಾಣ ತ್ಯಜಿಸಿದ್ದರು.

2004ರಲ್ಲಿ "ಕಾಂಟಾ ಲಗಾ" ಹಾಡಿನಲ್ಲಿ ದಿಟ್ಟ ಡ್ಯಾನ್ಸ್ ಮೂಲಕ ಎಲ್ಲರ ಗಮನ ಸೆಳೆದ ಶೆಫಾಲಿ, 2011ರ ಪುನೀತ್ ರಾಜ್‌ಕುಮಾರ್ ನಟನೆಯ 'ಹುಡುಗರು' ಚಿತ್ರದಲ್ಲೂ "ಪಂಕಜಾ..." ಹಾಡಿಗೆ ಹೆಜ್ಜೆ ಹಾಕಿದ್ದರು. ಟಿವಿ ಪ್ರೇಕ್ಷಕರಿಗೆ ಅವರು ಬಿಗ್ ಬಾಸ್ ಸೀಸನ್ 13 ರಲ್ಲಿ ಸ್ಪರ್ಧಿಯಾಗಿ ಹೆಸರಾಗಿದ್ದರು.

ಶೆಫಾಲಿಯ ವೈಯಕ್ತಿಕ ಜೀವನದಲ್ಲಿ ಕೂಡ ಹಲವಾರು ತಿರುವುಗಳು ಇದ್ದವು. ಮೊದಲ ಪತಿ ಹರ್ಮೀತ್ ಸಿಂಗ್ ಅವರೊಂದಿಗೆ ಸಂಬಂಧವಿಲ್ಲದೆ 2009ರಲ್ಲಿ ವಿಚ್ಛೇದನಗೊಂಡು, ನಂತರ 2014ರಲ್ಲಿ ನಟ ಪರಾಗ್ ತ್ಯಾಗಿ ಅವರನ್ನು ಮದುವೆಯಾದರು. ದಂಪತಿಯಾಗಿ ಸೌಹಾರ್ದಯುತ ಜೀವನ ನಡೆಸುತ್ತಿದ್ದರು.

ಶೆಫಾಲಿಯೊಂದಿಗೆ ಅಭಿನಯಿಸಿದ ಪುನೀತ್ ರಾಜ್‌ಕುಮಾರ್ ಹಾಗೂ ಬಿಗ್ ಬಾಸ್ ಗೆದ್ದ ಸಿದ್ದಾರ್ಥ್ ಶುಕ್ಲಾ ಇಬ್ಬರೂ ಕೂಡ ಹೃದಯಾಘಾತದಿಂದಲೇ ಅಗಲಿದ್ದಾರೆ ಎಂಬುದು ದುಃಖದ ಐರೋನಿ.

ಪ್ರಸ್ತುತ ಶೆಫಾಲಿಯ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕೂಪರ್ ಆಸ್ಪತ್ರೆಗೆ ಕಳುಹಿಸಲಾಗಿದ್ದು, ಸಾವಿನ ನಿಖರ ಕಾರಣ ತಿಳಿಯಲು ತನಿಖೆ ನಡೆಯುತ್ತಿದೆ. ಸಂಗೀತ ನಟನೆ ಕ್ಷೇತ್ರದ ಹಲವು ಗಣ್ಯರು ಸೇರಿದಂತೆ ಮಿಕಾ ಸಿಂಗ್ ಕೂಡ ಶೋಕ ವ್ಯಕ್ತಪಡಿಸಿದ್ದಾರೆ.