Back to Top

‘ದಿ ಡೆವಿಲ್’ ಶೂಟಿಂಗ್ ಮುಗಿಸಿ ಇಟಲಿ ಪ್ರವಾಸ ಕೈಗೊಂಡ ಶರ್ಮಿಳಾ ಮಾಂಡ್ರೆ – ಪ್ರವಾಸದ ಫೋಟೋಗಳು ವೈರಲ್!

SSTV Profile Logo SStv September 13, 2025
ಶರ್ಮಿಳಾ ಮಾಂಡ್ರೆಯ ಇಟಲಿ ಪ್ರವಾಸ
ಶರ್ಮಿಳಾ ಮಾಂಡ್ರೆಯ ಇಟಲಿ ಪ್ರವಾಸ

ಸ್ಯಾಂಡಲ್‌ವುಡ್ ನಟಿ ಶರ್ಮಿಳಾ ಮಾಂಡ್ರೆ ಅವರು ಸಿನಿಮಾದ ಚಟುವಟಿಕೆಗಳ ನಡುವೆ ಬಿಡುವು ಸಿಕ್ಕಾಗಲೆಲ್ಲ ಪ್ರವಾಸ ಕೈಗೊಳ್ಳುವುದು ಅಭ್ಯಾಸ. ಹಲವು ಬಾರಿ ಯೂರೋಪ್‌ನ ವಿವಿಧ ದೇಶಗಳನ್ನು ಸಂದರ್ಶಿಸಿರುವ ಶರ್ಮಿಳಾ, ಈ ಬಾರಿ ಇಟಲಿ ಪ್ರವಾಸ ಕೈಗೊಂಡಿದ್ದಾರೆ. ಏಳು ದಿನಗಳ ಈ ವಿಶೇಷ ಪ್ರವಾಸದಲ್ಲಿ ಅವರು ಗೆಳತಿಯರ ಜೊತೆ ಇಟಲಿಯ ಪ್ರಸಿದ್ಧ ಬೀಚುಗಳು ಹಾಗೂ ಪ್ರವಾಸಿ ತಾಣಗಳನ್ನು ಸವಿದಿದ್ದಾರೆ.

ಶರ್ಮಿಳಾ ಮಾಂಡ್ರೆ ಈ ಬಾರಿ ಅಮಾಲ್ಫಿಧಿ ಕರಾವಳಿ, ಪೊಸಿಟಾನೋ, ಕ್ಯಾಪ್ರಿ ಮೊದಲಾದ ಸುಂದರ ಕಡಲ ತೀರಗಳಿಗೆ ಭೇಟಿ ನೀಡಿದ್ದಾರೆ. ತಮ್ಮ ಅನುಭವವನ್ನು ಹಂಚಿಕೊಂಡ ಅವರು, “ಇಟಲಿಯ ಬೀಚುಗಳು ವಿಶೇಷ. ಸುತ್ತ ಬೆಟ್ಟ ಹಾಗು ಗುಡ್ಡಗಳಿಂದ ಆವೃತವಾಗಿರುವ ಈ ತೀರಗಳು, ಅದರ ಮೇಲೆ ಇರುವ ಬಣ್ಣ ಬಣ್ಣದ ಮನೆಗಳು ಬೀಚುಗಳನ್ನು ಇನ್ನಷ್ಟು ಅದ್ಭುತವಾಗಿ ತೋರಿಸುತ್ತವೆ. ಮರಳಿನ ತೀರಗಳಿಂದಲೂ, ಬೆಟ್ಟಗಳ ಮೇಲಿನಿಂದಲೂ ನೋಡಿದಾಗ, ಈ ಬೀಚುಗಳ ನೋಟ ಜಗತ್ತಿನ ಇನ್ನೂ ಯಾವ ಭಾಗದಲ್ಲೂ ಸಿಗುವುದಿಲ್ಲ” ಎಂದಿದ್ದಾರೆ.

ಬೀಚುಗಳ ಸೌಂದರ್ಯ ಸವಿದ ನಂತರ, ಶರ್ಮಿಳಾ ಅವರು ರೋಮ್ ಹಾಗೂ ಟಸ್ಕನಿ ಪ್ರದೇಶಗಳಿಗೂ ತೆರಳುತ್ತಿದ್ದಾರೆ. ಜಗತ್ತಿನ ಇತಿಹಾಸ ಪ್ರಸಿದ್ಧ ನಗರ ರೋಮ್‌ನ ಆಕರ್ಷಣೆ, ಹಾಗು ಟಸ್ಕನಿಯ ನೈಸರ್ಗಿಕ ಹಸಿರು ನೋಟ ಅವರನ್ನು ಹೆಚ್ಚು ಆಕರ್ಷಿಸಿದೆ. ಪ್ರವಾಸದ ಭಾಗವಾಗಿ, ಶರ್ಮಿಳಾ ಅವರು ಇಟಲಿಯ ಪ್ರಸಿದ್ಧ ಆಹಾರವನ್ನೂ ಸವಿದಿದ್ದಾರೆ. “ಇಲ್ಲಿ ಸಿಗುವ ಪಾಸ್ತಾ ನನಗೆ ತುಂಬಾ ಇಷ್ಟ. ಇಟಾಲಿಯನ್ ರೆಸ್ಟೊರೆಂಟ್‌ಗಳಲ್ಲಿ ಸಿಗುವ ಪಾಸ್ತಾದ ರುಚಿ ಜಗತ್ತಿನ ಬೇರೆಡೆ ಸಿಗುವುದೇ ಇಲ್ಲ. ಇದನ್ನು ಸವಿದಾಗ ನನಗೆ ಯಾವಾಗಲೂ ಹೊಸ ಅನುಭವವಾಗುತ್ತದೆ” ಎಂದು ಅವರು ನಗುಮುಖದಿಂದ ಹೇಳಿದ್ದಾರೆ.

ಶರ್ಮಿಳಾ ಮಾಂಡ್ರೆ ಸದ್ಯ ‘ದಿ ಡೆವಿಲ್’ ಸಿನಿಮಾ,ಮತ್ತು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರಿಗೆ ಜೋಡಿಯಾಗಿ ನಟಿಸುತ್ತಿದ್ದಾರೆ. ಚಿತ್ರದ ಮೊದಲ ಶೆಡ್ಯೂಲ್ ಮುಗಿಸಿದ ಬಳಿಕ, ಅವರು ಪ್ರವಾಸಕ್ಕೆ ತೆರಳಿದ್ದು, ಮುಂದಿನ ಹಂತದ ಚಿತ್ರೀಕರಣಕ್ಕೂ ಮೊದಲು ಈ ಪ್ರವಾಸ ಅವರನ್ನು ರಿಫ್ರೆಶ್ ಮಾಡಿದೆ.

ಒಟ್ಟಾರೆ, ಶರ್ಮಿಳಾ ಮಾಂಡ್ರೆಯ ಇಟಲಿ ಪ್ರವಾಸ ಪ್ರಕೃತಿ ಸೌಂದರ್ಯ, ಪಾಸ್ತಾದ ಸವಿರುಚಿ ಹಾಗೂ ಸ್ನೇಹಿತರ ಜತೆಗಿನ ಖುಷಿ ಎಲ್ಲವೂ ಒಂದರಲ್ಲಿ ಅನುಭವವಾಗಿ ಪರಿಣಮಿಸಿದೆ. ಅಭಿಮಾನಿಗಳು ಈಗ ಅವರ ‘ದಿ ಡೆವಿಲ್’ ಸಿನಿಮಾ ಬಿಡುಗಡೆಗೆ ಕಾದು ಕುಳಿತಿದ್ದಾರೆ.