“ದೊಡ್ಡ ಕೆಲಸಕ್ಕೆ ಹೆಚ್ಚು ಸಮಯ ಬೇಕು” – ‘ರಿಚರ್ಡ್ ಆಂಟೊನಿ’ ಬಗ್ಗೆ ಕೊನೆಗೂ ಬಾಯ್ಬಿಟ್ಟ ರಕ್ಷಿತ್ ಶೆಟ್ಟಿ


ಕನ್ನಡ ಚಿತ್ರರಂಗದಲ್ಲಿ ಶೆಟ್ಟಿ ಗ್ಯಾಂಗ್ ಎಂಬ ಹೆಸರು ಕೇಳಿದರೆ ಎಲ್ಲರಿಗೂ ನೆನಪಾಗುವ ಮೂವರು ಸ್ಟಾರ್‌ಗಳು – ರಿಷಬ್ ಶೆಟ್ಟಿ, ರಾಜ್ ಬಿ ಶೆಟ್ಟಿ ಮತ್ತು ರಕ್ಷಿತ್ ಶೆಟ್ಟಿ. ಈ ಮೂವರು ತಮ್ಮದೇ ಆದ ಶೈಲಿಯಲ್ಲಿ ಕನ್ನಡ ಸಿನಿರಂಗಕ್ಕೆ ಹೊಸ ನೀರು ತಂದಿದ್ದಾರೆ. ವಿಭಿನ್ನ ಪ್ರಯತ್ನಗಳು, ಹೊಸ ರೀತಿಯ ಕಥಾನಕಗಳು ಹಾಗೂ ಪ್ಯಾನ್-ಇಂಡಿಯಾ ಮಟ್ಟದ ಕ್ರೇಜ್ ಇವೆಲ್ಲವನ್ನು ತಂದುಕೊಟ್ಟವರು. ಆದರೆ ಈ ಪೈಕಿ ರಿಷಬ್ ಶೆಟ್ಟಿ ಮತ್ತು ರಾಜ್ ಬಿ ಶೆಟ್ಟಿ ನಿರಂತರವಾಗಿ ಸಕ್ರಿಯವಾಗಿದ್ದರೆ, ರಕ್ಷಿತ್ ಶೆಟ್ಟಿ ಮಾತ್ರ ಸ್ವಲ್ಪ ಮಂಕುಮನೆ ಆಗಿದ್ದಾರೆ ಎಂಬ ಅಭಿಪ್ರಾಯ ಅಭಿಮಾನಿಗಳಲ್ಲಿದೆ.
‘ಉಳಿದವರು ಕಂಡಂತೆ’ ಸಿನಿಮಾದಲ್ಲಿ ರಿಚ್ಚಿ ಪಾತ್ರದ ಮೂಲಕ ಗಮನ ಸೆಳೆದ ರಕ್ಷಿತ್, ಆ ಪಾತ್ರದ ಮುಂದುವರಿದ ಕಥೆಯನ್ನು ಹೇಳುವ ಉದ್ದೇಶದಿಂದ ‘ರಿಚರ್ಡ್ ಆಂಟೊನಿ’ ಚಿತ್ರ ಘೋಷಿಸಿದ್ದರು. ಈ ಘೋಷಣೆಗೆ ಈಗಾಗಲೇ ನಾಲ್ಕು ವರ್ಷಗಳಾದರೂ, ಚಿತ್ರ ಇನ್ನೂ ಮುಗಿಯದೇ ಇದ್ದದ್ದು ಅಭಿಮಾನಿಗಳಲ್ಲಿ ಕುತೂಹಲ ಹುಟ್ಟಿಸಿದೆ. ಚಿತ್ರವನ್ನು ಹೊಂಬಾಳೆ ಫಿಲಮ್ಸ್ ನಿರ್ಮಾಣ ಮಾಡಬೇಕೆಂದು ತಿಳಿದು ಬಂದಿತ್ತು. ಆದರೆ ಶೂಟಿಂಗ್ ಶುರುವಾಗಿಲ್ಲ, ಅಪ್‌ಡೇಟ್ ಒಂದೂ ಇಲ್ಲ. ಇದರಿಂದ ಸಿನಿಮಾ ನಿಂತೇ ಹೋಯ್ತು, ಹೊಂಬಾಳೆ ಹಿಂದೆ ಸರಿದಿದೆ ಎಂಬ ಮಾತುಗಳು ಹರಿದಾಡಲು ಆರಂಭವಾದವು.
ಇತ್ತೀಚೆಗೆ ಅಮೆರಿಕದಲ್ಲಿ ನಡೆದ ನಾವಿಕ ಕನ್ನಡಿಗ ಸಮ್ಮೇಳನದಲ್ಲಿ ಭಾಗವಹಿಸಿದ ರಕ್ಷಿತ್ ಶೆಟ್ಟಿಗೆ ಅಭಿಮಾನಿಗಳು ನೇರವಾಗಿ ‘ರಿಚರ್ಡ್ ಆಂಟೊನಿ ಯಾವಾಗ ಬರುತ್ತದೆ?’ ಎಂದು ಪ್ರಶ್ನಿಸಿದರು. ಅದಕ್ಕೆ ಉತ್ತರಿಸಿದ ರಕ್ಷಿತ್, “ಕೆಲವೊಮ್ಮೆ ದೊಡ್ಡ ಕೆಲಸ ಮಾಡುವಾಗ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ” ಎಂದು ಹೇಳಿದರು. ಅವರು ತಮ್ಮ ಭಾಷಣದಲ್ಲಿ ಕನ್ನಡ ಭಾಷೆಯ ಮಹತ್ವ, ಪ್ರೀತಿ ಹಾಗೂ ಚಿತ್ರರಂಗದ ಬಗ್ಗೆ ಹಂಚಿಕೊಂಡಿದ್ದರು. ಆದರೆ ಅಭಿಮಾನಿಗಳ ಮನಸ್ಸಿನಲ್ಲಿದ್ದ ಪ್ರಶ್ನೆ ಒಂದೇ – ರಿಚರ್ಡ್ ಆಂಟೊನಿ ಯಾವಾಗ?
ರಕ್ಷಿತ್ ಶೆಟ್ಟಿ ಹೇಳಿರುವ ಪ್ರಕಾರ, ಕತೆ ಬರೆಯುವ ಸಮಯದಲ್ಲಿಯೇ ಸ್ಕ್ರಿಪ್ಟ್ ರೆಡಿಯಾಗಿತ್ತು. ಆದರೆ ಬಳಿಕ ಹಲವಾರು ಬದಲಾವಣೆಗಳನ್ನು ಮಾಡಲಾಗಿದೆ. ಅಂತರಾಷ್ಟ್ರೀಯ ಗುಣಮಟ್ಟದಲ್ಲಿ ಸಿನಿಮಾ ನಿರ್ಮಿಸಲು ಪ್ರಯತ್ನಿಸಲಾಗುತ್ತಿದೆ. ಇದಕ್ಕಾಗಿಯೇ ಹೆಚ್ಚು ಸಮಯ ತೆಗೆದುಕೊಳ್ಳಲಾಗುತ್ತಿದೆ ಎಂಬ ಮಾತಿದೆ.
ರಿಷಬ್ ಶೆಟ್ಟಿಯ ‘ಕಾಂತಾರ’ ಮತ್ತು ರಾಜ್ ಬಿ ಶೆಟ್ಟಿಯ ‘ಗಾರ್ಡನ್ ಸಿಟಿ ಗ್ಯಾಂಗ್‌ಸ್ಟರ್ಸ್’ ಸಿನಿಮಾಗಳು ದೊಡ್ಡ ಮಟ್ಟದಲ್ಲಿ ಚರ್ಚೆಯಲ್ಲಿವೆ. ಈ ನಡುವೆ ರಕ್ಷಿತ್ ಶೆಟ್ಟಿ ಮೌನವಾಗಿರುವುದು ಅಭಿಮಾನಿಗಳಿಗೆ ನಿರಾಶೆ ತಂದರೂ, ಅವರ ಮೇಲೆ ಇರುವ ನಂಬಿಕೆ ಕಡಿಮೆಯಾಗಿಲ್ಲ. ‘ಸಪ್ತ ಸಾಗರದಾಚೆ ಎಲ್ಲೊ’ ಸಿನಿಮಾದಂತಹ ಕಲ್ಟ್ ಫಿಲ್ಮ್ ಕೊಟ್ಟಿರುವ ರಕ್ಷಿತ್, ಮತ್ತೆ ಅದೇ ಮಟ್ಟದ ಅಥವಾ ಅದಕ್ಕಿಂತ ಹೆಚ್ಚಾದ ಸಿನಿಮಾ ಕೊಡಬೇಕೆಂಬ ನಿರೀಕ್ಷೆಯಿದೆ.
ಒಟ್ಟಾರೆ, ‘ರಿಚರ್ಡ್ ಆಂಟೊನಿ’ ಸಿನಿಮಾ ಇನ್ನೂ ಸಮಯ ತೆಗೆದುಕೊಳ್ಳಬಹುದು. ಆದರೆ ರಕ್ಷಿತ್ ಶೆಟ್ಟಿಯ ಶೈಲಿ ನೋಡಿದರೆ, ಅದೊಂದು ವಿಶಿಷ್ಟ ಪ್ರಯತ್ನವಾಗಿಯೇ ಬರಬಹುದು ಅನ್ನೋ ಭರವಸೆ ಅಭಿಮಾನಿಗಳಲ್ಲಿದೆ.
Trending News
ಹೆಚ್ಚು ನೋಡಿ“ಇಂದು ನನ್ನ ಜೀವನದ ವಿಶೇಷ ದಿನ” – ಮೊದಲ ಸಿನಿಮಾ ಬಿಡುಗಡೆ ದಿನವನ್ನು ಆಚರಿಸಿದ ಕೆಂಡಸಂಪಿಗೆ ಹೀರೋ!
