ರೇಣುಕಾಸ್ವಾಮಿ ಪತ್ನಿ ಸಹನಾ ಕಣ್ಣೀರು: “ಅವರ ಜೀವ ಉಳಿಸಿ, ಉಳಿದುದನ್ನ ನಾನು ನೋಡಿಕೊಳ್ಳುತ್ತೇನೆ”


ದರ್ಶನ್, ಪವಿತ್ರಾ ಗೌಡ ಸೇರಿದಂತೆ 7 ಪ್ರಮುಖ ಆರೋಪಿಗಳ ಜಾಮೀನು ಸುಪ್ರೀಂ ಕೋರ್ಟ್ ಆದೇಶದೊಂದಿಗೆ ರದ್ದಾಗಿದ್ದು, ಅವರು ಮತ್ತೆ ಪರಪ್ಪನ ಅಗ್ರಹಾರ ಜೈಲಿಗೆ ಮರಳಿದ್ದಾರೆ. ಈ ತೀರ್ಪಿನಿಂದ ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗುವ ಭರವಸೆ ಮೂಡಿದೆ. ಆದರೆ ತಮ್ಮ ಆಪ್ತನನ್ನು ಕಳೆದುಕೊಂಡ ನೋವನ್ನು ಕುಟುಂಬದವರು ಇನ್ನೂ ಮರೆತಿಲ್ಲ.
ರೇಣುಕಾಸ್ವಾಮಿ ಹತ್ಯೆಯಾದ ಬಳಿಕ ಆತನ ಪತ್ನಿ ಸಹನಾ ಅನುಭವಿಸಿದ ನೋವು ಹೇಳಲಾರದಂತಹದ್ದು. ಗರ್ಭಿಣಿಯಾಗಿದ್ದ ಕಾರಣ ಪ್ರಾರಂಭದಲ್ಲಿ ಆಕೆಗೆ ಪತಿಯ ಸಾವಿನ ವಿಷಯ ತಿಳಿಸಲಿಲ್ಲ. “ಹೇಗಾದರೂ ಮಾಡಿ ಅವರ ಜೀವ ಉಳಿಸಿ, ಕೈ-ಕಾಲು ಹೋಗಿದ್ದರೂ ನಾನು ನೋಡಿಕೊಳ್ಳುತ್ತೇನೆ, ಕರೆದುಕೊಂಡು ಬನ್ನಿ” ಎಂದು ಆಕೆ ಕಣ್ಣೀರಿಟ್ಟಿದ್ದರು. ಆದರೆ ಅಂತಿಮವಾಗಿ ಪತಿಯ ಮೃತದೇಹವನ್ನು ಮಾತ್ರ ಕಾಣಬೇಕಾಯಿತು.
ರೇಣುಕಾಸ್ವಾಮಿ ಪೋಷಕರು ಆ ದಿನವನ್ನು ನೆನೆದು ಕಣ್ಣೀರಿಟ್ಟಿದ್ದಾರೆ. “ಸೊಸೆಗೆ ನಾವು ಕರೆದುಕೊಂಡು ಬರುತ್ತೇವೆ ಎಂದು ಹೇಳಿದ್ದೆವು, ಆದರೆ ಹೆಣವಾಗಿ ಬರ್ತಾರೆ ಅನ್ನೋದನ್ನು ಹೇಳಿರಲಿಲ್ಲ” ಎಂದು ಅಳಿದರು. ಆಸ್ಪತ್ರೆಗೆ ಕರೆದುಕೊಂಡು ಹೋಗಿದಾಗ ಶವವನ್ನು ಗುರುತಿಸುವುದೇ ಕಷ್ಟವಾಗಿತ್ತು. ಬಾಯಿ, ತುಟಿಗಳು ನಾಯಿಯಿಂದ ಕಚ್ಚಲ್ಪಟ್ಟಿದ್ದವು. ಮುಖದ ಎಲ್ಲಾ ಭಾಗಕ್ಕೂ ಹೊಡೆದ ಗಾಯಗಳಿದ್ದವು. ದೇಹ ಸಂಪೂರ್ಣ ಊದಿಕೊಂಡಿತ್ತು. ಕೊನೆಗೆ ಅವನ ಬಟ್ಟೆ, ವೇಷ-ಭೂಷಣಗಳ ಮೂಲಕವೇ ಮಗನನ್ನು ಗುರುತಿಸಬೇಕಾಯಿತು.
“ಮಗ ಮಾಡಿದ ತಪ್ಪನ್ನು ನಾನು ಸಮರ್ಥನೆ ಮಾಡಿಕೊಳ್ಳುವುದಿಲ್ಲ. ಆದರೆ ತಪ್ಪಿನ ಮಟ್ಟಕ್ಕೆ ತಕ್ಕ ಶಿಕ್ಷೆ ಕೊಡಬಹುದಿತ್ತು. ಪವಿತ್ರಾ ಗೌಡ ಬ್ಲಾಕ್ ಮಾಡಬಹುದಿತ್ತು, ಪೊಲೀಸರಿಗೆ ದೂರು ಕೊಡಬಹುದಿತ್ತು. ಅವರು ಅಷ್ಟು ದೊಡ್ಡವರು, ಪ್ರಾಣ ತೆಗೆದು ಹಾಕಬೇಕಾಗಿತ್ತಾ? 8-10 ಜನ ಸೇರಿ ಒಬ್ಬನನ್ನು ಕೊಲ್ಲಬೇಕಿತ್ತಾ?” ಎಂದು ತಂದೆ ಕಾಶಿನಾಥಯ್ಯ ಕಣ್ಣೀರಿಟ್ಟಿದ್ದಾರೆ.
ಈಗ ಸುಪ್ರೀಂ ಕೋರ್ಟ್ ತೀರ್ಪಿನಿಂದ ರೇಣುಕಾಸ್ವಾಮಿ ಕುಟುಂಬಕ್ಕೆ ಸ್ವಲ್ಪ ಧೈರ್ಯ ಸಿಕ್ಕಿದೆ. ಆದರೆ ತಮ್ಮ ಮಗನನ್ನು ಕಳೆದುಕೊಂಡ ನೋವಿನ ಬದಲು ಬರುವುದಿಲ್ಲ. ಪತ್ನಿ, ತಾಯಿ-ತಂದೆ ಹಾಗೂ ಕುಟುಂಬದವರು ಇನ್ನೂ ನ್ಯಾಯಕ್ಕಾಗಿ ಕಾದಿದ್ದಾರೆ. ರೇಣುಕಾಸ್ವಾಮಿ ಹತ್ಯೆ ಪ್ರಕರಣ ಕನ್ನಡ ಚಿತ್ರರಂಗವನ್ನೇ ಅಲ್ಲಾಡಿಸಿದ್ದು, ಈಗ ಕುಟುಂಬಕ್ಕೆ ನ್ಯಾಯ ದೊರೆಯುತ್ತದೆಯೇ ಎಂಬ ಪ್ರಶ್ನೆಗೆ ಎಲ್ಲರ ಕಣ್ಣು ಕೋರ್ಟ್ ತೀರ್ಪಿನತ್ತ ನೆಟ್ಟಿದೆ.