‘ನಮ್ಮ ದೇವರ ಗುಡಿ ನೆಲಸಮ’; ರವಿ ಶ್ರೀವತ್ಸ ಕಣ್ಣೀರು ಹಾಕಿದ ವಿಡಿಯೋ ವೈರಲ್


ವರಮಹಾಲಕ್ಷ್ಮಿ ಹಬ್ಬದ ದಿನವೇ ಕನ್ನಡ ಸಿನಿರಂಗಕ್ಕೆ ಶೋಕ ತಂದ ಸುದ್ದಿಯೊಂದು ಹೊರಬಂದಿದೆ. ಬೆಂಗಳೂರಿನ ಅಭಿಮಾನ್ ಸ್ಟುಡಿಯೋದಲ್ಲಿದ್ದ ನಟ ಡಾ. ವಿಷ್ಣುವರ್ಧನ್ ಅವರ ಸ್ಮಾರಕವನ್ನು ರಾತ್ರೋರಾತ್ರಿ ನೆಲಸಮ ಮಾಡಲಾಗಿದೆ. ಈ ಸ್ಥಳವು ದಶಕಗಳಿಂದ ವಿಷ್ಣುವರ್ಧನ್ ಅಭಿಮಾನಿಗಳಿಗೆ ಭಾವನಾತ್ಮಕ ನಂಟು ಹೊಂದಿದ್ದ ಜಾಗ. ಈಗ ಆ ನೆಲವೇ ಸಮಾಧಿಯಾಗಿರುವುದಕ್ಕೆ ಅಭಿಮಾನಿಗಳು ಮತ್ತು ಹತ್ತಿರದವರು ತೀವ್ರ ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ನಿರ್ದೇಶಕ ರವಿ ಶ್ರೀವತ್ಸ ಅವರು ಆಗಸ್ಟ್ 8ರ ಬೆಳಿಗ್ಗೆ ಈ ಸ್ಥಳಕ್ಕೆ ಭೇಟಿ ನೀಡಿ, ಸ್ಮಾರಕ ತೆರವುಗೊಳಿಸಿರುವುದನ್ನು ಕಂಡು ಕಣ್ಣೀರಿಟ್ಟಿದ್ದಾರೆ. ಫೇಸ್‌ಬುಕ್ ಲೈವ್ ಮೂಲಕ ತಮ್ಮ ನೋವನ್ನು ಹಂಚಿಕೊಂಡ ಅವರು, “ನಮ್ಮ ದೇವರ ಗುಡಿಯನ್ನು ನೆಲಸಮ ಮಾಡಿದ್ದಾರೆ. ನಮ್ಮ ಯಜಮಾನರು ಮಲಗಿದ್ದ ಜಾಗ ಈಗ ಬರೀ ಮಣ್ಣಾಗಿದೆ. ಗೋಪುರವಿದ್ದ ಪುಟ್ಟ ಗುಡಿಯನ್ನು ಕೂಡಾ ಕಿತ್ತುಹಾಕಿದ್ದಾರೆ” ಎಂದು ಭಾವೋದ್ರಿಕ್ತರಾಗಿ ಹೇಳಿದ್ದಾರೆ. ಅವರು ಇನ್ನೂ ಹೇಳಿದರು: “ಇವತ್ತು ನಾವು ನಿಜವಾಗಿಯೂ ನಮ್ಮ ಯಜಮಾನರನ್ನು ಕಳೆದುಕೊಂಡ್ವಿ. ಯಾರೂ ಇಲ್ಲದಂತೆ ನಮ್ಮನ್ನು ಅನಾಥರನ್ನಾಗಿ ಮಾಡಿದ್ದಾರೆ. ಅಭಿಮಾನಿಗಳಿಗೆ ಪ್ರವೇಶ ಕೊಡುತ್ತಿಲ್ಲ, ಗೇಟ್ ಮುಚ್ಚಿದ್ದಾರೆ, ಪೊಲೀಸರು ಸರ್ಪಗಾವಲು ಹಾಕಿಕೊಂಡು ಕೂತಿದ್ದಾರೆ” ಎಂದು ಆರೋಪಿಸಿದ್ದಾರೆ.
ವಿಷ್ಣುವರ್ಧನ್ ಅವರ ಸಮಾಧಿ ಮೈಸೂರಿನಲ್ಲಿ ನಿರ್ಮಾಣಗೊಂಡಿದ್ದರೂ, ಅಂತ್ಯಕ್ರಿಯೆ ನಡೆದ ಅಭಿಮಾನ್ ಸ್ಟುಡಿಯೋ ಸ್ಥಳವು ಅಭಿಮಾನಿಗಳ ಮನದಲ್ಲಿ ವಿಶೇಷ ಸ್ಥಾನ ಪಡೆದಿತ್ತು. ಪ್ರತಿ ವರ್ಷ ಸಾವಿರಾರು ಮಂದಿ ಈ ಸ್ಥಳಕ್ಕೆ ಬಂದು ತಮ್ಮ ನೆಚ್ಚಿನ ನಟನಿಗೆ ಗೌರವ ಸಲ್ಲಿಸುತ್ತಿದ್ದರು. ಈಗ ಆ ಸ್ಥಳವೇ ಅಸ್ತಿತ್ವ ಕಳೆದುಕೊಂಡಿರುವುದು ಅವರಿಗೆ ಅಘಾತ ತಂದಿದೆ. ಲೈವ್ ಪ್ರಸಾರ ಮಾಡುವಾಗಲೇ ರವಿ ಶ್ರೀವತ್ಸರನ್ನು ಪೊಲೀಸರು ತಡೆದು ಸ್ಥಳದಿಂದ ಕರೆದುಕೊಂಡು ಹೋಗಿದ್ದಾರೆ. “ನನ್ನನ್ನು ಹಿಡಿದು ಎಳೆಯುತ್ತಿದ್ದಾರೆ, ಇದು ಪೊಲೀಸ್ ದೌರ್ಜನ್ಯ” ಎಂದು ಅವರು ಆರೋಪಿಸಿದರು.
ಈ ಘಟನೆ ನಂತರ, ಸಾಮಾಜಿಕ ಜಾಲತಾಣಗಳಲ್ಲಿ ವಿಷ್ಣುವರ್ಧನ್ ಅಭಿಮಾನಿಗಳು ತೀವ್ರ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದು, “ಅಭಿಮಾನಿಗಳ ಭಾವನೆಗಳಿಗೆ ಗೌರವ ಕೊಡಬೇಕು” ಎಂದು ಆಗ್ರಹಿಸುತ್ತಿದ್ದಾರೆ. ವಿಷ್ಣುವರ್ಧನ್ ಸ್ಮಾರಕ ನೆಲಸಮ ಮಾಡಿದ ಹಿನ್ನೆಲೆ ಮತ್ತು ಅದರ ಹಿಂದಿರುವ ಕಾರಣಗಳ ಕುರಿತು ಅಧಿಕೃತ ಮಾಹಿತಿ ಇನ್ನೂ ಹೊರಬಂದಿಲ್ಲ. ಆದರೆ, ಈ ಘಟನೆ ಕನ್ನಡ ಸಿನಿರಂಗ ಮತ್ತು ಅಭಿಮಾನಿಗಳ ಹೃದಯದಲ್ಲಿ ಆಳವಾದ ನೋವನ್ನು ಉಂಟುಮಾಡಿದೆ.