Back to Top

ಧರ್ಮಸ್ಥಳದಲ್ಲಿ ಪತ್ರಕರ್ತರ ಮೇಲೆ ಹಲ್ಲೆ: ರಜತ್ ಮತ್ತು ಪ್ರಕಾಶ್ ರಾಜ್ ತೀವ್ರ ಖಂಡನೆ

SSTV Profile Logo SStv August 8, 2025
ರಜತ್ ಮತ್ತು ಪ್ರಕಾಶ್ ರಾಜ್ ತೀವ್ರ ಖಂಡನೆ
ರಜತ್ ಮತ್ತು ಪ್ರಕಾಶ್ ರಾಜ್ ತೀವ್ರ ಖಂಡನೆ

ಸೌಜನ್ಯ ಹತ್ಯೆ ಪ್ರಕರಣದ ತನಿಖೆ ಹಿನ್ನೆಲೆ, ಧರ್ಮಸ್ಥಳದಲ್ಲಿ ಕಳೆದ ಕೆಲವು ದಿನಗಳಿಂದ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಮೃತದೇಹ ಹುಡುಕುವ ಕಾರ್ಯ ನಡೆಯುತ್ತಿರುವುದರಿಂದ, ಹಲವು ಮಾಧ್ಯಮ ಪ್ರತಿನಿಧಿಗಳು ಮತ್ತು ಯೂಟ್ಯೂಬರ್‌ಗಳು ಸ್ಥಳದಲ್ಲೇ ತಂಗಿದ್ದು ವರದಿಗಾರಿಕೆ ಮಾಡುತ್ತಿದ್ದರು. ಆದರೆ ಆಗಸ್ಟ್ 6ರಂದು ಈ ಶಾಂತ ವಾತಾವರಣಕ್ಕೆ ಕಳಂಕ ತಂದುಕೊಂಡಂತಹ ಘಟನೆ ನಡೆದಿದೆ ಪತ್ರಕರ್ತರು ಹಾಗೂ ಯೂಟ್ಯೂಬರ್‌ಗಳ ಮೇಲೆ ಕಿಡಿಗೇಡಿಗಳಿಂದ ಹಲ್ಲೆ.

ಮಾಜಿ ಬಿಗ್ ಬಾಸ್ ಸ್ಪರ್ಧಿ ರಜತ್ ಕಿಶನ್ ಧರ್ಮಸ್ಥಳಕ್ಕೆ ಭೇಟಿ ನೀಡಿ, ನಂತರ ಸೌಜನ್ಯ ಅವರ ತಾಯಿಯನ್ನು ಭೇಟಿಯಾಗಲು ಅವರ ಮನೆಗೆ ತೆರಳಿದರು. ಅಲ್ಲಿಂದ ಹಿಂತಿರುಗುವಾಗ, ಕೆಲ ಯೂಟ್ಯೂಬರ್‌ಗಳು ದಾರಿಯಲ್ಲೇ ಕಾರು ನಿಲ್ಲಿಸಿ ರಜತ್ ಅವರಿಂದ ಪ್ರತಿಕ್ರಿಯೆ ಪಡೆಯಲು ಮುಂದಾದರು. ಈ ವೇಳೆ ಏಕಾಏಕಿ ಕೆಲ ಅನಾಮಿಕರು ಬಂದು ಪತ್ರಕರ್ತರು ಹಾಗೂ ಯೂಟ್ಯೂಬರ್‌ಗಳ ಮೇಲೆ ಹಲ್ಲೆ ನಡೆಸಿದರು. "ಕೈಗೆ ಸಿಕ್ಕಿದ್ದನ್ನು ಹಿಡಿದು ಹೊಡೆಯಲು ಶುರುಮಾಡಿದರು" ಎಂದು ರಜತ್ ಮಾಧ್ಯಮಗಳಿಗೆ ವಿವರಿಸಿದ್ದಾರೆ.

ರಜತ್ ಅವರು ಈ ಹಲ್ಲೆಯನ್ನು ಖಂಡಿಸಿ, "ನಾನು ಪ್ರತಿಕ್ರಿಯೆ ನೀಡುತ್ತಿದ್ದ ವೇಳೆ ಏಕಾಏಕಿ ಜನರು ಬಂದು ಹಲ್ಲೆಗೆ ಮುಂದಾದರು. ಇದು ಸಂಪೂರ್ಣ ಅನಿರೀಕ್ಷಿತ" ಎಂದು ಹೇಳಿದ್ದಾರೆ. ಅವರು ಈ ಘಟನೆ ಬಗ್ಗೆ ಪೊಲೀಸರಿಗೆ ದೂರು ನೀಡಬೇಕೆಂಬ ಅಭಿಪ್ರಾಯವನ್ನೂ ಹಂಚಿಕೊಂಡಿದ್ದಾರೆ.

ಬಹುಭಾಷಾ ನಟ ಪ್ರಕಾಶ್ ರಾಜ್, ಎಕ್ಸ್ (ಹಳೆಯ ಟ್ವಿಟ್ಟರ್) ನಲ್ಲಿ ವೀಡಿಯೊ ಪೋಸ್ಟ್ ಮಾಡುವ ಮೂಲಕ ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ. “ಧರ್ಮಸ್ಥಳದಲ್ಲಿ ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದ ಮಾಧ್ಯಮ ಮಿತ್ರರ ಮೇಲಿನ ಹಲ್ಲೆ ಖಂಡನಾರ್ಹ. ಇಂತಹ ಗೂಂಡಾಗಳಿಂದಲೇ ಭಕ್ತಾದಿಗಳು ನಂಬುವ ಧರ್ಮಸ್ಥಳಕ್ಕೆ ಕಳಂಕ ಬರುತ್ತಿದೆ. ಸೌಜನ್ಯಾಳ ಹತ್ಯೆಗೆ ನ್ಯಾಯ ಕೇಳಿದರೆ ಇವರಿಗೇಕೆ ಕೋಪ? ದಯವಿಟ್ಟು ಬಂಧಿಸಿ, ಸತ್ಯ ಹೊರತನ್ನಿ.” “ನ್ಯಾಯ ಕೇಳುವುದು ನಮ್ಮ ಕರ್ತವ್ಯ ಮತ್ತು ಹಕ್ಕು”, "ಇಂತಹ ಗೂಂಡಾಗಳಿಂದಲೇ ಧರ್ಮಸ್ಥಳಕ್ಕೆ ಕೆಟ್ಟ ಹೆಸರು ಬರುತ್ತಿದೆ", "ಇವರ ಹಿಂದೆ ಯಾರು? ಯಾರ ಆದೇಶಕ್ಕೆ ಹೊಡೆಸುತ್ತಿದ್ದಾರೆ? ಎಂಬ ಪ್ರಶ್ನೆಗಳಿಗೆ ಉತ್ತರ ಬೇಕು"

ಈ ಘಟನೆ ಕೇವಲ ಪತ್ರಕರ್ತರ ಮೇಲೆ ಹಲ್ಲೆ ಅಲ್ಲ ಇದು ಅಭಿವ್ಯಕ್ತಿಯ ಸ್ವಾತಂತ್ರ್ಯಕ್ಕೆ ನೇರ ದಾಳಿ. ಸಾರ್ವಜನಿಕರು ಸೌಜನ್ಯ ಹತ್ಯೆಯ ಸತ್ಯ ಹೊರಬರಲಿ ಎಂದು ಬಯಸುತ್ತಿರುವಾಗ, ಇಂತಹ ದೌರ್ಜನ್ಯಗಳು ಶಂಕೆಗಳನ್ನು ಇನ್ನಷ್ಟು ಗಾಢಗೊಳಿಸುತ್ತವೆ.
ಪ್ರಕಾಶ್ ರಾಜ್ ಹೇಳಿದಂತೆ, ಗೂಂಡಾಗಳನ್ನು ತಕ್ಷಣ ಬಂಧಿಸಿ, ಅವರ ಹಿಂದೆ ಯಾರು ಇದ್ದಾರೆ ಎಂಬುದು ಪತ್ತೆಯಾಗಬೇಕು.

ಧರ್ಮಸ್ಥಳವು ಭಕ್ತಿಯ, ಶಾಂತಿಯ, ಮತ್ತು ಧರ್ಮದ ಸಂಕೇತ. ಆದರೆ ಇತ್ತೀಚಿನ ಘಟನೆಗಳು ಆ ಸ್ಥಳದ ಪ್ರತಿಷ್ಠೆಗೆ ಧಕ್ಕೆಯಾಗಿದೆ. ಪತ್ರಕರ್ತರು ಮತ್ತು ಯೂಟ್ಯೂಬರ್‌ಗಳು ತಮ್ಮ ಕರ್ತವ್ಯ ನಿರ್ವಹಿಸುವಾಗ ಸುರಕ್ಷಿತ ವಾತಾವರಣ ದೊರಕುವುದು ಅತೀ ಅಗತ್ಯ. ಜನರು ನ್ಯಾಯ ಕೇಳುವ ಹಕ್ಕನ್ನು ಯಾರೂ ಹರಣ ಮಾಡಬಾರದು ಎಂಬುದನ್ನು ಈ ಘಟನೆ ಮತ್ತೊಮ್ಮೆ ನೆನಪಿಸುತ್ತದೆ.