Back to Top

ರೇಣುಕಾಸ್ವಾಮಿ ಕೇಸ್: "ಪವಿತ್ರಾ ಗೌಡ ತಪ್ಪು ಮಾಡಿಲ್ಲ, ನಿರಪರಾಧಿ" ಪವಿತ್ರಾ ಪರ ವಾದಿಸಿದ ಬಾಲನ್

SSTV Profile Logo SStv August 22, 2025
ಪವಿತ್ರಾ ಗೌಡ ಪರವಾಗಿ ಮತ್ತೆ ಬೇಲ್ ಅಪ್ಲಿಕೇಷನ್ ಹಾಕಲಿರುವ ಬಾಲನ್
ಪವಿತ್ರಾ ಗೌಡ ಪರವಾಗಿ ಮತ್ತೆ ಬೇಲ್ ಅಪ್ಲಿಕೇಷನ್ ಹಾಕಲಿರುವ ಬಾಲನ್

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್, ಪವಿತ್ರಾ ಗೌಡ ಸೇರಿ ಏಳು ಮಂದಿಗೆ ಇತ್ತೀಚೆಗೆ ಸುಪ್ರೀಂ ಕೋರ್ಟ್ ಜಾಮೀನು ವಜಾ ಮಾಡಿತ್ತು. ಈ ಬೆಳವಣಿಗೆ ಪ್ರಕರಣವನ್ನು ಮತ್ತಷ್ಟು ತೀವ್ರಗೊಳಿಸಿದರೆ, ಇದೀಗ ಪವಿತ್ರಾ ಗೌಡ ಪರವಾಗಿ ಹಿರಿಯ ವಕೀಲ ಬಾಲನ್ ಅವರು ಮುಂದಾಗಿದ್ದು, “ಪವಿತ್ರಾ ಗೌಡ ತಪ್ಪು ಮಾಡಿಲ್ಲ, ಅವರು ನಿರಪರಾಧಿ” ಎಂದು ಸ್ಪಷ್ಟಪಡಿಸಿದ್ದಾರೆ.

ಬಾಲನ್ ಅವರು ಮಾಧ್ಯಮಗಳ ಜೊತೆ ಮಾತನಾಡಿ, ಚಾರ್ಜ್‌ಶೀಟ್‌ನಲ್ಲಿ ಪವಿತ್ರಾ ಗೌಡ ವಿರುದ್ಧ ಯಾವುದೇ ದೃಢವಾದ ಸಾಕ್ಷ್ಯಗಳಿಲ್ಲ ಎಂದು ತಿಳಿಸಿದ್ದಾರೆ. “ನಾನು ಇಡೀ ಚಾರ್ಜ್‌ಶೀಟ್ ಓದಿದ್ದೇನೆ. ಪವಿತ್ರಾ ಗೌಡ ಅವರನ್ನು ನೇರವಾಗಿ ಕನೆಕ್ಟ್ ಮಾಡುವಂತಹ ಸಿಸಿಟಿವಿ ದೃಶ್ಯಗಳೂ ಇಲ್ಲ, ಮೊಬೈಲ್ ಉಪಯೋಗದ ದಾಖಲೆಗಳೂ ಇಲ್ಲ. ಕಣ್ಣಾರೆ ಕಂಡ ಸಾಕ್ಷಿಗಳು ಯಾರೂ ಇಲ್ಲ. ಪಬ್ಲಿಕ್ ಒತ್ತಡದಿಂದಲೇ ಚಾರ್ಜ್‌ಶೀಟ್ ಹಾಕಲಾಗಿದೆ” ಎಂದು ಹೇಳಿದ್ದಾರೆ.

ಅವರ ಮಾತುಗಳ ಪ್ರಕಾರ, ಸುಪ್ರೀಂ ಕೋರ್ಟ್ ತೀರ್ಪು ಅಂತಿಮವಾದರೂ, ಟ್ರಯಲ್ ಪ್ರಕ್ರಿಯೆ ಆರಂಭವಾದ ಮೇಲೆ ಪವಿತ್ರಾ ಗೌಡ ನಿರಪರಾಧಿಯಾಗಿರುವುದು ಸ್ಪಷ್ಟವಾಗಲಿದೆ. ಆಗಸ್ಟ್ 23ರಂದು ಕೇಸ್ ವಿಚಾರಣೆ ನಿಗದಿಯಾಗಿದ್ದು, ಆ ದಿನ ಪವಿತ್ರಾ ಗೌಡ ಪರವಾಗಿ ಹೊಸ ಬೇಲ್ ಅಪ್ಲಿಕೇಶನ್ ಹಾಕುವುದಾಗಿ ಬಾಲನ್ ಹೇಳಿದ್ದಾರೆ. “ಒಂದು ಟೆಕ್ನಿಕಲ್ ಗ್ರೌಂಡ್ ಇದೆ. ಅದನ್ನು ಕೋರ್ಟ್ ಮುಂದೆ ಇಡುತ್ತೇನೆ. ಹೈಕೋರ್ಟ್, ಸುಪ್ರೀಂ ಕೋರ್ಟ್ ಆದೇಶಕ್ಕೂ ಇದಕ್ಕೂ ಸಂಬಂಧ ಇಲ್ಲ” ಎಂದು ಅವರು ತಿಳಿಸಿದರು.

ಇದೇ ಸಂದರ್ಭದಲ್ಲಿ, “ಬೇಲ್ ಎಂದರೆ ಬಿಡುಗಡೆ ಅಲ್ಲ. ಅದು ಕೇವಲ ಬಂಧನದಲ್ಲಿರುವವರು ಹೊರಗಡೆ ಇದ್ದು ಕೇಸ್ ಎದುರಿಸಲು ಅವಕಾಶ ಕೊಡುವುದು ಮಾತ್ರ. ಈ ಕೇಸ್ ಸೆಕ್ಷನ್ 302 ಅಡಿ ದಾಖಲಾಗಿದೆಯಾದರೂ, ಕೊಲೆ ಮಾಡುವ ಉದ್ದೇಶ ಇರಲಿಲ್ಲ. ಹೊಡೆದಿದ್ದಕ್ಕೆ ವ್ಯಕ್ತಿ ಸತ್ತು ಹೋಗಿದ್ದಾನೆ ಎಂಬುದು ಪ್ರಕರಣ. ಆದರೆ ಹೊಡೆದಿದ್ದು ಕಣ್ಣಾರೆ ಕಂಡ ಸಾಕ್ಷಿ ಇಲ್ಲ” ಎಂದು ಬಾಲನ್ ಸ್ಪಷ್ಟಪಡಿಸಿದರು.

ಸದ್ಯ, 233 ಸಾಕ್ಷಿಗಳು ಈ ಪ್ರಕರಣದಲ್ಲಿ ಪಟ್ಟಿ ಆಗಿದ್ದು, ಇದರಲ್ಲಿ ಎಫ್‌ಎಸ್‌ಎಲ್ ಹಾಗೂ ಪೊಲೀಸ್ ಅಧಿಕಾರಿಗಳೂ ಸೇರಿದ್ದಾರೆ. ವಿಚಾರಣೆ ನಡೆಯಲು ಸಮಯ ಬೇಕಾಗುವುದಾದರೂ, “ಪವಿತ್ರಾ ಗೌಡ ತಪ್ಪು ಮಾಡಿಲ್ಲ, ಅವರು ಖಂಡಿತ ನಿರಪರಾಧಿಯಾಗಿ ಹೊರಗೆ ಬರ್ತಾರೆ” ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪವಿತ್ರಾ ಗೌಡ ಕುರಿತಂತೆ ಬಾಲನ್ ನೀಡಿದ ಈ ಹೇಳಿಕೆಗಳು ಪ್ರಕರಣಕ್ಕೆ ಹೊಸ ತಿರುವು ನೀಡಿದ್ದು, ಮುಂದಿನ ವಿಚಾರಣೆಗೆ ಎಲ್ಲರ ಗಮನ ಸೆಳೆಯುತ್ತಿದೆ.